ಭಾನುವಾರ, ಸೆಪ್ಟೆಂಬರ್ 26, 2021
23 °C
ಬಾಲಕಿಯವ ವಯಸ್ಸಿನ ಗೊಂದಲ; ಮಕ್ಕಳ ಕಲ್ಯಾಣ ಸಮಿತಿ ಆದೇಶ ಉಲ್ಲಂಘಿಸಿದ ಪೊಲೀಸರು

ಬಾಲ್ಯ ವಿವಾಹ: ಸಮಗ್ರ ತನಿಖೆಗೆ ಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತಾಲ್ಲೂಕಿನ ಕೆರಗೋಡು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಬಾಲ್ಯವಿವಾಹ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಬಾಲಕಿಯ ತಂದೆ ನೀಡಿರುವ ದೂರು ಪುರಸ್ಕರಿಸಿದ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ಅವರು 10 ಮಂದಿ ಆರೋಪಿಗಳ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ, ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿ ಪ್ರಕರಣ ದಾಖಲು ಮಾಡಿಕೊಂಡು ಸೂಕ್ತ ತನಿಖೆ ನಡೆಸಬೇಕು ಎಂದು ಕೆರಗೋಡು ಠಾಣೆ ಪೊಲೀಸರಿಗೆ ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಬಾಲಕಿಯ ತಂದೆ ಚಂದ್ರಶೇಖರ್‌ ಆ.27ರಂದು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ಕೆರಗೋಡು ಠಾಣೆಗೆ ಮಾಹಿತಿ ನೀಡಿದ್ದರು. ಆ.28ರಂದು ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಯುವತಿ ಯುವಕನೊಬ್ಬನ ಜೊತೆ ವಿವಾಹ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ದೂರುದಾರರಿಗೆ ಮಾಹಿತಿ ನೀಡಿದ್ದರು.

ಇದರಿಂದ ಆತಂಕಗೊಂಡ ಚಂದ್ರಶೇಖರ್‌ ಮಗಳಿಗೆ 18 ವರ್ಷ ತುಂಬಿಲ್ಲ, ಇದು ಬಾಲ್ಯವಿವಾಹವಾಗಿದ್ದು ಆರೋಪಿಗಳ ವಿರುದ್ಧ ಅಪಹರಣ ದೂರು ದಾಖಲಿಸಬೇಕು ಎಂದು ಕೋರಿದರು. ಆ ಕುರಿತ ಜನ್ಮ ಪ್ರಮಾಣ ಪತ್ರವನ್ನು ಪೊಲೀಸರ ಮುಂದೆ ಹಾಜರುಪಡಿಸಿದರು. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಪ್ರಕಾರ ಬಾಲಕಿಗೆ 18 ವರ್ಷ ತುಂಬಿದೆ ಎಂದು ತಿಳಿಸಿ  ಅಪಹರಣ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ನಂತರ, ಯುವತಿಯ ತಂದೆ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯುಸಿ) ದೂರು ದಾಖಲಿಸಿದರು.

ಬಾಲಕಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ್ದು ಮೈಸೂರು ಮಹಾನಗರ ಪಾಲಿಕೆ ನೀಡಿರುವ ಜನ್ಮಪ್ರಮಾಣ ಪತ್ರವನ್ನು ಚಂದ್ರಶೇಖರ್‌ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಸಿಡಬ್ಲ್ಯುಸಿ, ಮೂಲ ದಾಖಲಾತಿ ಅನ್ವಯ ಬಾಲಕಿಗೆ 18 ವರ್ಷ ತುಂಬದ ಕಾರಣ ವಿವಿಧ ಕಾಯ್ದೆ ಉಲ್ಲಂಘಿಸಿ ಬಾಲ್ಯವಿವಾಹ ನೆರವೇರಿಸಲಾಗಿದೆ. ಹೀಗಾಗಿ ಆರೋಪಿಗಳ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಅಡಿ ಪ್ರಕರಣ ದಾಖಲು ಮಾಡಬೇಕು ಎಂದು ಆದೇಶಿಸಿತ್ತು. ಅದರಂತೆ ಬಾಲಕಿಯನ್ನು ಬಾಲಕಿಯರ ಬಾಲಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು.

ಪೊಲೀಸರ ವಿರುದ್ಧ ಆರೋಪ: ಬಾಲ್ಯವಿವಾಹ ಪ್ರಕರಣ ದಾಖಲು ಮಾಡದ ಪೊಲೀಸರು ಬಾಲಮಂದಿರದಲ್ಲಿದ್ದ ಬಾಲಕಿಯನ್ನು ವಿಚಾರಣೆ ನೆಪದಲ್ಲಿ ಕರೆದೊಯ್ದು ಮದುವೆ ಮಾಡಿಕೊಂಡಿದ್ದ ಆರೋಪಿಗಳ ಜೊತೆ ಕಳುಹಿಸಿದ್ದಾರೆ. ಸಮಿತಿಯ ಆದೇಶವನ್ನು ಪೊಲೀಸರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿಯ ತಂದೆ ಕೆರಗೋಡು ಪೊಲೀಸರ ವಿರುದ್ಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಜನ್ಮಪ್ರಮಾಣ ಪತ್ರವೇ ಅಂತಿಮ

‘ಯಾವುದೇ ವ್ಯಕ್ತಿಯ ವಯಸ್ಸಿನ ನಿರ್ಧಾರಕ್ಕೆ ಆತನ ಜನ್ಮಪ್ರಮಾಣ ಪತ್ರವೇ ಅಂತಿಮ. ಈ ಬಗ್ಗೆ ಬಾಲ ನ್ಯಾಯ ಕಾಯ್ದೆಯಲ್ಲಿ ಸ್ಪಷ್ಟತೆ ಇದೆ, ಜೊತೆಗೆ ರಾಜ್ಯ ಗೆಜೆಟ್‌ ಪ್ರಕಣೆಯಲ್ಲೂ ಇದೇ ನಿರ್ದೇಶನವಿದೆ’ ಎಂದು ಅರ್ಜಿದಾರರ ವಕೀಲ ಬಿ.ಟಿ.ವಿಶ್ವನಾಥ್‌ ತಿಳಿಸಿದರು.

‘ಬಾಲ್ಯ ವಿವಾಹದಂತಹ ಪ್ರಕರಣದಲ್ಲಿ ಜನ್ಮಪ್ರಮಾಣಪತ್ರವನ್ನೇ ಪರಿಗಣಿಸಬೇಕು. ಜನ್ಮ ಪ್ರಮಾಣ ಪತ್ರ ಇಲ್ಲದಿದ್ದಾಗ ಮಾತ್ರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಪರಿಗಣಿಸಬಹುದು. ಸಿಡಬ್ಲ್ಯುಸಿ ಹಾಗೂ ಜಿಲ್ಲಾ ನ್ಯಾಯಾಲಯವು ಜನ್ಮ ಪ್ರಮಾಣ ಪತ್ರ ಪರಿಗಣಿಸಿಯೇ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಪೊಲೀಸರು ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.

‘ಮಂಡ್ಯ ಜಿಲ್ಲೆಯು ಬಾಲ್ಯವಿವಾಹದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ತಲುಪುವ ಸ್ಥಿತಿ ಇದೆ. ಇಂತಹ ಸಂದ್ಭದಲ್ಲಿ ಬಾಲ್ಯ ವಿವಾಹ ತಡೆಗಟ್ಟಬೇಕಾದ ಇಲಾಖೆಗಳು, ಅಧಿಕಾರಿಗಳು ಹಾಗೂ ಪೊಲೀಸರು ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ ಎಂಬುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿದೆ’ ಎಂದರು.

ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲನೆ

‘ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಪರಿಗಣಿಸಲಾಗಿದೆ. ಅದರಂತೆ ಬಾಲಕಿಗೆ 18 ವರ್ಷ ವಯಸ್ಸಾಗಿದೆ. ಹೀಗಾಗಿ ಕೆರಗೋಡು ಪೊಲೀಸರು ಬಾಲ್ಯವಿವಾಹ ಪ್ರಕರಣ ದಾಖಲು ಮಾಡುವ ಪ್ರಶ್ನೆಯೇ ಬರುವುದಿಲ್ಲ. ಈ ಕುರಿತು ರಾಜ್ಯ ಸರ್ಕಾರದ ನಿರ್ದೇಶನಗಳನ್ನೂ ಪಾಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.

‘ಮಕ್ಕಳ ಕಲ್ಯಾಣ ಸಮಿತಿ ಆದೇಶ ಪಾಲನೆ ಮಾಡುವ ಬಾದ್ಯತೆ ಪೊಲೀಸ್‌ ಇಲಾಖೆಗೆ ಇಲ್ಲ. ಸುಪ್ರೀಂ ಕೋರ್ಟ್‌ ತೀರ್ಪು ಹಾಗೂ ಸರ್ಕಾರದ ನಿರ್ದೇಶನಗಳ ಅನ್ವಯ ಕೆರಗೋಡು ಪೊಲೀಸರು ನಡೆದುಕೊಂಡಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು