ಗುರುವಾರ , ಜನವರಿ 30, 2020
23 °C
ಮಂಡ್ಯದಲ್ಲಿ ಜನಜಾಗೃತಿ ಸಮಾವೇಶ

ಸಮಾಜ ಸುಧಾರಣೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ: ಡಿ.ವಿ.ಸದಾನಂದಗೌಡ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಪೌರತ್ವ ತಿದ್ದುಪಡಿ ಕಾಯಿದೆ ಸಂವಿಧಾನಾತ್ಮಕವಾಗಿದ್ದು, ಮಾನವೀಯ ಮೌಲ್ಯ ಎತ್ತಿ ಹಿಡಿಯುತ್ತದೆ. ಸಮಾಜ ಸುಧಾರಣೆಯ ಉದ್ದೇಶದಿಂದ ಕಾಯ್ದೆ ಜಾರಿಗೊಳಿಸಲಾಗಿದೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ಜನ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯಸಭೆಯಲ್ಲಿ ಬಿಜೆಪಿ 99 ಸದಸ್ಯರನ್ನು ಹೊಂದಿದೆ. ಕಾಯ್ದೆ ಪರ 122 ಮತ ಚಲಾವಣೆಗೊಂಡಿದ್ದು, ಸಂವಿಧಾನ ದತ್ತವಾಗಿ ಅಂಗೀಕಾರಗೊಂಡಿದೆ. ಈ ಕಾಯ್ದೆ ಸಂವಿಧಾನದ ಯಾವುದೇ ಅಂಶಗಳಿಗೆ ಧಕ್ಕೆ ತರುವುದಿಲ್ಲ. ಕೇಂದ್ರ ಸರ್ಕಾರ ಸಂವಿಧಾನಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಕಾಂಗ್ರೆಸ್‌ ಸೇರಿ ವಿರೋಧ ಪಕ್ಷಗಳು ಸಿಎಎ ಹಾಗೂ ಎನ್‍ಆರ್‌ಸಿ ವಿರೋಧಿಸುವ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡುತ್ತಿವೆ’ ಎಂದು ಆರೋಪಸಿದರು.

‘ಸ್ವಾತಂತ್ರ್ಯ ಬಂದಾಗ ಪಾಕಿಸ್ತಾನದಲ್ಲಿ ಶೇ 23ರಷ್ಟಿದ್ದ ಹಿಂದೂಗಳು, 2015ರ ವರದಿಯ ಪ್ರಕಾರ ಶೇ 3ಕ್ಕೆ ಕುಸಿದಿದ್ದಾರೆ. ಸ್ವಾತಂತ್ರ್ಯ ಬಂದಾಗ ನಮ್ಮ ದೇಶದಲ್ಲಿ ಶೇ 11.8ರಷ್ಟಿದ್ದ ಮುಸ್ಲಿಮರು ಪ್ರಸ್ತುತ ಶೇ 18.6ರಷ್ಟಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನಗಳು ಇಸ್ಲಾಮಿಕ್ ದೇಶ ಎಂದು ಘೋಷಣೆ ಮಾಡಿಕೊಂಡಿವೆ. ಆದರೆ, ಭಾರತ ಎಲ್ಲಾ ಧರ್ಮೀಯರನ್ನೊಳಗೊಂಡ ಜಾತ್ಯತೀತ ದೇಶವಾಗಿದೆ. ನಮ್ಮ ದೇಶದಲ್ಲಿ ಮುಸ್ಲಿಮರಿಗೆ ಸಿಗುವ ಗೌರವ ಮುಸ್ಲಿಂ ರಾಷ್ಟ್ರಗಳಲ್ಲೂ ಸಿಗುವುದಿಲ್ಲ’ ಎಂದು ಹೇಳಿದರು.

‘ನಾವು ಮುಸ್ಲಿಂ ವಿರೋಧಿಗಳಲ್ಲ, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ನೂರಾರು ಮಂದಿಗೆ ಪೌರತ್ವ ಕೊಡಲಾಗಿದೆ. ತ್ರಿವಳಿ ತಲಾಖ್‍ ನಿಷೇಧಿಸಿ ಮುಸ್ಲಿಂ ತಾಯಂದಿರನ್ನು ರಕ್ಷಣೆ ಮಾಡಿದ್ದೇವೆ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಯನ್ನು ಈಡೇರಿಸುತ್ತಾ ಬಂದಿದ್ದೇವೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನ ರದ್ದತಿ ಮಾಡಿದ ನಂತರ, ಒಂದೇ ಒಂದು ಬಾಂಬ್‍ದಾಳಿ ಆಗಿಲ್ಲ, ಉಗ್ರರ ಉಪಟಳ ಬಂದ್ ಆಗಿದೆ. ಅಲ್ಲಿಯ ಮಕ್ಕಳು ಧೈರ್ಯದಿಂದ ಶಾಲೆಗೆ ಹೋಗುತ್ತಿದ್ದಾರೆ. ಜನರು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ’ ಎಂದರು.

‘ದೇಶಕ್ಕೆ ಅಕ್ರಮವಾಗಿ ನುಸುಳಿರುವವರನ್ನು ಎನ್‍ಆರ್‌ಸಿ ಮೂಲಕ ಹೊರ ಹಾಕುತ್ತೇವೆ. ಸಿಎಎ ಮತ್ತು ಎನ್‍ಆರ್‌ಸಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಮುಸ್ಲಿಮರು ಅರಿತುಕೊಳ್ಳಬೇಕು. ಮುಸ್ಲಿಮರನ್ನು ದೇಶದಿಂದ ಹೊರ ಹಾಕುತ್ತಾರೆ ಎಂಬ ಸುಳ್ಳು ಸಂದೇಶಗಳನ್ನು ಯಾವ ಮುಸ್ಲಿಮರೂ ನಂಬಬಾರದು. ನಮ್ಮ ಸರ್ಕಾರ ನೊಂದವರ, ಬಡವರ, ದೀನ ದಲಿತರ ಪರವಾಗಿ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಎಚ್‌.ಹೊನ್ನಪ್ಪ, ಮುಖಂಡರಾದ ಕೆ.ಎಸ್‌.ನಂಜುಂಡೇಗೌಡ, ಡಾ.ಸಿದ್ದರಾಮಯ್ಯ, ಎನ್‌.ಶಿವಣ್ಣ, ನಗರಸಭಾ ಸದಸ್ಯ ಎಂ.ಪಿ.ಅರುಣ್‌ಕುಮಾರ್‌, ಮನ್‌ಮುಲ್‌ ನಿರ್ದೇಶಕ ಸಾದೊಳಲು ಸ್ವಾಮಿ, ಬಿಜೆಪಿ ರಾಜ್ಯ ಯುವ ಮೋರ್ಚಾ ಘಟಕದ ಕಾರ್ಯದರ್ಶಿ ಎಚ್‌.ಆರ್‌.ಅಶೋಕ್‌ಕುಮಾರ್, ವಿವೇಕ್‌, ಸುಜಾತಾ ರಮೇಶ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು