ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಕಷ್ಟ, ಸುಖ, ನೋವು, ನಲಿವುಗಳ ಅರ್ಥ ತಿಳಿಸಿ

ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿ; ಐಎಫ್‌ಎಸ್‌ ಅಧಿಕಾರಿ ಎ.ಎಂ.ರಾಜೇಶ್‌ ಹೇಳಿಕೆ
Last Updated 25 ಆಗಸ್ಟ್ 2019, 11:51 IST
ಅಕ್ಷರ ಗಾತ್ರ

ಮಂಡ್ಯ: ‘ಪೋಷಕರು ತಮ್ಮ ಮಕ್ಕಳಿಗೆ ಕಷ್ಟ, ಸುಖ, ನೋವು, ನಲಿವುಗಳ ಅರ್ಥ ತಿಳಿಸಿಕೊಡಬೇಕು. ಆಗ ಮಕ್ಕಳ ವ್ಯಕ್ತಿತ್ವ ಗಟ್ಟಿಗೊಳ್ಳುತ್ತದೆ. ಜೀವನದಲ್ಲಿ ಎಲ್ಲವನ್ನೂ ಎದುರಿಸುವ ಆತ್ಮಸ್ಥೈರ್ಯ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ’ ಮಣಿಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ರಾಜೇಶ್‌ ಹೇಳಿದರು.

ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ನಗರದ ಸರ್ವೋದಯ ಕೃಷಿಕ್ ತರಬೇತಿ ಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿ ಸಮಾರೋಪ ಸಮಾರಂಭ ಉದ್ಘಾಟಸಿ ಮಾತನಾಡಿದರು.

‘ಇಂದಿನ ದಿನಗಳಲ್ಲಿ ಹಳ್ಳಿಗಳ ಜೀವನ ಎಲ್ಲ ಮಕ್ಕಳಿಗೂ ಸಿಗುತ್ತಿಲ್ಲ. ಮೊಬೈಲ್‌, ಕಂಪ್ಯೂಟರ್‌ಗಳತ್ತ ತಮ್ಮ ಗಮನ ಕೇಂದ್ರೀಕರಿಸುತ್ತಾರೆ. ಇಂತಹ ಚಟುವಟಿಕೆಗಳಿಂದ ಮಕ್ಕಳನ್ನು ಸಾಧ್ಯವಾದಷ್ಟು ದೂರವಿಟ್ಟು ಕಲೆ, ಸಾಹಿತ್ಯ ಚಟುವಟಿಕೆಗಳತ್ತ ತೊಡಗಿಕೊಳ್ಳುವ ವಾತಾವರಣ ನಿರ್ಮಿಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಯಾರೂ ಹತಾಶರಾಗಬಾರದು. ಪದವಿ, ಸ್ನಾತಕೋತ್ತರ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಉನ್ನತ ಸಾಧನೆ ಮಾಡಬೇಕು’ ಎಂದು ಹೇಳಿದರು.

‘ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಉತ್ತಮ ವ್ಯಕ್ತಿತ್ವದ ಜತೆಗೆ ಸಾಮಾನ್ಯ ಜ್ಞಾನವನ್ನೂ ಹೊಂದಿರಬೇಕು. ಅಧಿಕಾರಿಗಳಾದ ಮಾತ್ರಕ್ಕೆ ಕೆಳ ಹಂತದ ನೌಕರರ ಮೇಲೆ ದರ್ಪ ತೋರಿ, ದೌರ್ಜನ್ಯ ತೋರುವುದು ಸರಿಯಲ್ಲ. ಸಾರ್ವಜನಿಕರ ಸೇವಕರಾಗಿರುವ ನಾವು ಎಲ್ಲರೂ ಸಮಾನರು ಎಂಬ ಆಶಯದೊಂದಿಗೆ ಉತ್ತಮ ಸೇವೆ ನೀಡಬೇಕು. ಕೆಲವು ಅಧಿಕಾರಿಗಳು ಏನೂ ಮಾಡದೆ ನಿರರ್ಥಕವಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಾರೆ. ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಅಧಿಕಾರದಲ್ಲಿ ಇದ್ದಾಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ, ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ನಾನು ಎಂ.ಎಸ್ಸಿ ನಂತರ ಫೆಲೋಶಿಪ್‌ಗಾಗಿ ಪರೀಕ್ಷೆ ಬರೆದಾಗ 66ನೇ ರ‍್ಯಾಂಕ್‌ ಪಡೆದೆ, ಫೆಲೋಶಿಪ್ ದೊರೆಯಲಿಲ್ಲ. ಮತ್ತೆ ಪರೀಕ್ಷೆ ಬರೆದಾಗ 6ನೇ ರ‍್ಯಾಂಕ್‌ ಗಳಿಸಿದೆ. ಆಗ ದೆಹಲಿಯಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶ ಸಿಕ್ಕಿತು. ಅಲ್ಲಿಯೇ ನಾಗರಿಕ ಸೇವೆಯ ಮೊದಲ ಹಂತದ ಪರೀಕ್ಷೆಗೆ ತಯಾರಾಗುತ್ತಿದ್ದೆ. ಆಗ ಡಿ.ಕೆ.ರವಿ, ಬೋರಲಿಂಗಯ್ಯ, ಶಶಿಕುಮಾರ್ ಅವರಿಂದ ಉತ್ತಮ ಮಾರ್ಗದರ್ಶನ ಪಡೆದು ನಾಗರಿಕ ಸೇವೆಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಐಎಫ್ಎಸ್‌ಗೆ ಅರ್ಹತೆ ಪಡೆದೆ’ ಎಂದು ತಮ್ಮ ಅನುಭವ ಹಂಚಿಕೊಂಡರು.

ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಕಾರ್ಯಾಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಐಎಎಸ್‌ ಅಧಿಕಾರಿ ದಿಗ್ವಿಜಯ್‌ ಬೋಡ್ಕೆ, ಉಪ ವಿಭಾಗಾಧಿಕಾರಿ ಶಿವಪ್ಪ, ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಬಿ. ಬೋರಯ್ಯ, ಕಾರ್ಯದರ್ಶಿ ಡಾ. ರಾಮಲಿಂಗಯ್ಯ, ಜಂಟಿ ಕಾರ್ಯದರ್ಶಿ ಎ.ಎಂ.ಅಣ್ಣಯ್ಯ, ವ್ಯವಸ್ಥಾಪಕ ಲಕ್ಷ್ಮಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT