ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | 300ರ ಗಡಿ ದಾಟಿದ ಕೋವಿಡ್‌–19 ಪೀಡಿತರ ಸಂಖ್ಯೆ

ಒಟ್ಟು ಪ್ರಕರಣ 302ಕ್ಕೆ ಏರಿಕೆ, ಒಂದೇ ದಿನ 53 ಮಂದಿ ಗುಣಮುಖ, ಬೀಳ್ಕೊಡುಗೆ
Last Updated 4 ಜೂನ್ 2020, 3:45 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಪೇಟೆ ತಾಲ್ಲೂಕಿನ 13 ಮಂದಿ ಮುಂಬೈ ವಲಸಿಗರಿಗೆ ಬುಧವಾರ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 302ಕ್ಕೆ ಏರಿಕೆಯಾಗಿದೆ. ಕೆಲವೇ ದಿನಗಳಲ್ಲಿ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದೆ.

ರೋಗಿ ಸಂಖ್ಯೆ 3914ರಿಂದ 3926ರವರೆಗೆ 13 ಮಂದಿ ಪುರುಷರಲ್ಲಿ ಕೋವಿಡ್‌ ಪತ್ತೆಯಾಗಿದೆ. ಮೇ ತಿಂಗಳಲ್ಲಿ ಮುಂಬೈನಿಂದ ಬಂದ ಅವರನ್ನು ಕೆ.ಆರ್‌.ಪೇಟೆ ತಾಲ್ಲೂಕಿನ ವಿವಿಧ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಎರಡನೇ ಬಾರಿಯ ಕೋವಿಡ್‌ ಪರೀಕ್ಷೆಯ ವೇಳೆ ಹಲವರಲ್ಲಿ ಸೋಂಕು ಪತ್ತೆಯಾಗಿದೆ ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಮಂಡ್ಯ ಜಿಲ್ಲೆ 4ನೇ ಸ್ಥಾನ ಪಡೆದಿದೆ. ಮೊದಲು 2ನೇ ಸ್ಥಾನ ಪಡೆದಿತ್ತು. ನಂತರ ಸೋಂಕಿತರ ಸಂಖ್ಯೆಲ್ಲಿ ಇಳಿಕೆಯಾದ ಕಾರಣ ಸ್ಥಾನ ಇಳಿಕೆ ಗತಿಯನ್ನು ನಡೆಯುತ್ತಿದೆ. ಇನ್ನೂ 690 ಮಂದಿಯ ವರದಿ ಬರಬೇಕಾಗಿದೆ.

ಒಂದೇ ದಿನ 53 ಮಂದಿ ಬಿಡುಗಡೆ: ಕೋವಿಡ್‌–19 ನಿಂದ ಸಂಪೂರ್ಣವಾಗಿ ಗುಣಮುಖರಾದ 53 ಮಂದಿಯನ್ನು ಬುಧವಾರ ಒಂದೇ ದಿನ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಎಲ್ಲರಿಗೂ ಗುಲಾಬಿ ಹೂವು ಹಾಗೂ ವೈದ್ಯಕೀಯ ಪ್ರಮಾಣ ಪತ್ರ ನೀಡಿ ಬೀಳ್ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ ಅವರು ‘ಕಳೆದ 15 ದಿನಗಳ ಹಿಂದೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಜಾಸ್ತಿಯಾದಾಗ ಸಾರ್ವಜನಿಕರಲ್ಲಿ ಭಯ, ತಲ್ಲಣದ ವಾತಾವರಣ ಇತ್ತು. ಆದರೆ ಈಗ ಒಂದೇ ದಿನ 53 ಮಂದಿ ಗುಣಮುಖರಾಗುತ್ತಿರುವುದು ಒಂದು ರೀತಿಯ ಸಮಾಧಾನ ಉಂಟಾಗಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ಹೇಳಿದರು.

‘ಇಲ್ಲಿಯವರೆಗೆ 81 ಮಂದಿ ಗುಣಮುಖರಾಗಿ ಮನೆ ಸೇರಿದ್ದರು. ಈಗ 53 ಸೇರಿ 133 ಮಂದಿ ರೋಗಮುಕ್ತರಾಗಿ ಮನೆಗೆ ತೆರಳಿದ್ದಾರೆ. ಸಮರ್ಪಕವಾಗಿ ಚಿಕಿತ್ಸೆ ನೀಡಿದ ಮಿಮ್ಸ್‌ ಆಸ್ಪತ್ರೆಯ ವೈದ್ಯರಿಗೆ, ಶುಶ್ರೂಷಕ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಗೆ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಬಿಡುಗಡೆಯಾಗಿ ಮನೆಗೆ ತೆರಳುವವರು ಊರಿಗೆ ತೆರಳಿದ ನಂತರ ಹೆಚ್ಚು ಜಾಗೃತರಾಗಿ ಇರಬೇಕು. ಇದೊಂದು ಸಾಮಾನ್ಯ ವೈರಸ್‌ ಆಗಿದ್ದು ಎಲ್ಲರೂ ಗುಣಮುಖರಾಗುತ್ತಾರೆ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಬಿಡುಗಡೆಯಾದವರು ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿ ಸೂಕ್ಷ್ಮ ವಾತಾವರಣ ಇರುತ್ತದೆ. ಗ್ರಾಮಸ್ಥರ ಜೊತೆ ಬಹಳ ಸಾಮರಸ್ಯ, ಹೊಂದಾಣಿಕೆಯಿಂದ ಇರಬೇಕು. ಇಲ್ಲಿಯವರೆಗೂ ನಮ್ಮ ಜಿಲ್ಲೆಯಲ್ಲಿ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆ ಮಾದರಿಯಾಗಿದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT