ಶುಕ್ರವಾರ, ಸೆಪ್ಟೆಂಬರ್ 17, 2021
31 °C
ಎರಡು ಪಿಪಿಇ ಕಿಟ್‌ ಕೊಟ್ಟು ಕೈತೊಳೆದುಕೊಂಡ ಅಧಿಕಾರಿಗಳು

ಜಗುಲಿ ಮೇಲೆ ಅನಾಥವಾಗಿ ಬಿದ್ದಿದ್ದ ಶವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವ, ತಾಲ್ಲೂಕಿನ ಹೊನಗನಗಹಳ್ಳಿಯ ಮನೆಯೊಂದರ ಜಗುಲಿಯ ಮೇಲೆ ಬುಧವಾರ ಐದು ತಾಸಿಗೂ ಹೆಚ್ಚು ಕಾಲ ಅನಾಥವಾಗಿ ಬಿದ್ದಿತ್ತು.

ತಿ. ನರಸೀಪುರ ತಾಲ್ಲೂಕಿನ ಮುಸಕನಕೊಪ್ಪಲು ಗ್ರಾಮದ 50 ವರ್ಷದ ವ್ಯಕ್ತಿ, ಬೆಂಗಳೂರಿನಲ್ಲಿ ನೆಲೆಸಿದ್ದರು. ಅಲ್ಲಿಂದ ಹೊರಟು, ಮಂಗಳವಾರ ರಾತ್ರಿ ಹೊನಗನಹಳ್ಳಿಯಲ್ಲಿರುವ ತಮ್ಮ ಮಾವನ ಮನೆಯಲ್ಲಿ ತಂಗಿದ್ದರು. ಮಧ್ಯರಾತ್ರಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.

ಆದರೆ, ಅಂತ್ಯಸಂಸ್ಕಾರಕ್ಕೆ ಊರವರ ವಿರೋಧ ವ್ಯಕ್ತವಾಗಿದ್ದರಿಂದ ಸಂಬಂಧಿಕರು ಶವವನ್ನು ಹೊತ್ತು ಮಂಡ್ಯ, ಮೈಸೂರು ಜಿಲ್ಲೆಗಳ ನಡುವೆ ಅಲೆದಾಡಬೇಕಾಗಿ ಬಂತು. ಕೊನೆಗೆ ಅವರ ಸ್ವಗ್ರಾಮದಲ್ಲೇ ಅಂತ್ಯಕ್ರಿಯೆ ನಡೆದಿದೆ.

ಶವವನ್ನು ಅವರ ಸ್ವಂತ ಊರಿಗೆ ತಂದಾಗ, ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ವಾಪಸ್‌ ಮತ್ತೆ ಮಾವನ ಊರಿಗೆ ತಂದಾಗ ಅಲ್ಲೂ ಅದೇ ಪರಿಸ್ಥಿತಿ ಎದುರಿಸಬೇಕಾಯಿತು. ಅಧಿಕಾರಿಗಳು ಬರುವವರೆಗೆ ಶವವನ್ನು ಎತ್ತಬಾರದು ಎಂದು ತಾಕೀತು ಮಾಡಿದ ಅಕ್ಕಪಕ್ಕದವರು, ತಾವೂ ಮನೆ ಖಾಲಿ ಮಾಡಿ ದೂರ ತೆರಳಿದರು. ಹೀಗಾಗಿ ಸಂಜೆವರೆಗೂ, ಶವ ಜಗುಲಿಯ ಮೇಲೇ ಇತ್ತು.

ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ನೇತೃತ್ವದ ತಂಡ ಸಂಜೆ ಗ್ರಾಮಕ್ಕೆ ಬಂದಿತು. ಆಗ ಗ್ರಾಮಸ್ಥರು ಮೃತದೇಹದ ಕೋವಿಡ್‌ ಪರೀಕ್ಷೆ ಮಾಡಿಸುವಂತೆ ಪಟ್ಟು ಹಿಡಿದರು. ಪರೀಕ್ಷೆ ಬದಲು, ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಅನುಸರಿಸುವ ವಿಧಾನವನ್ನೇ ಇಲ್ಲೂ ಅನುಸರಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಆದರೂ, ಸ್ಥಳೀಯರು ಅಂತ್ಯಸಂಸ್ಕಾರ ನಡೆಸಲು ಒಪ್ಪಲಿಲ್ಲ.

ದಾರಿ ಕಾಣದೇ, ಮೃತ ವ್ಯಕ್ತಿಯ ಪುತ್ರ ಹಾಗೂ ಭಾವಮೈದುನ ಇಬ್ಬರೇ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು  ಅಂತ್ಯಕ್ರಿಯೆ ನಡೆಸಿದರು. ಆದರೆ, ಈ ಸಂದರ್ಭದಲ್ಲಿ ಅವರಿಗೆ ಆಂಬುಲೆನ್ಸ್‌ ಕೂಡ ಸಿಕ್ಕಿಲ್ಲ. ಕೊಟ್ಟಿದ್ದ ಎರಡು ಪಿಪಿಇ ಕಿಟ್‌ಗಳನ್ನು ಧರಿಸಿ, ಅವರಿಬ್ಬರೇ ಶವವನ್ನು ಎತ್ತಿ ಟಾಟಾ ಸೊಮೊ ವಾಹನಕ್ಕೆ ಹಾಕಿದ್ದಾರೆ. ಆರೋಗ್ಯ ಇಲಾಖೆಯ ಯಾವುದೇ ಸಿಬ್ಬಂದಿ ಅವರ ನೆರವಿಗೆ ಬಂದಿಲ್ಲ.

‘ಈ ಪ್ರಕರಣದ ಕುರಿತು ವಿವರವಾಗಿ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು