ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣ; ಮಂಡ್ಯ ಜಿಲ್ಲೆ ಉತ್ತಮ ಕೆಲಸ

‘ಹೊಂಬಾಳೆ’ ಕೊಡುಗೆ ಆಮ್ಲಜನಕ ಘಟಕಕ್ಕೆ ಚಾಲನೆ; ಸಚಿವ ಸಿ.ಎನ್‌.ಅಶ್ವತ್ಥನಾರಾಯಣ ಮೆಚ್ಚುಗೆ
Last Updated 7 ಸೆಪ್ಟೆಂಬರ್ 2021, 13:30 IST
ಅಕ್ಷರ ಗಾತ್ರ

ಪಾಂಡವಪುರ: ‘ಕೋವಿಡ್‌ ನಿಯಂತ್ರಿಸುವಲ್ಲಿ ಮಂಡ್ಯ ಜಿಲ್ಲೆ ಇಡೀ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದೆ. 2ನೇ ಅಲೆ ನಿಯಂತ್ರಣ ಮಾಡುವಲ್ಲಿ ಎಲ್ಲರೂ ಸಂಘಟಿತವಾಗಿ ಕೆಲಸ ಮಾಡಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಂಬಾಳೆ ಫಿಲಂಸ್‌ ಸಂಸ್ಥೆ ಸಿಎಸ್ಆರ್ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕ ಉದ್ಫಾಟಿಸಿ ಅವರು ಮಾತನಾಡಿದರು.

‘ಕೊರೊನಾ ತಡೆಗಟ್ಟುವಿಕೆಯ ಕಾ‌ರ್ಯದಲ್ಲಿ ಉಸ್ತುವಾರಿ ಸಚಿವ ನಾರಾಯಣಗೌಡರಿಗೆ ಜಿಲ್ಲೆಯ ಎಲ್ಲಾ ಶಾಸಕರು ಸಾಥ್ ನೀಡಿದ್ದಾರೆ. ಪಾಂಡವಪುರದಲ್ಲಿಯೂ ಶಾಸಕ ಸಿ.ಎಸ್.ಪುಟ್ಟರಾಜು ಅವರು ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಹೊಂಬಾಳೆ ಫಿಲಂಸ್‌ನ ಕಿರಂಗದೂರು ವಿಜಯ್ ಅವರು ಕನ್ನಡ ಚಿತ್ರರಂಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಅವರು ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಕೊಡುಗೆ ನೀಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘2ನೇ ಅಲೆ ಬಂದಾಗ ಜನ ತತ್ತರಿಸಿ ಹೋಗಿದ್ದರು. ಆಮ್ಲಜನಕ ಕೊರತೆ ಎಲ್ಲರನ್ನೂ ಕಾಡತೊಡಗಿತು. ಆಮ್ಲಜನಕ ಪೂರೈಕೆಗಾಗಿ ಪರದಾಡಬೇಕಾಯಿತು. ಆಮ್ಲಜನಕ ತುಂಬಿಸಿಕೊಳ್ಳಲು ಖಾಲಿ ಸಿಲಿಂಡರ್ ಹಿಡಿದು ಮಧ್ಯರಾತ್ರಿ 3ರತನಕವೂ ಕಾಯಬೇಕಾಯಿತು. ಪಕ್ಕದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆಗೆ ಆಮ್ಲಜನಕ ಪೂರೈಕೆ ಮಾಡಲ ಮೀನಾಮೇಷ ಎಣಿಸಿದರಲ್ಲದೆ ನಮ್ಮನ್ನ ಉದಾಸೀನ ಮಾಡಿದರು’ ಎಂದು ಬೇಸರವ್ಯಕ್ತಪಡಿಸಿದರು.

‘ಜಿಲ್ಲೆಗೆ ಎದುರಾಗಿರುವ ಆಮ್ಲಜನಕ ಸಮಸ್ಯೆಯನ್ನು ಸಚಿವ ಡಾ.ಅಶ್ವತ್ಥನಾರಾಯಣ ಅವರ ಬಳಿ ಹೇಳಿಕೊಳ್ಳಲಾಯಿತು. ಇದಕ್ಕೆ ಸ್ಫಂದಿಸಿದ ಅವರು ಹೊಂಬಾಳೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ, ಆಮ್ಲಜನಕ ಘಟಕ ಸ್ಥಾಪಿಸಿಕೊಡಲು ಮನವಿ ಮಾಡಿದರು. ಹೀಗಾಗಿ ಇಂದು ಕಿರಂಗದೂರು ವಿಜಯ್ ಅವರು ಜಿಲ್ಲೆಯಲ್ಲಿ ಆಮ್ಲಜನ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ಜಿಲ್ಲೆಯ ಜನತೆಯ ಪರವಾಗಿ ಅವರನ್ನು ಅಭಿನಂದಿಸುತ್ತೇನೆ’ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ ‘ಉಸ್ತುವಾರಿ ಸಚಿವ ನಾರಾಯಣಗೌಡರ ನೇತೃತ್ವದಲ್ಲಿ ಜಿಲ್ಲೆಯಲ್ಲಿ 2ನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದೆ. 3ನೇ ಅಲೆ ಎದುರಿಸಲು ಸಿದ್ಧರಾಗಬೇಕಿದೆ. ಈ ಬಗ್ಗೆ ಈಗಾಗಲೇ ತಜ್ಞರು ಸಲಹೆ ಮಾರ್ಗಗಳನ್ನು ಸೂಚಿಸಿದ್ದಾರೆ. ಆಮ್ಲಜನಕ ಸಮಸ್ಯೆಗೆ ಪರಿಹಾರ ದೊರಕಿದೆ’ ಎಂದರು.

ಕಾಲೇಜು ಕಟ್ಟಡ ಉದ್ಫಾಟನೆ: ತಾಲ್ಲೂಕಿನ ಚಿನಕುರಳಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗಿರುವ ಸರ್ಕಾರಿ ಐಟಿಐ ನೂತನ ಕಟ್ಟಡವನ್ನು ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕೆ.ಸಿ.‌ನಾರಾಯಣಗೌಡ, ಶಾಸಕ ಸಿ.ಎಸ್.ಪುಟ್ಟರಾಜು ಉದ್ಫಾಟಿಸಿದರು. ಚಿನಕುರಳಿ ಬಳಿ ಇರುವ ಮೊಸರಳ್ಳದಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂಗೆ ಸಚಿವರು ಹಾಗೂ ಶಾಸಕ ಬಾಗಿನ ಅರ್ಪಿಸಿದರು. ಚಿನಕುರಳಿಯಲ್ಲಿರುವ ಶಾಸಕ ಸಿ.ಎಸ್.ಪುಟ್ಟರಾಜು ಅವರ ಎಸ್‌ಟಿಜಿ ಶಿಕ್ಷಣ ಸಂಸ್ಥೆಯ ಆಡಳಿಗ ವಿಭಾಗ ಕಟ್ಟಡವನ್ನು ಉದ್ಫಾಟನೆಯನ್ನು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಹೊಂಬಾಳೆ ಫಿಲಂಸ್‌ ಗ್ರೂಪ್‌ನ ನಿರ್ದೇಶಕ ಚಲುವೇಗೌಡ, ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಎಲ್ ಪಾಟೀಲ್‌, ತಾ.ಪಂ.ಇಒ ಆರ್.ಪಿ.ಮಹೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಇದ್ದರು.

ಉತ್ತಮ ಆರೋಗ್ಯ ಸೇವೆ ಸಿಗಲಿ

‘ಮಂಡ್ಯ ಜಿಲ್ಲೆ ನನ್ನ ತವರು ಜಿಲ್ಲೆ. ಜಿಲ್ಲೆಯಲ್ಲಿ ಎಲ್ಲೆಡೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳಿರಬೇಕು ಎಂಬುದೇ ನನ್ನ ಕಾಳಜಿ. ಪ್ರತಿ ಸಣ್ಣ ಸಮಸ್ಯೆಗೂ ಜನರು ಬೆಂಗಳೂರು, ಮೈಸೂರಿಗೆ ಹೋಗುವ ಪರಿಸ್ಥಿತಿ ಬರಬಾರದು. ಗುಣಮಟ್ಟದ ಆರೋಗ್ಯ ಸೇವೆ ಮಂಡ್ಯದಲ್ಲೇ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಕೈಲಾದ ಸಹಾಯ ಮಾಡಿದ್ದೇವೆ’ ಎಂದು ವಿಜಯ್‌ ಕಿರಗಂದೂರು ಪ್ರತಿಕ್ರಿಯೆ ನೀಡಿದ್ದಾರೆ.

‘ಗ್ರಾಮೀಣ ಭಾಗದ ಜನರು ಆರೋಗ್ಯಕ್ಕಾಗಿ ದೊಡ್ಡ ನಗರಗಳನ್ನು ಅವಲಂಬಿಸುವುದನ್ನು ಆದಷ್ಟು ಮಟ್ಟಿಗೆ ಕಡಿಮೆಗೊಳಿಸಬೇಕು. ನಮ್ಮ ಸಂಸ್ಥೆಯಿಂದ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕಗಳು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ತಾಲ್ಲೂಕು ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ವಾವಲಂಬಿಗಳಾಗಲಿವೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT