ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ 20 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಎರಡು ವಾರದಲ್ಲಿ 228 ಮಂದಿಗೆ ಸೋಂಕು, 319ಕ್ಕೆ ಏರಿಕೆಯಾದ ಸಕ್ರಿಯ ಪ್ರಕರಣ
Last Updated 2 ಏಪ್ರಿಲ್ 2021, 14:13 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್‌–19 ಪೀಡಿತರ ಸಂಖ್ಯೆ 20 ಸಾವಿರ ದಾಟಿದ್ದು ಜನರು ಸುರಕ್ಷತಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಕಳೆದೆರಡು ವಾರಗಳಿಂದ 228 ಜನರಲ್ಲಿ ರೋಗ ‍ಪತ್ತೆಯಾಗಿದ್ದು ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಸೂಚಕವಾಗಿದೆ.

ಈಚೆಗೆ ಹರಡುತ್ತಿರುವ ಕೊರೊನಾ ಸೋಂಕನ್ನು 2ನೇ ಅಲೆ ಎಂದೇ ವೈದ್ಯರು ಹೇಳುತ್ತಿದ್ದು ಮಂಡ್ಯ ಜಿಲ್ಲೆಯಲ್ಲೂ ತೀವ್ರವಾಗಿ ಹರಡುತ್ತಿದೆ. ಮದುವೆ, ಬೀಗರೂಟ, ತಿಥಿ, ಜಾತ್ರೆ, ಉತ್ಸವಗಳು ಸಾಮಾನ್ಯವಾಗಿದ್ದು ಜನರು ಯಾವುದೇ ಸುರಕ್ಷತಾ ಕ್ರಮ ಅನುಸರಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದರ ಪರಿಣಾಮವಾಗಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಮಾರ್ಚ್‌ 21ರಂದು 91 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಏ.2ರವೇಳೆಗೆ 319ಕ್ಕೆ ಏರಿಕೆಯಾಗಿದೆ. ಕಳೆದ 2 ತಿಂಗಳಿಂದಲೂ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ತಲುಪಿರಲಿಲ್ಲ. ಆದರೆ ಈಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ 31ರಂದೇ ಒಟ್ಟು ಸೋಂಕಿತರ ಸಂಖ್ಯೆ 20,035ಕ್ಕೆ ಹೆಚ್ಚಳವಾಗಿದೆ. ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಿಲು ಹಾಕಿದ್ದ ಎಲ್ಲಾ ಕೋವಿಡ್‌ ಕೇರ್‌ ಕೇಂದ್ರಗಳಿಗೆ ರೋಗಿಗಳು ದಾಖಲಾಗುತ್ತಿದ್ದಾರೆ.

‘2ನೇ ಅಲೆಯ ತೀವ್ರತೆ ಹೆಚ್ಚಳವಾಗಿರುವುದು ಕಂಡು ಬರುತ್ತಿದೆ. ಜನರು ಲಾಕ್‌ಡೌನ್‌ ವೇಳೆ ಅನುಸರಿಸುತ್ತಿದ್ದ ಕಠಿಣ ನಿಯಮಾವಳಿಯನ್ನು ಮರೆತಿರುವುದು ಕಂಡು ಬರುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವ ಕಾರಣ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಮಾಸ್ಕ್‌ ಧರಿಸದೇ ಮನೆಯಿಂದ ಹೊರಗೆ ಬರಲೇಬಾರದು. ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜದ ಆರೋಗ್ಯವನ್ನು ಕಾಪಾಡಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಬೀಗರೂಟಗಳ ಹಾವಳಿ: ಜಿಲ್ಲೆಯಾದ್ಯಂತ ಮದುವೆ, ಬೀಗರೂಟ ನಿಯಂತ್ರಣವಿಲ್ಲದೇ ನಡೆಯುತ್ತಿದ್ದು ಜನರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. 500 ಜನರ ಮಿತಿಯಲ್ಲಿರಬೇಕು ಎಂಬ ಸರ್ಕಾರದ ಮಾರ್ಗಸೂಚಿ ಪಾಲನೆಯಾಗುತ್ತಿದೆ. ಜಿಲ್ಲಾಡಳಿತ ಕೂಡ ಮದುವೆ, ಬೀಗರೂಟಗಳಿಗೆ ನಿಯಂತ್ರಣ ಹೇರುವಲ್ಲಿ ವಿಫಲವಾಗಿದೆ. ಹೀಗಾಗಿ ಮಾರ್ಗಸೂಚಿ ಎಂಬುದು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ.

‘ಮಂಡ್ಯ ಜಿಲ್ಲೆಯಲ್ಲಿ ದುಂಧುವೆಚ್ಚದ ಮದುವೆಗಳು ಮರುಕಳಿಸಿವೆ. ಲಾಕ್‌ಡೌನ್‌ ಅವಧಿಯಲ್ಲಿ ಮಾತ್ರ ಕೆಲವರು ಸರಳ ವಿವಾಹ ನೆರವೇರಿಸಿದರು. ಆದರೆ ಈಗ ಮತ್ತೆ ವೈಭವೋಪೇತವಾಗಿ ಮದುವೆ ಮಾಡುತ್ತಿದ್ದಾರೆ. ಮದುವೆ ಹಿಂದಿನ ದಿನ ಆರತಕ್ಷತೆ ಮಾಡುತ್ತಾರೆ, ಮಹೂರ್ತದ ದಿನವೂ ಆರತಕ್ಷತೆ ಇರುತ್ತದೆ. ಅದೂ ಸಾಲದು ಎಂಬಂತೆ ಬೀಗರೂಟದ ದಿನವೂ ಕಲ್ಯಾಣಮಂಟಪದಲ್ಲಿ ಇನ್ನೊಮ್ಮೆ ಆರತಕ್ಷತೆ ಮಾಡುತ್ತಾರೆ. ಸಾವಿರಾಜು ಜನರನ್ನು ಸೇರಿಸಿ ಕೊರೊನಾ ಸೋಂಕಿಗೆ ಆಹ್ವಾನ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಇಂಥವರ ಮೇಲೆ ಪ್ರಕರಣ ದಾಖಲು ಮಾಡಬೇಕು’ ಎಂದು ವಕೀಲ ಶಿವಕುಮಾರ್‌ ಒತ್ತಾಯಿಸಿದರು.

ಮಾರುಕಟ್ಟೆಯಲ್ಲಿ ಕೇಳುವವರಿಲ್ಲ: ನಗರದ ತರಕಾರಿ ಮಾರುಕಟ್ಟೆ, ಬೆಲ್ಲದ ಮಾರುಕಟ್ಟೆ, ನೂರು ಅಡಿ ರಸ್ತೆ, ಹೊಸಹಳ್ಳಿ ಮುಂತಾದ ಜನನಿಬಿಡ ಪ್ರದೇಶದಲ್ಲಿ ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ. ಜನರು ಮಾಸ್ಕ್‌ ಧರಿಸದೇ ವಹಿವಾಟು ನಡೆಸುತ್ತಿದ್ದಾರೆ, ಅಂತರ ಮಾಯವಾಗಿದೆ.

ಬೆಳಿಗ್ಗೆ ಮಾರುಕಟ್ಟೆಗೆ ಬರುವ ರೈತರು ಮಾಸ್ಕ್‌ ಧರಿಸುತ್ತಿಲ್ಲ. ಮಹಾವೀರ ವೃತ್ತದಲ್ಲಿ ಕೆಲಸಕ್ಕಾಗಿ ಕಾಯುವ ಕಾರ್ಮಿಕರು ಮಾಸ್ಕ್‌ ಹಾಕುತ್ತಿಲ್ಲ. ಇದರಿಂದಾಗಿ ಸೋಂಕಿತರ ಸಂಖ್ಯೆ ದಿನೇದಿನೇ ಏರುಗತಿಯಲ್ಲಿ ಸಾಗುತ್ತಿದೆ.

***

ಹಬ್ಬ ಮುಗಿಯುವವರೆಗೆ ಲಸಿಕೆ ಬೇಡ

ಏ.1ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಗ್ಯ ಉಪ ಕೇಂದ್ರಗಳಲ್ಲೂ ಶಿಬಿರ ಆಯೋಜಿಸಿ ಲಸಿಕೆ ನೀಡಲಾಗುತ್ತಿದೆ. ನಿತ್ಯ 20 ಸಾವಿರ ಜನರಿಗೆ ಚುಚ್ಚುಮದ್ದು ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ ಗ್ರಾಮೀಣ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ.

‘ಮುಂದಿನವಾರ ಊರ ಹಬ್ಬವಿದೆ, ಜಾತ್ರೆ ಇದೆ, ರಥೋತ್ಸವ, ಕೊಂಡೋತ್ಸವ ಇದೆ ಎಂಬ ಕಾರಣ ನೀಡಿ ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಂಡರೆ ತಲೆನೋವು, ಮೈಕೈನೋವು ಬರಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಲಸಿಕೆಯಿಂದ ಯಾವುದೇ ಸಮಸ್ಯೆ ಆಗದು, ತಕ್ಷಣವೇ ಬಂದು ಹಾಕಿಸಿಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಡಿಎಚ್‌ಒ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT