ಸೋಮವಾರ, ಸೆಪ್ಟೆಂಬರ್ 27, 2021
21 °C
ಅಂಗಡಿ–ಮುಂಗಟ್ಟುಗಳು ಬಂದ್; ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ

ಮಂಡ್ಯ: ವಾರಾಂತ್ಯ ಕರ್ಫ್ಯೂ, ವಾಹನ ಸಂಚಾರಕ್ಕೆ ತಡೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ವಾರಾಂತ್ಯ ಕರ್ಫ್ಯೂ ಅಂಗವಾಗಿ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಮಿಕ್ಕೆಲ್ಲಾ ಅಂಗಡಿಗಳು ಮುಚ್ಚಿದ್ದವು. ಆದರೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧೆಡೆ ವಾಹನ ಸಂಚಾರ ಎಂದಿನಂತಿತ್ತು.

ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳನ್ನು ತಪಾಸಣೆ ನಡೆಸಿ ಪೊಲೀಸರು ದಂಡ ವಿಧಿಸಿದರು. ದಿನಸಿ, ತರಕಾರಿ, ಮಾಂಸದ ಅಂಗಡಿಗಳು, ಹಾಲಿನ ಕೇಂದ್ರಗಳು ಮಧ್ಯಾಹ್ನ 2ರವರೆಗೆ ತೆರೆದಿದ್ದವು. ಔಷಧ ಅಂಗಡಿ, ವೈದ್ಯಕೀಯ ಸೇವೆಗಳು ಪೂರ್ಣವಾಗಿ ಲಭ್ಯವಿತ್ತು. ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಏನೂ ತೆರೆದಿರುವುದಿಲ್ಲ ಎಂದು ಮನೆಯಲ್ಲೇ ಇದ್ದರು. ಇದರಿಂದ ದಿನಸಿ ಅಂಗಡಿ, ಮಾಂಸದಂಗಡಿಗಳು ಬಿಕೋ ಎನ್ನುತ್ತಿದ್ದವು.

‘ಅಂಗಡಿ ತೆರೆಯಲು ಅನುಮತಿ ನೀಡಿದ್ದರೂ ವಾರಾಂತ್ಯ ಸಂಪೂರ್ಣ ಲಾಕ್‌ಡೌನ್‌ ಎಂದು ಜನರು ಸರಿಯಾಗಿ ಬರುತ್ತಿಲ್ಲ. ಅನುಮತಿ ನೀಡಿರುವ ಬಗ್ಗೆ ಜನರಿಗೆ ಪೊಲೀಸರು ಮಾಹಿತಿ ನೀಡಿಲ್ಲ. ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶುಕ್ರವಾರ ರಾತ್ರಿ 10 ಗಂಟೆ ನಂತರ ವಿಡಿಯೊ ಹೇಳಿಕೆ ನೀಡಿದ್ದಾರೆ. ಸರಿಯಾಗಿ ತಿಳಿಸಿದ್ದರೆ ಸಲ್ಪ ವ್ಯಾಪಾರವಾದರೂ ಆಗುತ್ತಿತ್ತು. ಆದರೆ ಈಗ ಜನರನ್ನು ಕಾಯುವಂತಾಗಿದೆ’ ಎಂದು ನೂರಡಿ ರಸ್ತೆಯ ದಿನಸಿ ಅಂಗಡಿಯ ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪೇಟೆಬೀದಿಯಲ್ಲಿ ದಿನಸಿ ಅಂಗಡಿಗಳು ತೆರೆದಿದ್ದವು. ಉಳಿದಂತೆ ಬಟ್ಟೆ, ಎಲೆಕ್ಟ್ರಿಕಲ್‌, ಕಬ್ಬಿಣ, ಜ್ಯುವೆಲರಿ ಅಂಗಡಿಗಳು ಮುಚ್ಚಿದ್ದವು. ವಿವಿರಸ್ತೆಯಲ್ಲಿನ ಕೆಲವು ದಿನಸಿ ಅಂಗಡಿಗಳು ತೆರೆದಿದ್ದವು, ಉಳಿದಂತೆ ಆಟೊ ಮೊಬೈಲ್‌, ಗ್ಯಾರೇಜ್‌ ಸೇರಿದಂತೆ ವಾಣಿಜ್ಯ ಅಂಗಡಿಗಳು ಮುಚ್ಚಿದ್ದವು. ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್‌ಗೆ ಅವಕಾಶ ನೀಡಲಾಗಿತ್ತು. ಕುಳಿತು ತಿನ್ನುವುದಕ್ಕೆ ಅವಕಾಶ ಇರಲಿಲ್ಲ.

ಬಿಕೋ ಎನ್ನುತ್ತಿದ್ದ ಬಸ್‌ ನಿಲ್ದಾಣ: ವಾರಾಂತ್ಯ ಕರ್ಫ್ಯೂ ಇದ್ದರೂ ಬಸ್‌ ಸಂಚಾರಕ್ಕೆ ಯಾವುದೇ ತಡೆ ಇರಲಿಲ್ಲ. ಜನರ ಅಗತ್ಯತೆಗೆ ತಕ್ಕಂತ ವಾಹನಗಳನ್ನು ಮಾರ್ಗಗಳಲ್ಲಿ ಇಳಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬಾರದ ಕಾರಣ ಶನಿವಾರ 49 ಬಸ್‌ಗಳು ಮಾತ್ರ ಮಂಡ್ಯ ವಿಭಾಗದಿಂದ ಸಂಚರಿಸಿದವು.

‘ಎಲ್ಲಾ ಘಟಕಗಳಿಂದ ಬೆಂಗಳೂರು, ಮಳವಳ್ಳಿ ಮಂಡ್ಯ, ಮಳವಳ್ಳಿ ಕನಕಪುರ–ಬೆಂಗಳೂರು ಮಾರ್ಗದಲ್ಲಿ ಬಸ್‌ಗಳು ಸಂಚರಿಸಿದವು. ಲಾಕ್‌ಡೌನ್‌ ತೆರವುಗೊಂಡ ನಂತರ 180 ಬಸ್‌ಗಳು ನಿತ್ಯವೂ ಸಂಚರಿಸುತ್ತಿದ್ದವು. ಸೋಮವಾರದಿಂದ ಮೈಸೂರಿಗೂ ಸಂಚರಿಸಲು ಅನುಮತಿ ಸಿಕ್ಕಿದ್ದು, ಮಾರ್ಗಗಳು–ಬಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್‌ಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು