ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಶಃ ಬಂದ್‌: ಅಂಗಡಿ ಮುಚ್ಚಿಸಿದ ಪೊಲೀಸರು

ಹಣ್ಣು, ಹಾಲು, ತರಕಾರಿ, ದಿನಸಿ ಔಷಧಿ ಶಾಪ್‌ಗಳೀಗಷ್ಟೇ ಅವಕಾಶ, ಸ್ವಘೋಷಿತ ಕರ್ಫ್ಯೂ
Last Updated 23 ಏಪ್ರಿಲ್ 2021, 14:20 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಕೇಂದ್ರ ಮಂಡ್ಯ ನಗರ ಶುಕ್ರವಾರ ಬಾಗಶಃ ಬಂದ್‌ ಆಗಿತ್ತು. ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಲಾಗಿತ್ತು.

ಬೆಳಿಗ್ಗೆ 9.30ರ ವೇಳೆಗೆ ಪೊಲೀಸರು ಅನವಶ್ಯಕ ಅಂಗಡಿ ಮುಂಗಟ್ಟು ಮುಚ್ಚಿಸುವ ಕಾರ್ಯಾಚರಣೆ ನಡೆಸಿದರು. ಅಂಗಡಿ ಮಾಲೀಕರು ಬಾಗಿಲು ತೆರೆಯಲು ಮುಂದಾಗಿದ್ದರು, ಆದರೆ ಪೊಲೀಸರ ಸೂಚನೆಯಿಂದ ಅಂಗಡಿ ಮುಚ್ಚಿ ಮನೆಗೆ ತೆರಳಿದರು. ಮಧ್ಯಾಹ್ನದ ಹೊತ್ತಿಗೆ ಕೆಲವರು ನಿಯಮ ಮೀರಿ ಅಂಗಡಿ ಬಾಗಿಲು ತೆರೆದಿರುವುದು ಕಂಡು ಬಂತು. ಕೆಲವರು ಅರ್ಧ ಬಾಗಿಲು ತೆರೆದು ವಹಿವಾಟು ನಡೆಸುತ್ತಿದ್ದರು.

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಗುರುವಾರ ಮಧ್ಯಾಹ್ನದಿಂದಲೇ ತೀರಾ ಅನಗತ್ಯವಾದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿತ್ತು. ಶುಕ್ರವಾರ ಅದೇ ಚಿತ್ರಣ ಮುಂದುವರಿದಿದ್ದು, ಒಂದು ರೀತಿಯಲ್ಲಿ ಅಘೋಷಿತ ಬಂದ್‌ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬಟ್ಟೆ ಅಂಗಡಿಗಳು, ಮೊಬೈಲ್‌ ಶಾಪ್‌ಗಳು, ಸೂಪರ್‌ ಮಾರ್ಕೆಟ್‌, ಬಿಗ್‌ ಬಜಾರ್‌, ರಿಲಯನ್ಸ್‌ ಟ್ರೆಂಡ್ಸ್‌, ಚಪ್ಪಲಿ ಅಂಗಡಿಗಳು, ಚಾಟ್ಸ್‌ ಶಾಪ್‌, ವಾಹನ ಶೋರೂಂಗಳನ್ನು ಬಂದ್ ಮಾಡಿಸಲಾಯಿತು. ಔಷಧಿ ಅಂಗಡಿಗಳು, ಹಣ್ಣು, ತರಕಾರಿ, ಹಾಲು, ಕಿರಾಣಿ ಅಂಗಡಿಗಳು ಮಾತ್ರ ತೆರೆದಿದ್ದವು. ಮಾಂಸ, ಮೀನಿನ ಅಂಗಡಿಗಳು ಎಂದಿನಿಂತೆ ಬಾಗಿಲು ತೆರೆದಿದ್ದವು.

ನಗರದ ಹೊರವಲಯದ ಹೋಟೆಲ್‌ಗಳು ನಿಯಮ ಉಲ್ಲಂಘನೆ ಮಾಡುವುದು ಕಂಡು ಬಂತು. ಜನರಿಗೆ ಹೋಟೆಲ್‌ ಒಳಗೆ ಸೇವೆ ನೀಡುತ್ತಿದ್ದರು. ನಿಯಮಗಳನ್ನು ಗಾಳಿಗೆ ತೂರುತ್ತಿದ್ದರೂ ಇತ್ತ ಗಮನ ಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು. ಉಳಿದಂತೆ ನಗರದ ವಿ.ವಿ ರಸ್ತೆ, ಆರ್‌.ಪಿ ಎಸ್ತೆ, ವಿನೋಬಾ ರಸ್ತೆಯಲ್ಲಿನ ಅಂಗಡಿಗಳು ಮುಚ್ಚಿದ್ದವು. ನಗರದ ತರಕಾರಿ ಮಾರುಕಟ್ಟೆಯಲ್ಲಿ ಎಂದಿನಂತೆ ಮಾರಾಟ ನಡೆಯಿತು.

ಬ್ಯಾಂಕ್‌, ಅಂಚೆ ಕಚೇರಿ, ಸಣ್ಣ ಹಣಕಾಸು ಸಂಸ್ಥೆಗಳು ಹಾಗೂ ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬ್ಯಾಂಕ್‌ ಒಳಗೆ ಒಮ್ಮೆ ನಾಲ್ಕೈದು ಮಂದಿ ಗ್ರಾಹಕರನ್ನು ಮಾತ್ರ ಬಿಡಲಾಗುತ್ತಿತ್ತು. ಇದಕ್ಕೆ ಕೆಲವೆಡೆ ಗ್ರಾಹಕರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಎಂದಿಗಿಂತ ಗ್ರಾಹಕರು ಕಡಿಮೆ ಸಂಖ್ಯೆಯಲ್ಲಿದ್ದರು.

ಬಿಕೋ ಎನ್ನುತ್ತಿದ್ದ ಬಸ್‌ ನಿಲ್ದಾಣ: ಸಾರಿಗೆ ನಿಗಮದ ನೌಕರರ ಮುಷ್ಕರ ಮುಗಿದಿದ್ದು, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಸ್‌ನಿಲ್ದಾಣಗಳಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದರೂ, ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದವು.

ಲಾಕ್‌ಡೌನ್‌, ಕರ್ಫ್ಯೂ ಆಗಿದೆ ಎಂಬ ಸುದ್ದಿ ಹರಿದಾಡಿದ ಕಾರಣ ಗ್ರಾಮಾಂತರ ಪ್ರದೇಶದಿಂದ ನಗರಕ್ಕೆ ಜನರು ಬರಲು ಹಿಂದೇಟು ಹಾಕಿದರು. ಬಹುತೇಕ ಖಾಸಗಿ ಬಸ್‌ಗಳು ನಿಂತಲ್ಲೇ ನಿಂತಿದ್ದವು. ಬಹುತೇಕ ಸಾರಿಗೆ ಸಂಸ್ಥೆ ಬಸ್‌ಗಳು ಖಾಲಿ ಸಂಚಾರ ಮಾಡುತ್ತಿದ್ದವು.‌‌

ಹೆದ್ದಾರಿಯಲ್ಲಿ ತಗ್ಗಿದ ವಾಹನ ಸಂಚಾರ
ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿರುವ ಹಿನ್ನೆಲೆಯಲ್ಲಿ ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತೀವ್ರ ಕಡಿಮೆಯಾಗಿದೆ. ಕಳೆದೆ ಮೂರು ದಿನಗಳಿಂದ ಸಂಚಾರ ದಟ್ಟಣೆ ಕಡಿಮೆಯಾಗಿದೆ.

ವೈಯಕ್ತಿಕ ವಾಹನಗಳ ಓಡಾಟದಲ್ಲಿ ಕಡಿಮೆಯಾಗಿದೆ. ಸಾರಿಗೆ ಸಂಸ್ಥೆ ಬಸ್‌ಗಳು, ಅಗತ್ಯ ವಸ್ತುಗಳ ಸಾಗಣೆ ವಾಹನಗಳು ಎಂದಿನಂತೆ ಓಡಾಡುತ್ತಿವೆ. ರಾತ್ರಿ ಕರ್ಫ್ಯೂ ಇರುವ ಕಾರಣ ಅಗತ್ಯ ವಸ್ತುಗಳ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಇಂದಿರಾ ಕ್ಯಾಂಟೀನಲ್ಲೂ ಪಾರ್ಸೆಲ್‌
ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಷ್ಟೇ ಅವಕಾಶ ನೀಡಲಾಗಿದೆ, ಅದರಂತೆ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಯೂ ಊಟ ತಿಂಡಿ ಪೊಟ್ಟಣ ಕಟ್ಟಿ ಪಾರ್ಸೆಲ್‌ ನೀಡಿದರು. ನಗರದಲ್ಲಿರುವ ಎರಡೂ ಇಂದರಾ ಕ್ಯಾಂಟೀನ್‌ ಆವರಣದಲ್ಲಿ ಆಹಾರ ಪೊಟ್ಟಣ ಇಡಲಾಗಿತ್ತು. ಗ್ರಾಹಕರು ಹಣಕೊಟ್ಟು ಕೊಂಡೊಯ್ಯುತ್ತಿದ್ದರು.

ಹೆದ್ದಾರಿ ಬದಿಯಲ್ಲಿರು ಪಾರ್ಕ್‌ಗಳಲ್ಲಿ ಜನರು ಇಂದಿರಾ ಕ್ಯಾಂಟೀನ್‌ ಊಟ, ತಿಂಡಿ ಸೇವನೆ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT