ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ 23 ಐಸಿಯು, 18 ವೆಂಟಿಲೇಟರ್‌!

ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿಯಲ್ಲಿ ಕೃತಕ ಉಸಿರಾಟ ಘಟಕ ಶೂನ್ಯ, ಹೆಚ್ಚಿದ ಆತಂಕ
Last Updated 26 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ ಅದನ್ನು ನಿರ್ವಹಣೆ ಮಾಡುವ ಶಕ್ತಿ ಜಿಲ್ಲಾಸ್ಪತ್ರೆಗಿದೆಯೇ, ಮಿಮ್ಸ್‌ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಎಷ್ಟು ಐಸಿಯುಗಳಿವೆ, ಕೃತಕ ಉಸಿರಾಟ ಘಟಕ (ವೆಂಟಿಲೇಟರ್‌) ಎಷ್ಟಿವೆ, ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲವನ್ನೂ ನಿರ್ವಹಿಸಲು ಸಿದ್ಧರಾಗಿದ್ದಾರೆಯೇ....?

ರಾಜ್ಯದಲ್ಲಿ ಕೋವಿಡ್‌– 19 ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದ್ದಂತೆ ಮಂಡ್ಯ ಜಿಲ್ಲೆಯ ಜನರಲ್ಲಿ ಮೂಡುತ್ತಿರುವ ಪ್ರಶ್ನೆಗಳಿವು. ಸದ್ಯ, ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿರುವ ತೀವ್ರ ನಿಗಾ ಘಟಕ ಹಾಗೂ ವೆಂಟಿಲೇಟರ್‌ಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಎದೆಯಲ್ಲಿ ಆತಂಕ ಮನೆ ಮಾಡುತ್ತದೆ.

ಐದು ಜಿಲ್ಲೆಗಳಿಗೆ ದೊಡ್ಡಾಸ್ಪತ್ರೆ ಎನಿಸಿಕೊಂಡಿರುವ ಮಿಮ್ಸ್‌ ಆಸ್ಪತ್ರೆಯ ಎಲ್ಲಾ ವಿಭಾಗಗಳಲ್ಲಿ ಕೇವಲ 17 ಐಸಿಯುಗಳಿವೆ. 9 ವೈದ್ಯಕೀಯ ತೀವ್ರ ನಿಗಾ ಘಟಕ (ಎಂಐಸಿಯು), 7 ಶ್ವಾಸಕೋಶ ತೀವ್ರ ನಿಗಾ ಘಟಕ (ಆರ್‌ಐಸಿಯು), 1 ಹೃದ್ರೋಗ ಅತೀ ತೀವ್ರ ನಿಗಾ ಘಟಕ (ಐಐಸಿಯು) ಗಳಿವೆ. ಪ್ರತಿ ಘಟಕದಲ್ಲಿ 10 ಹಾಸಿಗೆಯ ಸೌಲಭ್ಯವಿದೆ.

ಆತಂಕಕಾರಿ ವಿಷಯ ಎಂದರೆ ಎಲ್ಲಾ ಐಸಿಯುಗಳಲ್ಲಿ ತಲಾ ಒಂದೊಂದು ಕೂಡ ವೆಂಟಿಲೇಟರ್‌ ಇಲ್ಲ. ಒಟ್ಟಾರೆ ಜಿಲ್ಲಾಸ್ಪತ್ರೆಯಲ್ಲಿ ಕೇವಲ 10 ವೆಂಟಿಲೇಟರ್‌ ಇವೆ. ಇದನ್ನು ನೋಡಿದರೆ ನಮ್ಮ ಜಿಲ್ಲಾಸ್ಪತ್ರೆ ಕೊರೊನಾ ಸೋಂಕು ಹರಡುವುದನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತದೆ ಎಂಬ ಅನುಮಾನ ಮೂಡುತ್ತದೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಶೂನ್ಯ: ಇನ್ನೂ ಆತಂಕಕಾರಿ ವಿಷಯ ಏನೆಂದರೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಮಳವಳ್ಳಿ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದೂ ವೆಂಟಿಲೇಟರ್‌ ಇಲ್ಲ. ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ತಲಾ 3, ಮದ್ದೂರಿನಲ್ಲಿ 2 ವೆಂಟಿಲೇಟರ್‌ ಇವೆ. ಎಲ್ಲಾ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ ಒಂದೊಂದು ಮಾತ್ರ ಐಸಿಯುಗಳಿವೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್‌ಗಳಿಂದ ರೋಗ ನಿರ್ವಹಣೆ ಸಾಧ್ಯವಾಗದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್‌ ಬಳಸಿಕೊಳ್ಳಲಾಗುವುದು. ಈಗಾಗಲೇ ಜಿಲ್ಲಾಧಿಕಾರಿಗಳು ಖಾಸಗಿ ವೈದ್ಯರ ಸಭೆ ಕರೆದು ವಿಷಯ ತಿಳಿಸಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

135 ಜನರ ಮೇಲೆ ನಿಗಾ: ಚೀನಾ, ದುಬೈ, ಲಂಡನ್‌ ಸೇರಿ ಇತರ ದೇಶಗಳಿಂದ ಜಿಲ್ಲೆಗೆ ವಾಪಸ್‌ ಬಂದಿರುವ 145 ಜನರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಅವರಲ್ಲಿ 20 ಮಂದಿಯನ್ನು ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರುವ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಕೋವಿಡ್‌– 19 ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ.

ತಾಲ್ಲೂಕು ವೈದ್ಯಾಧಿಕಾರಿ, ಸಹಾಯಕ ಅಧಿಕಾರಿ ಹಾಗೂ ಪೊಲೀಸ್‌ ಸಿಬ್ಬಂದಿ ಪ್ರತಿದಿನ ಗೃಹ ವಾಸ್ತವ್ಯದಲ್ಲಿರುವವರ ಮನೆಗೆ ತೆರಳಿ ವೈದ್ಯಕೀಯ ತಪಾಸಣೆ ನಡೆಸುತ್ತಿದ್ದಾರೆ. ವಾಪಸ್‌ ಬಂದವರು ಹಾಗೂ ಅವರ ಮನೆಯ ಸದಸ್ಯರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಐಸಿಯುಗಳಲ್ಲಿ ಸೌಲಭ್ಯ ಇದೆಯೇ: ಜಿಲ್ಲಾಸ್ಪತ್ರೆ ಹಾಗೂ ಇತರ ತಾಲ್ಲೂಕು ಆಸ್ಪತ್ರೆಗಳಲ್ಲಿ ಇರುವ ಐಸಿಯುಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿಲ್ಲ. ಇರುವ ಯಂತ್ರಗಳೂ ಕೆಟ್ಟು ಹೋಗಿದ್ದು ರಿಪೇರಿ ಮಾಡಿಸಿಲ್ಲ ಎಂದು ಅಲ್ಲಿ ಚಿಕಿತ್ಸೆ ಪಡೆದಿರುವ ಹಳೆಯ ರೋಗಿಗಳು ಆರೋಪ ಮಾಡುತ್ತಾರೆ.

‘ಜಿಲ್ಲಾಸ್ಪತ್ರೆಯಲ್ಲಿರುವ ಐಸಿಯುಗಳು ಹೆಸರಿಗಷ್ಟೇ ತೀವ್ರ ನಿಗಾ ಘಟಕಗಳಾಗಿವೆ. ಅಲ್ಲಿಯ ಯಂತ್ರಗಳು ಕೆಟ್ಟು ಹೋಗಿ ಎಷ್ಟೋ ವರ್ಷ ಕಳೆದಿದ್ದರೂ ರಿಪೇರಿ ಮಾಡಿಸಿಲ್ಲ. ಬಿಪಿ ಪರೀಕ್ಷಿಸುವ ಯಂತ್ರವೂ ಸರಿಯಾಗಿ ಕೆಲಸ ಮಾಡುವುದಿಲ್ಲ. ಎಷ್ಟೊ ರೋಗಿಗಳು ಇಲ್ಲಿಯ ದುರವಸ್ಥೆ ಕಂಡು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ. ಕೆಲವು ವೇಳೆ ವೈದ್ಯರೇ ನಿಜ ಒಪ್ಪಿಕೊಂಡು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಹೀಗಿರುವಾಗ ಜಿಲ್ಲಾಸ್ಪತ್ರೆ ಕೋವಿಡ್– 19 ನಿರ್ವಹಿಸಲು ಹೇಗೆ ಸನ್ನದ್ಧವಾಗಿದೆ ಎಂಬ ಬಗ್ಗೆ ಅನುಮಾನ ಮೂಡುತ್ತದೆ’ ಎಂದು ಹಳೆಯ ರೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

*******

ಗೃಹವಾಸ್ತವ್ಯಕ್ಕೆ ಒಕ್ಕಲಿಗರ ಭವನ ಬಳಕೆ?

ವಿದೇಶದಿಂದ ಜಿಲ್ಲೆಗೆ ಬಂದಿರುವವರಲ್ಲಿ ಕೊರೊನಾ ಸೋಂಕಿನ ಶಂಕೆ ಕಂಡುಬಂದರೆ ಪ್ರತ್ಯೇಕವಾಗಿ ಗೃಹ ವಾಸ್ತವ್ಯ (ಹೋಮ್‌ ಕ್ವಾರಂಟೈನ್‌)ದಲ್ಲಿ ಇರಿಸುವುದು ಅನಿವಾರ್ಯ. ಜಿಲ್ಲಾಸ್ಪತ್ರೆಯ ಪ್ರತ್ಯೇಕವಾರ್ಡ್‌ಗೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಅಲ್ಲಿ ಉಂಟಾಗುವ ಗೊಂದಲ ತಪ್ಪಿಸುವುದಕ್ಕಾಗಿ ನಗರದ ಹೊರವಲಯದಲ್ಲಿರುವ ಒಕ್ಕಲಿಗರ ಸಂಘದ ಭವನ (ವಿದ್ಯಾರ್ಥಿನಿಯರ ವಸತಿ ನಿಲಯ) ಬಳಸಿಕೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ದಾಖಲು ಮಾಡುವವರ ಸಂಖ್ಯೆ ಜಾಸ್ತಿಯಾದರೆ ಸಾಮಾನ್ಯ ರೋಗಿಗಳಿಗೂ ಆತಂಕದ ಸ್ಥಿತಿ ನಿರ್ಮಾಣವಾಗುತ್ತದೆ. ಈ ಗೊಂದಲ ತಪ್ಪಿಸುವುದಕ್ಕಾಗಿ ಬೇರೆ ಕಟ್ಟಡ ಬಳಸಿಕೊಳ್ಳಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಅದರಲ್ಲಿ ಮುಖ್ಯವಾಗಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಒಕ್ಕಲಿಗರ ಸಂಘದ ಕಟ್ಟಡ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

ಸಂಘದ ಕಟ್ಟಡದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಡೆಸಲಾಗುತ್ತಿತ್ತು. ಆದರೆ ಈಗ ಅಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಕಟ್ಟಡದಲ್ಲಿ ನಾಲ್ಕು ಅಂತಸ್ತುಗಳಿದ್ದು ಪ್ರತಿ ಅಂತಸ್ತಿನಲ್ಲಿ ದೊಡ್ಡ ಎಂಟು ಕೊಠಡಿಗಳಿವೆ. ಇದು ನಗರದ ಹೊರವಲಯವೂ ಆಗಿರುವುದರಿಂದ ಆರೋಗ್ಯ ಇಲಾಖೆ ಈ ಕಟ್ಟಡ ಬಳಸಿಕೊಳ್ಳಲು ಮುಂದಾಗಿದೆ.

‘ಒಕ್ಕಲಿಗರ ಸಂಘದ ಕಟ್ಟಡದ ಜೊತೆಗೆ ಇತರೆ ಕಟ್ಟಡಗಳನ್ನೂ ಗೃಹ ವಾಸ್ತವ್ಯಕ್ಕೆ ಬಳಸಿಕೊಳ್ಳಲೂ ಚಿಂತನೆ ನಡೆಸಲಾಗುತ್ತಿದೆ. ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಶುಕ್ರವಾರ ಅಧಿಕೃತವಾಗಿ ತೀರ್ಮಾನ ಪ್ರಕಟಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

********

ಚುಂಚನಗಿರಿ ಆಸ್ಪತ್ರೆ: 12 ವೆಂಟಿಲೇಟರ್‌

ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿಯಲ್ಲಿ ಪ್ರತ್ಯೇಕ ವಾರ್ಡ್‌ ಸ್ಥಾಪಿಸಲಾಗಿದೆ. ಆದಿಚುಂಚನಗಿರಿ ಆಸ್ಪತ್ರೆಗೆಯಲ್ಲಿ 12 ವೆಂಟಿಲೇಟರ್‌ ಇದ್ದರೆ ಮಾದೇಗೌಡ ಆಸ್ಪತ್ರೆಯಲ್ಲಿ 4 ಇವೆ.

***

ಆಸ್ಪತ್ರೆ ಐಸಿಯು ವೆಂಟಿಲೇಟರ್‌
ಜಿಲ್ಲಾಸ್ಪತ್ರೆ 17 10
ಕೆಆರ್‌ಪೇಟೆ 01 03
ಮಳವಳ್ಳಿ 01 00
ನಾಗಮಂಗಲ 01 03
ಪಾಂಡವಪುರ 01 00
ಶ್ರೀರಂಗಪಟ್ಟಣ 01 00
ಮದ್ದೂರು 01 02
ಒಟ್ಟು 23 18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT