ಮಂಡ್ಯ: ಕೋವಿಡ್ ನಿಯಂತ್ರಣಕ್ಕಾಗಿ ದೀಪಾವಳಿ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಲಿನ್ಯಕಾರಕ ಪಟಾಕಿ ನಿಷೇಧಿಸಿ ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಿದೆ. ಆದರೆ ಹಸಿರು ಪಟಾಕಿಗಳ ಬಗ್ಗೆ ಸ್ಪಷ್ಟ ನಿರ್ದೇಶನಗಳಿಲ್ಲದ ಕಾರಣ ವ್ಯಾಪಾರಿಗಳಲ್ಲಿ ಗೊಂದಲ ಮೂಡಿದೆ.
ನಗರದ ಒಳಾಂಗಣ ಕ್ರೀಡಾಂಗಣದ ಪಕ್ಕದ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಈಗಾಗಲೇ 20 ಮಾರಾಟ ಶೆಡ್ ನಿರ್ಮಾಣ ಮಾಡಲಾಗಿದೆ. ಹಬ್ಬಕ್ಕೆ ಕೆಲವೇ ದಿನ ಬಾಕಿ ಇರುವಾಗ ಹಸಿರು ಪಟಾಕಿ ಮಾರಾಟಕ್ಕೆ ಆದೇಶ ಹೊರಡಿಸಿರುವುದು ಮಾಲೀಕರನ್ನು ಚಿಂತೆಗೀಡು ಮಾಡಿದೆ. ಲಕ್ಷಾಂತರ ಬಂಡವಾಳ ಹಾಕಿದ್ದು, ಪಟಾಕಿ ಮಾರಾಟವಾಗದಿದ್ದರೆ ಮುಂದೇನು ಎಂಬ ಚಿಂತೆ ಅವರನ್ನು ಕಾಡುತ್ತಿದೆ.
ಆದರೆ, ಜಿಲ್ಲಾಡಳಿತದಿಂದಲೂ ಪಟಾಕಿ ನಿಷೇಧದ ಬಗ್ಗೆ ಯಾವುದೇ ಸೂಚನೆ ಇಲ್ಲದಿರುವ ಕಾರಣ ವ್ಯಾಪಾರಿಗಳು ಶೆಡ್ ನಿರ್ಮಾಣ ಕೆಲಸ ಮುಂದುವರಿಸಿದ್ದಾರೆ. ಹಬ್ಬದ ವೇಳೆ ಮಾರಾಟಕ್ಕೆ ಯಾವುದೇ ತೊಂದರೆ ಎದುರಾಗಲಾರದು ಎಂಬ ವಿಶ್ವಾಸದೊಂದಿಗೆ ಅವರು ಮಾರಾಟಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
‘ಈ ಬಾರಿ ಕೋವಿಡ್ ಇರುವುದರಿಂದ ರಾಕೆಟ್, ಲಕ್ಷ್ಮಿ ಪಟಾಕಿ, ಅಟಾಮ್ ಬಾಂಬ್ ಸೇರಿದಂತೆ ದೊಡ್ಡ ಪಟಾಕಿ ಮಾರಾಟ ಮಾಡುವುದಿಲ್ಲ. ಆದರೂ ಲಕ್ಷಾಂತರ ಬಂಡವಾಳ ಹಾಕಿ ಪಟಾಕಿ ತರಿಸಿರುವ ವ್ಯಾಪಾರಿಗಳಲ್ಲಿ ಗೊಂದಲ ಇರುವುದು ನಿಜ’ ಎಂದು ಪಟಾಕಿ ಮಾಲೀಕರ ಸಂಘ, ನಗರ ಘಟಕದ ಅಧ್ಯಕ್ಷ ಪರಮೇಶ್ ಹೇಳಿದರು.
ಪಟಾಕಿ ಅಂಗಡಿ ಮಾಲೀಕರು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 50ರಷ್ಟು ಕಡಿಮೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಪ್ರತಿ ಬಾರಿಯೂ ₹ 4–5 ಲಕ್ಷ ಬಂಡವಾಳ ಹೂಡಿಕೆ ಮಾಡುತ್ತಿದ್ದ ಮಾಲೀಕರು ಈ ಬಾರಿ ಕೇವಲ ₹ 2–3 ಲಕ್ಷ ಬಂಡವಾಳ ಹೂಡಿಕೆಗೆ ಸೀಮಿತಗೊಳಿಸಿದ್ದಾರೆ.
ಈ ಹಿಂದೆ ಗಣೇಶ ಸಂದರ್ಭದಲ್ಲಿ ಮಣ್ಣಿನ ಗಣಪತಿಯನ್ನೇ ಕೂರಿಸಿ, ಪೂಜಿಸಬೇಕು ಎಂಬ ನಿಯಮ ಮಾಡಲಾಗಿತ್ತು. ಆದರೆ ಹಬ್ಬಕ್ಕೆ 2–3 ದಿನ ಇರುವಾಗ 4 ಅಡಿಗಿಂತ ಹೆಚ್ಚು ಎತ್ತರದ ಮೂರ್ತಿ ಕೂರಿಸುವಂತಿಲ್ಲ ಎಂದು ಆದೇಶ ಮಾಡಲಾಯಿತು. ಆಗ ಕಲಾವಿದರು ತಾವು ತಯಾರಿಸಿದ ಮೂರ್ತಿ ಮಾರಾಟವಾಗದೇ ನಷ್ಟ ಅನುಭವಿಸಿದ್ದರು. ಈಗಲೂ ದೀಪಾವಳಿ ಹಬ್ಬಕ್ಕೆ ನಾಲ್ಕೈದು ದಿನ ಬಾಕಿ ಇರುವಾಗ ಸರ್ಕಾರ ಪಟಾಕಿ ಮಾರಾಟದ ಬಗ್ಗೆ ಸ್ಪಷ್ಟ ನಿರ್ದೇಶನ ನೀಡದಿರುವುದು ಮಾರಾಟಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
‘ಹಬ್ಬಕ್ಕೆ ಒಂದು ತಿಂಗಳು ಇದ್ದಾಗಲೇ ನಿಷೇಧದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ನಾವು ಬಂಡವಾಳ ಹಾಕುತ್ತಲೇ ಇರಲಿಲ್ಲ. ಕೇವಲ ಹಸಿರು ಪಟಾಕಿಯನ್ನಷ್ಟೇ ತರಿಸುತ್ತಿದ್ದೆವು. ಈಗ ಸಾಮಾನ್ಯ ಪಟಾಕಿ ತರಿಸಿದ ನಂತರ ಆದೇಶ ಹೊರಡಿಸಿದ್ದು, ಇತ್ತ ಕಂಪನಿಯವರು ವಾಪಸ್ ಪಡೆದುಕೊಂಡರೆ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇಲ್ಲವಾದರೆ ನಷ್ಟವಾಗುತ್ತದೆ’ ಎಂದು ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.
‘ಸಾಮಾನ್ಯ ಪಟಾಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಜನರು ಕರೆ ಮಾಡಿ ಮಾಹಿತಿ ನೀಡಬಹುದು. ಯಾರೇ ಆಗಲಿ ಪರಿಸರ ಮಾಲಿನ್ಯಕಾರಕ ಪಟಾಕಿ ಮಾರಿದರೆ ಪರಿಸರ ನಿಯಂತ್ರಣ ಮಂಡಳಿ, ನಗರಸಭೆ, ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಲಿವೆ’ ಎಂದು ನಗರಸಭೆ ಪೌರಾಯುಕ್ತ ಎಸ್.ಲೋಕೇಶ್ ಹೇಳಿದರು.
ಉತ್ಪಾದನೆಯಾಗದ ಹಸಿರು ಪಟಾಕಿ
‘ನಮ್ಮ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಪಟಾಕಿ ಉತ್ಪಾದನೆಯಾಗಿಲ್ಲ, ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಸರ್ಕಾರ ಮೊದಲೇ ಹಸಿರು ಪಟಾಕಿ ಬಳಕೆ ಬಗ್ಗೆ ನಿರ್ಧಾರ ಕೈಗೊಂಡಿದ್ದರೆ ಕಾರ್ಖಾನೆಗಳು ಉತ್ಪಾದನೆಯತ್ತ ಗಮನ ಹರಿಸುತ್ತಿದ್ದವು’ ಎಂದು ಪಟಾಕಿ ಅಂಗಡಿ ಮಾಲೀಕರು ತಿಳಿಸಿದರು.
‘ಹಸಿರು ಪಟಾಕಿ ಉತ್ಪಾದಿಸಿದರೂ ಅವು ಸಾಮಾನ್ಯ ಪಟಾಕಿಗಿಂತಲೂ ದುಬಾರಿಯಾಗಿವೆ. ಹೀಗಾಗಿ ಸಾಮಾನ್ಯ ಜನರು ಅವುಗಳನ್ನು ಖರೀದಿಸಲು ಮುಂದಾಗುವುದಿಲ್ಲ’ ಎಂದು ಅವರು ಹೇಳಿದರು.
***
ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಯಾವ ಯಾವ ಹಸಿರು ಪಟಾಕಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆಯಲಾಗುವುದು. ಮಾಲಿನ್ಯಕಾರಕ ಪಟಾಕಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ.
–ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.