ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವರಾಜ’ ಠಾಣೆಗಳ ಲೋಕಾರ್ಪಣೆ

₹ 3.2 ಕೋಟಿ ವೆಚ್ಚದ ಕಟ್ಟಡ: ಶಾಸಕ ಎಲ್‌.ನಾಗೇಂದ್ರ ಲೋಕಾರ್ಪಣೆ
Last Updated 9 ಫೆಬ್ರವರಿ 2023, 11:28 IST
ಅಕ್ಷರ ಗಾತ್ರ

ಮೈಸೂರು: ₹ 3.2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ದೇವರಾಜ ಪೊಲೀಸ್‌ ಹಾಗೂ ಸಂಚಾರ ಠಾಣೆಗಳ ನೂತನ ಕಟ್ಟಡಗಳು ಕೃಷ್ಣಾವಿಲಾಸ ರಸ್ತೆಯಲ್ಲಿ ಗುರುವಾರ ಲೋಕಾರ್ಪಣೆಗೊಂಡವು.

ಧನ್ವಂತರಿ ರಸ್ತೆಯ ಕೆ.ಆರ್‌.ಆಸ್ಪತ್ರೆ ಆವರಣದ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದೇವರಾಜ ಪೊಲೀಸ್‌ ಠಾಣೆ ಹಾಗೂ ಲಷ್ಕರ್ ಪೊಲೀಸ್‌ ಠಾಣೆಯಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಿಸುತ್ತಿದ್ದ ದೇವರಾಜ ಸಂಚಾರ ಪೊಲೀಸ್‌ ಠಾಣೆಗಳನ್ನು ನೂತನ ಕಟ್ಟಡಗಳಿಗೆ ಸ್ಥಳಾಂತರಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಹಳೆಯ ಕಟ್ಟಡಗಳು ಶಿಥಿಲಗೊಂಡಿದ್ದರಿಂದ ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿ 2022ರ ಮಾರ್ಚ್‌ 1ರಂದು ಆರಂಭಗೊಂಡು, ಡಿ.16ರಂದು ಕಾಮಗಾರಿ ಮುಕ್ತಾಯಗೊಂಡಿತ್ತು. 347.01 ಚ.ಮೀ ವಿಸ್ತೀರ್ಣದಲ್ಲಿ ಠಾಣೆ ಕಟ್ಟಡಗಳನ್ನು ಕಟ್ಟಲಾಗಿದೆ. ದಶಕಗಳ ಕಾಲ ಹಳೆಯ ಕಟ್ಟಡಗಳಲ್ಲಿ ಜೀವಭಯದಲ್ಲಿ ಕೆಲಸ ಮಾಡಿದ್ದ ಪೊಲೀಸ್‌ ಸಿಬ್ಬಂದಿ ಇದೀಗ ಹೊಸ ಕಟ್ಟಡದಲ್ಲಿ ಕಾರ್ಯಾಚರಿಸಲು ಉತ್ಸುಕರಾಗಿದ್ದಾರೆ.

ಹೊಸ ಠಾಣೆಗಳಿಗೆ ಅನುದಾನ: ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದ ಶಾಸಕ ಎಲ್‌.ನಾಗೇಂದ್ರ ಮಾತನಾಡಿ, ‘ರಾಜ್ಯದಲ್ಲಿ 110 ಪೊಲೀಸ್‌ ಠಾಣೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅನುದಾನ ನೀಡಿದ್ದು, ನಗರದಲ್ಲಿ 4 ಠಾಣೆಗಳು ನಿರ್ಮಾಣವಾಗಿವೆ. ಇನ್ನೆರಡು ಹೊಸ ಠಾಣೆಗಳ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಲಾಗುವುದು’ ಎಂದರು.

‘ಜನಸ್ನೇಹಿ ಠಾಣೆಗಳ ನಿರ್ಮಾಣವೇ ಸರ್ಕಾರದ ಗುರಿಯಾಗಿದೆ. ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು. ಪೊಲೀಸರಿಗೆ ಉತ್ತಮ ಮೂಲಸೌಕರ್ಯ ಇರುವ ಸುಸಜ್ಜಿತ ಠಾಣೆಗಳ ಅವಶ್ಯಕತೆಯಿದ್ದು, ಉನ್ನತೀಕರಿಸಲಾಗುತ್ತಿದೆ’ ಎಂದು ತಿಳಿಸಿದರು.

ಮೇಯರ್‌ ಶಿವಕುಮಾರ್‌ ಮಾತನಾಡಿ, ‘ಪೊಲೀಸರು ಹಾಗೂ ನಾಗರಿಕರು ಪರಸ್ಪರ ಸಹಕಾರದಿಂದ ಮಾತ್ರ ಅಪರಾಧ ಚಟುವಟಿಕೆಗಳನ್ನು ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ದಂಡ ವಸೂಲಿ ಮಾಡುವುದೇ ಪೊಲೀಸರ ಕಾರ್ಯವಲ್ಲ. ಹಾಗೆಯೇ ನಾಗರಿಕರು ಕಾನೂನು ಉಲ್ಲಂಘನೆ ಮಾಡದೇ ಸಂಚಾರ ನಿಯಮಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಆರ್‌.ರಘು, ಪಾಲಿಕೆ ಸದಸ್ಯರಾದ ಎಂ.ಸತೀಶ, ಪ್ರಮೀಳಾ ಭರತ್, ಡಿಸಿಪಿಗಳಾದ ಎಂ.ಮುತ್ತುರಾಜ್, ಎಸ್‌.ಜಾಹ್ನವಿ, ಎಸಿಪಿಗಳಾದ ಪರಶುರಾಮಪ್ಪ,ಜಿ.ಎಸ್.ಗಜೇಂದ್ರ ಪ್ರಸಾದ್, ಶಾಂತಮಲ್ಲಪ್ಪ, ಬಿ.ಶಿವಕುವಾರ್, ಕೆ.ಎನ್.ಸುರೇಶ್, ಎಸ್.ಇ.ಗಂಗಾಧರಸ್ವಾಮಿ, ಕೆ.ಅಮರನಾರಾಯಣ ಇದ್ದರು.

‘ಅಪರಾಧ ನಿಯಂತ್ರಣಕ್ಕೆ ಗಮನ’: ‘ನಗರದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆಯು ಹೆಚ್ಚಿನ ಗಮನ ನೀಡಿದೆ’ ಎಂದು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್ ಹೇಳಿದರು.

‘ಠಾಣೆಗಳು ಜನಸ್ನೇಹಿಯಾಗಿವೆ. ಜನರ ರಕ್ಷಣೆ ಹಾಗೂ ಭದ್ರತೆ ನೀಡುವುದೇ ಪೊಲೀಸರ ಕೆಲಸವಾಗಿದೆ. ಸಾರ್ವಜನಿಕರು ಯಾವುದೇ ಸಮಸ್ಯೆಗಳು ಇದ್ದಲ್ಲಿ ಠಾಣೆಗೆ ಬಂದು ಪರಿಹರಿಸಿಕೊಳ್ಳಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT