ಸಂತೇಬಾಚಹಳ್ಳಿ (ಮಂಡ್ಯ ಜಿಲ್ಲೆ): ‘ಮಾರೇನಹಳ್ಳಿ ಗ್ರಾಮಕ್ಕೆ ನುರಿತ ವೈದ್ಯರನ್ನು ನೇಮಕ ಮಾಡಿ ಹಾಗೂ ಗ್ರಾಮದಲ್ಲಿಯೇ ಒಂದು ವಾರ ಆಂಬುಲೆನ್ಸ್ ನಿಲ್ಲಿಸಿ ಜನರ ಅನಾರೋಗ್ಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ವಾಂತಿ– ಭೇದಿಯಿಂದ ಇಬ್ಬರು ಮೃತಪಟ್ಟು, 17ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ರೋಗಿಗಳ ಮನೆ ಬಳಿಗೆ ತೆರಳಿ ಸಮಸ್ಯೆ ಆಲಿಸಿದರು.
‘ಗ್ರಾಮದಲ್ಲಿ 17 ಜನರಿಗೆ ವಾಂತಿ– ಭೇದಿಯಾಗಿದ್ದು 11 ಮಂದಿ ಗುಣಮುಖರಾಗಿದ್ದಾರೆ. ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ. ವೈದ್ಯರು ಮೂರು ದಿನಗಳಿಂದ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ, ಓಆರ್‌ಎಸ್ ಮತ್ತು ಮಾತ್ರೆಗಳನ್ನು ನೀಡಿದ್ದಾರೆ. ನುರಿತ ವೈದ್ಯರನ್ನು ಒಂದು ವಾರ ಗ್ರಾಮಕ್ಕೆ ನೇಮಕ ಮಾಡಲಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ನಿಗಾ ಇಡುತ್ತೇವೆ. ಗ್ರಾಮಸ್ಥರು ಆತಂಕ ಪಡಬಾರದು’ ಎಂದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ‘ಗ್ರಾಮ ಪಂಚಾಯಿತಿಯಿಂದ ಸಕಲ ಸವಲತ್ತು ನೀಡಲಾಗುವುದು. ಗ್ರಾಮಗಳಲ್ಲಿ ಪಿಟ್ ಗುಂಡಿ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಚರಂಡಿ ಸ್ವಚ್ಛತೆ ಹಾಗೂ ರಸ್ತೆ ದುರಸ್ತಿಗೆ ಸೂಚನೆ ನೀಡಿದ್ದೇವೆ’ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಪರಿವೀಕ್ಷಣಾ ಅಧಿಕಾರಿ ಡಾ.ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ತಹಶೀಲ್ದಾರ್ ಆದರ್ಶ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ ಸೇರಿದಂತೆ ವೈದ್ಯರು ಮತ್ತು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು.
‘ಅಶುದ್ಧ ನೀರೇ ಸಮಸ್ಯೆಗೆ ಕಾರಣ’
‘ಗ್ರಾಮದಲ್ಲಿ ವಾಂತಿ–ಭೇದಿಯಿಂದ ಹಲವಾರು ಮಂದಿ ಅಸ್ವಸ್ಥಗೊಂಡು, ಇಬ್ಬರು ಮೃತಪಟ್ಟಿದ್ದಾರೆ. ಶುದ್ಧವಾದ ನೀರು ಪೂರೈಕೆಯಾಗದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು, ಅನೈರ್ಮಲ್ಯ ವಾತಾವರಣವಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಸ್ಪಂದಿಸುತ್ತಿಲ್ಲ. ಶುದ್ಧ ನೀರು ಪೂರೈಸಿ, ಜನರ ಆರೋಗ್ಯ ರಕ್ಷಿಸಿ’ ಎಂದು ಗ್ರಾಮಸ್ಥ ನಿಂಗರಾಜು ಮತ್ತು ಗ್ರಾಮದ ಮುಖಂಡರು ಆಗ್ರಹಿಸಿದರು.
ನೀರು ಕಲುಷಿತವಾಗಿಲ್ಲ: ಪ್ರಯೋಗಾಲಯದ ವರದಿ
‘ಮಾರೇನಹಳ್ಳಿ ಗ್ರಾಮದ ಜವರಮ್ಮ (110) ಅವರ ಸಂಬಂಧಿ ಕುಂದೂರು ಗ್ರಾಮದ ಕಾಳಮ್ಮ (76) ವಾಂತಿ–ಭೇದಿಯಿಂದ ಸತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ವಾಂತಿ–ಭೇದಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ‘ವೈರಲ್ ಡಯೇರಿಯಾ’ದಿಂದ ವಾಂತಿ–ಭೇದಿಯಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಗ್ರಾಮಕ್ಕೆ ಪೂರೈಕೆಯಾಗುವ ಕುಡಿಯುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿದ್ದು, ಕಲುಷಿತವಾಗಿಲ್ಲ ಕುಡಿಯಲು ಯೋಗ್ಯವಾಗಿದೆ ಎಂದು ವರದಿ ಬಂದಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.