ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಜನರ ಅಚ್ಚುಮೆಚ್ಚಿನ ನಾಟಕದ ಮೇಸ್ಟ್ರು

ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕೃಷ್ಣಪ್ಪ, ಸೇವೆ ಗುರುತಿಸದ ಸಂಘ ಸಂಸ್ಥೆಗಳು
Last Updated 3 ಜುಲೈ 2018, 13:55 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮೀಣ ಭಾಗದ ಜನರಿಗೆ ಪೌರಾಣಿಕ ನಾಟಕ ಕಲಿಸುವ ಕೃಷ್ಣಪ್ಪ ರಂಗಭೂಮಿಯ ಹಿರಿಯ ಕಲಾವಿದ. ಅಭಿನಯದ ಜೊತೆಗೆ ನಿರ್ದೇಶನವನ್ನೂ ಮಾಡುವ ಅವರು ಗ್ರಾಮೀಣ ಭಾಗದ ಅಚ್ಚುಮೆಚ್ಚಿನ ನಾಟಕದ ಮೇಷ್ಟು ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ತಾಲ್ಲೂಕಿನ ಗಣಿಗ ಗ್ರಾಮದ ಕೃಷ್ಣಪ್ಪ ಸುತ್ತಮುತ್ತಲ ಹಳ್ಳಿ ಜನರಿಗೆ ಪೌರಾಣಿಕ ನಾಟಕ ಕಲಿಸುತ್ತಾ ಕಲೆಯನ್ನು ಜೀವಂತವಾಗಿಟ್ಟಿದ್ದಾರೆ. ಕೀಲಾರ, ನಾಗಮಂಗಲ, ಕೆ.ಆರ್.ಪೇಟೆ, ಮಳವಳ್ಳಿ ಸೇರಿ ವಿವಿಧೆಡೆ ರಂಗಕಲಾ ತಂಡಗಳಿಗೆ ಅವರು ಅಭಿನಯದ ಪಟ್ಟು ಹೇಳಿಕೊಟ್ಟಿದ್ದಾರೆ. ಶಿವಪುರ, ಗಣಿಗ ಅಂಕನಹಳ್ಳಿ, ಗುಡಿಗೇನಹಳ್ಳಿಗಳಲ್ಲಿ ನಾಟಕ ತಂಡಗಳಿದ್ದು ಕಲಾವಿದರ ಪಾಲಿನ ಪ್ರೀತಿಯ ಗುರುವಾಗಿದ್ದಾರೆ.

ಕೃಷ್ಣಪ್ಪ ಮೂಡಲಸೋಮನಹಳ್ಳಿ ಗ್ರಾಮದವರು. ತಂದೆಯ ಕಾಲದಲ್ಲೇ ಗಣಿಗ ಗ್ರಾಮಕ್ಕೆ ಬಂದು ನೆಲೆಸಿದರು. ಅವರ ತಂದೆ ಕೂಡ ರಂಗಭೂಮಿ ಕಲಾವಿದ ಆಗಿದ್ದರು. ತಂದೆಯಿಂದಲೇ ರಂಗಭೂಮಿ ಕಲೆ ಬಳುವಳಿಯಾಗಿ ಬಂದಿರುವುದು ವಿಶೇಷ. ಸಣ್ಣ ವಯಸ್ಸಿನಲ್ಲೇ ಮುಖಕ್ಕೆ ಬಣ್ಣ ಹಚ್ಚಿದ ಅವರು ಹಲವು ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಮುಖ್ಯಪಾತ್ರದಲ್ಲಿ ಮಿಂಚಿರುವ ಅವರು ಜನರ ಮೆಚ್ಚುಗೆಯನ್ನೂ ಗಳಿಸಿದವರು. ಕುರುಕ್ಷೇತ್ರ ನಾಟಕದಲ್ಲಿ ಅರ್ಜುನ ಪಾತ್ರ ಮಾಡುತ್ತಿದ್ದ ಅವರು ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಸರುವಾಸಿಯಾಗಿದೆ.

ಕುರುಕ್ಷೇತ್ರ, ರಾಮಾಯಣ, ದಯಾಚರಿತೆ, ತ್ರಿಪುರ ಸಂಹಾರ, ಮೌಲಾಸುರನ ವಧೆ, ನಲ್ಲತಂಗ, ಶನಿಮಹಾತ್ಮೆ, ನಳದಮಯಂತಿ ಮುಂತಾದ ಪೌರಾಣಿಕ ನಾಟಕಗಳಲ್ಲಿ ಕೃಷ್ಣಪ್ಪ ಅಭಿನಯಿಸಿದ್ದಾರೆ. ನಾಟಕದ ಒಳ–ಹೊರ ಅರಿತ ಅವರು ನಿರ್ದೇಶನಕ್ಕೂ ಕೈಹಾಕಿ ಯಶಸ್ವಿಯಾದರು. ಹಾರ್ಮೋನಿಯಂ ನುಡಿಸುತ್ತಾ ಕಲಾವಿದರಿಗೆ ಅಭಿನಯ ಹೇಳಿಕೊಟ್ಟ ಅವರು ಗ್ರಾಮೀಣ ಭಾಗದಲ್ಲಿ ನಾಟಕದ ಮೇಸ್ಟ್ರು ಎಂದೇ ಪ್ರಸಿದ್ಧಿ ಪಡೆದರು. 30ನೇ ವಯಸ್ಸಿನ ಯುವಕನಾಗಿದ್ದಾಗಲೇ ನಾಟಕ ನಿರ್ದೇಶಿಸಿ ಭರವಸೆ ಮೂಡಿಸಿದರು.

‘ಇಲ್ಲಿಯವರೆಗೂ ನೂರಕ್ಕೂ ಹೆಚ್ಚು ನಾಟಕ ಕಲಿಸಿದ್ದೇನೆ. ಸುತ್ತಲಿನ ಗ್ರಾಮದಲ್ಲಿ ಗಣಿಗ ಡ್ರಾಮಾ ಮೇಷ್ಟ್ರು ಕೃಷ್ಣಪ್ಪ ಎಂದು ಗುರುತಿಸುವಂತೆ ಕೆಲಸ ಮಾಡಿದ್ದೇನೆ. ಗ್ರಾಮಗಳ ಯುವಕರು ಒಟ್ಟಾಗಿ ಸೇರಿ ನಾಟಕ ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ ನಾಟಕ ಕಲಿಸುವಂತೆ ನನಗೆ ಆಹ್ವಾನ ಕೊಡುತ್ತಾರೆ. ನಮ್ಮ ಗಣಿಗ ಗ್ರಾಮದಲ್ಲಿ ಸುಮಾರು 70 ರಿಂದ 80 ಮನೆಗಳಿವೆ. ಸಣ್ಣ ಗ್ರಾಮವಾದರೂ ಎಂಟರಿಂದ ಹತ್ತು ನಾಟಕಗಳನ್ನು ಕಲಿಸಿ ಪ್ರದರ್ಶನ ಮಾಡಿಸಿದ್ದೇನೆ’ ಎಂದು ಕೃಷ್ಣಪ್ಪ ಹೇಳಿದರು.

ನಾಟಕವೇ ಆಸ್ತಿ:
ಕೃಷ್ಣಪ್ಪ ಅವರಿಗೆ ಗಣಿಗ ಗ್ರಾಮದಲ್ಲಿ ಯಾವುದೇ ಸ್ವಂತ ಆಸ್ತಿ ಇಲ್ಲ. ಅವರಿಗೆ ನಾಟಕಗಳೇ ಆಸ್ತಿ. ನಾಟಕ ಮಾಡಿಕೊಂಡು 30 ವರ್ಷದ ಹಿಂದೆ ಗಣಿಗ ಗ್ರಾಮಕ್ಕೆ ಬಂದು ಅವರು ನೆಲಸಿದ್ದಾರೆ. ಚಿಕ್ಕ ಮನೆಯೊಂದನ್ನು ಕಟ್ಟಿಕೊಂಡು ಜನರಲ್ಲಿ ಕಲೆಯ ಅಭಿರುಚಿ ಮೂಡಿಸಿದ್ದಾರೆ. ಅವರ ಪತ್ನಿ ಕೂಲಿ ಕೆಲಸ ಮಾಡುತ್ತಾರೆ. ಮೂರು ಹೆಣ್ಣು ಮಕ್ಕಳಿದ್ದಾರೆ. ಒಬ್ಬ ಪುತ್ರ ಬೆಂಗಳೂರಿನಲ್ಲಿ ಆಟೊ ಓಡಿಸಿಕೊಂಡು ಜೀವ ಕಟ್ಟಿಕೊಂಡಿದ್ದಾರೆ. ವೃದ್ದಾಪ್ಯ ವೇತನ ₹ 500ರಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕೃಷ್ಣಪ್ಪ ಅವರನ್ನು ಯಾವ ಸಂಘ ಸಂಸ್ಥೆಗಳೂ ಗುರುತಿಸಿಲ್ಲ.

‘ನನಗೆ ಈಗ 66 ವರ್ಷ ವಯಸ್ಸು. ರಂಗಭೂಮಿಗೆ ನನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ. ಕಲಾವಿದರಿಗೆ ಸಿಗುವ ಯಾವ ಸೌಲಭ್ಯವೂ ನನಗೆ ಸಿಕ್ಕಿಲ್ಲ. ಕಲಾವಿದರ ಪಿಂಚಣಿ ಪಡೆಯುವ ಕುರಿತ ಮಾಹಿತಿಯನ್ನು ನನಗೆ ಯಾರೂ ತಿಳಿಸಿಕೊಡಲಿಲ್ಲ. ನನ್ನ ಜೊತೆಯಲ್ಲಿ ನಾಟಕ ಮಾಡುತ್ತಿದ್ದ ಹಾಗೂ ವಾದ್ಯ ನುಡಿಸುತ್ತಿದ್ದ ಬಹುತೇಕ ಕಲಾವಿದರು ಪಿಂಚಣಿ ಪಡೆದುಕೊಳ್ಳುತ್ತಿದ್ದಾರೆ. ನನಗೆ ಮಾತ್ರ ಯಾವುದೇ ಸೌಲಭ್ಯ ಇಲ್ಲದೆ ಕಷ್ಟದ ಜೀವನ ಮಾಡುತ್ತಿದ್ದೇನೆ. ಮಂಡಿ ನೋವು ಹೆಚ್ಚಾಗಿ ಹಾರ್ಮೋನಿಯಂ ನುಡಿಸಲೂ ಸಾಧ್ಯವಾಗುತ್ತಿಲ್ಲ’ ಎಂದು ಕೃಷ್ಣಪ್ಪ ನೋವು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT