ಶನಿವಾರ, ಜನವರಿ 25, 2020
19 °C
ಮಕ್ಕಳ ಗ್ರಾಮ ಸಭೆಯಲ್ಲಿ ಸಮಸ್ಯೆ ಬಿಚ್ಚಿಟ್ಟ ವಿದ್ಯಾರ್ಥಿಗಳು

ಕುಡಿಯುವ ನೀರಿನ ಸಮಸ್ಯೆ: ಕಣ್ಣೀರಿಟ್ಟ ವಿದ್ಯಾರ್ಥಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ತಾಲ್ಲೂಕಿನ ಗ್ರಾಮ ಮಾಯಿಗೋನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪಿ.ನೇರಲೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಹಲವು ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಪಿ.ನೇರಲೆಕೆರೆ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಲಾವಣ್ಯಾ ತಮ್ಮ ಶಾಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಮುಂದಿಟ್ಟು ವೇದಿಕೆಯಲ್ಲಿ ಕಣ್ಣೀರಿಟ್ಟ ಘಟನೆಯೂ ನಡೆಯಿತು.

ಕಾರ್ಯಕ್ರಮದಲ್ಲಿ ಪಿ.ನೇರಲೆಕೆರೆ ಪ್ರೌಢಶಾಲೆಯ ವಿದ್ಯಾರ್ಥಿನಿ ದಿವ್ಯಾ ಮಾತನಾಡಿ, ‘ನಮ್ಮ ಶಾಲೆಗೆ ಪರಿಸರ ಮಿತ್ರ ಸೇರಿದಂತೆ ವಿವಿಧ ಪ್ರಶಸ್ತಿ ಬಂದಿವೆ. ಆದರೆ ಶಾಲೆಗೆ ಕಾಂಪೌಂಡ್ ಇಲ್ಲ. ಜೊತೆ ಸರಿಯಾದ ಶೌಚಾಲಯ ವ್ಯವಸ್ಥೆಯೂ ಇಲ್ಲ’ ಎಂದು ಹೇಳಿದರು.

ಶಿವನಹಳ್ಳಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಜೇಂದ್ರ ಪ್ರಸಾದ್, ‘ಗ್ರಾಮದಲ್ಲಿ ಶೌಚಾಲಯಗಳಿವೆ. ಆದರೆ, ಅವುಗಳ ಪಿಟ್ ಗುಂಡಿಗಳು ತುಂಬುತ್ತವೆ ಎಂಬ ಕಾರಣಕ್ಕೆ ಶೌಚಾಲಯಕ್ಕೆ ಹೋಗಲು ಬಿಡದೇ ಶಾಲೆಯ ಮುಂದೆಯೇ ಶೌಚ ಮಾಡಿಸುವ ಜೊತೆಗೆ ಮದ್ಯಪಾನ ಮತ್ತು ಧೂಮಪಾನ ಮಾಡಿ ಶಾಲೆಯ ಆವರಣದಲ್ಲಿ ಗಲೀಜು ಮಾಡಲಾಗುತ್ತಿದೆ’ ಎಂದು ಸಮಸ್ಯೆ ವಿವರಿಸಿದರು.

ಮಕ್ಕಳ ಸಮಸ್ಯೆಗೆ ಪ್ರತಿಕ್ರಿಯಿಸಿದ ಪಿಡಿಇ ವಿಸ್ಮಿತಾ, ‘ಮಕ್ಕಳು ಹೇಳಿದ ಸಮಸ್ಯೆಗಳನ್ನು ದಾಖಲು ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಗೆಹರಿಸಲು ಪ್ರಯತ್ತಿಸುತ್ತೇನೆ’ ಎಂದು ಹೇಳಿದರು.

ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ದೈಹಿಕ ಶಿಕ್ಷಣ ಸಂಯೋಜಕ ಶಿವಣ್ಣಗೌಡ, ‘ಮಕ್ಕಳ ಗ್ರಾಮ ಸಭೆ ಎಂಬುದು ಸರ್ಕಾರದ ಬಹು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳು ತಮ್ಮ ವ್ಯಾಪ್ತಿಯ ಗ್ರಾಮದ ಪರಿಸರ ಮತ್ತು ಶಾಲಾ ವಾತಾವರಣದಲ್ಲಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಒಂದು ಉತ್ತಮ ವೇದಿಕೆಯಾಗಿದೆ. ಮಕ್ಕಳ ಆಲೋಚನೆಗಳು ಮತ್ತು ಚಿಂತನೆಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ಅವರಿಗೆ ಸಮಸ್ಯೆಗಳನ್ನು ಹೇಳಲು ಅವಕಾಶ ನೀಡಿರುವುದು ಅರ್ಥಪೂರ್ಣವಾಗಿದೆ’ ಎಂದರು.

ಮಕ್ಕಳ ಗ್ರಾಮಸಭೆಯಲ್ಲಿ 13 ಶಾಲೆಯ 300 ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ಬಹುಮಾನಗಳನ್ನು ಪಡೆದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮೇಗೌಡ, ಉಪಾಧ್ಯಕ್ಷೆ ಗಾಯತ್ರಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದರಾಜು, ಗ್ರಾಮಸ್ಥರು ಮತ್ತು ವಿವಿಧ ಶಾಲೆಯ ಶಿಕ್ಷಕರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು