ಮಂಡ್ಯ: ಜಿಲ್ಲೆಯಲ್ಲಿ ನಿರ್ಭಯ ಯೋಜನೆಯಡಿ ಒಟ್ಟು 40 ದ್ವಿಚಕ್ರ ಗಸ್ತು ವಾಹನಗಳಿಗೆ ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಂಗಳವಾರ ಡಿ.ಎ.ಆರ್. ಮೈದಾನದಲ್ಲಿ ಚಾಲನೆ ನೀಡಿದರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಈ ಹಿಂದೆ ನಿರ್ಭಯ ಯೋಜನೆಯಡಿ ನೀಡಲಾಗಿದ್ದ ಗಸ್ತು ಬೈಕ್ ಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದ ಕಾರಣ ಎಲ್ಲಾ ಬೈಕ್ ಗಳಿಗೆ ಹೊಸರೂಪ ಕೊಟ್ಟು, ಸೈರನ್, ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಇವು 5 ಬೈಕ್ ಗಳಂತೆ ಗುಂಪು ವ್ಯವಸ್ಥೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಸತತವಾಗಿ ಸಂಚರಿಸಲಿಕ್ಕೆ ಉಪಯೋಗವಾಗುವ ರೀತಿಯಲ್ಲಿ ಸಿದ್ಧಗೊಳಿಸಲಾಗಿದೆ ಎಂದರು.
ಮಹಿಳೆಯರ ರಕ್ಷಣೆ, ಅಪರಾಧಗಳನ್ನು ತಡೆಯುವುದು ಹಾಗೂ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವುದು ದ್ವಿಚಕ್ರ ಗಸ್ತು ವಾಹನ ಚಾಲನ ಕಾರ್ಯಕ್ರಮದ ಉದ್ದೇಶವಾಗಿದೆ. ತೊಂದರೆಗೆ ಒಳಗಾದ ಯಾವುದೇ ವ್ಯಕ್ತಿಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದಾಗ ಅವರನ್ನು ರಕ್ಷಣೆ ಮಾಡಲು ಈ ಬೈಕ್ ಸಹಕಾರಿಯಾಗಿದೆ ಎಂದರು.
ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ 40 ದ್ವಿಚಕ್ರ ಗಸ್ತು ವಾಹನಗಳು ಜಿಲ್ಲೆಯ 7 ತಾಲ್ಲೂಕು ಕೇಂದ್ರಗಳಲ್ಲಿ ಮಹಿಳೆಯರ ರಕ್ಷಣೆ ಹಾಗೂ ಅಪರಾಧ ತಡೆ ಸಂಬಂಧ ಕಾರ್ಯ ನಿರ್ವಹಿಸಲಿವೆ.
ಶಾಲಾ– ಕಾಲೇಜುಗಳ ಪ್ರಾರಂಭ ಮತ್ತು ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಕಿರುಕುಳ/ ಲೈಂಗಿಕ ಕಿರುಕುಳ ಹಾಗೂ ಚುಡಾಯಿಸುವ ಘಟನೆಗಳು ನಡೆಯದಂತೆ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಗಸ್ತು ಮಾಡಿ ರಕ್ಷಣೆ ನೀಡುತ್ತದೆ.
ಮಹಿಳೆಯರು ಹೆಚ್ಚಾಗಿ ಕೆಲಸ ನೀಡುವ ಸ್ಥಳ, ಕಾರ್ಖಾನೆ, ಇತರೆ ಸ್ಥಳಗಳ ಕಡೆಗಳಲ್ಲಿ ಗಸ್ತು ಮಾಡಿ ಮಹಿಳೆಯರ ಮುಕ್ತ ಚಲನವಲನಕ್ಕೆ ಅನುವು ಮಾಡಿ ಮಾಡಿಕೊಡುವುದು. ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಸಂತೆ ಕಡೆಗಳಲ್ಲಿ ಗಸ್ತು ಮಾಡಿ ಮಹಿಳೆಯರ ಸರಗಳ್ಳತನ, ಮಹಿಳೆಯರ ಮೇಲೆ ಕಿರುಕುಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಜರುಗದಂತೆ ಕ್ರಮ ವಹಿಸುವುದು.
ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ರೌಡಿಗಳು, ಸಮಾಜಘಾತುಕರು, ದುಷ್ಕರ್ಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ಗಲಾಟೆ ಮಾಡದಂತೆ ಮಹಿಳೆಯರ ಮತ್ತು ಮಕ್ಕಳ ಸುಗಮ ಸಂಚಾರಕ್ಕೆ ಕ್ರಮವಹಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ ಮಾಡಿ ಮಹಿಳೆಯರು ಮತ್ತು ಮಕ್ಕಳ ತಿರುಗಾಟಕ್ಕೆ ಅಡಚಣೆಯುಂಟು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಕೂಲವಾಗಲಿದೆ.
ಸಾರ್ವಜನಿಕರು/ಮಹಿಳೆಯರು ತಮ್ಮ ದೂರುಗಳಿದ್ದಲ್ಲಿ ಮಂಡ್ಯ ಜಿಲ್ಲೆಯ ನಿಸ್ತಂತು ಕೇಂದ್ರದ ದೂ.ಸಂ: 08232-224888 ಗೆ ಅಥವಾ 112ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಲ್ಲಿ, ಮಾಂಡವ್ಯ ರಕ್ಷಣೆಯ ವಾಹನ ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ನೆರವು ನೀಡಿಲಿದ್ದಾರೆ.
ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.