ಗುರುವಾರ , ನವೆಂಬರ್ 26, 2020
20 °C
ಶಾಸಕ ಎನ್‌.ಮಹೇಶ್‌ ಅಭಿಮತ

ಒಳಮೀಸಲಾತಿ ವಿಚಾರ ಸಂಕಿರಣ: ‘ಸದಾಶಿವ ವರದಿ ಜಾರಿಗೆ ಸರ್ಕಾರಕ್ಕಿಲ್ಲ ಆಸಕ್ತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ದಲಿತ ಸಂಘರ್ಷ ಸಮಿತಿ ನಡೆದ ‘ಒಳಮೀಸಲಾತಿ; ಅಸ್ತ್ರ-ದಲಿತರ ಮುಂದಿನ ಸವಾಲುಗಳು’ ಕುರಿತು ವಿಚಾರ ಸಂಕಿರಣದಲ್ಲಿ ಶಾಸಕ ಎನ್‌.ಮಹೇಶ್‌ ಮಾತನಾಡಿದರು

ಮಂಡ್ಯ: ‘ಇತ್ತೀಚಿನ ದಿನಗಳಲ್ಲಿ ಒಂದು ಸಮುದಾಯದ ಅವಕಾಶವನ್ನು ಅದೇ ಸಮುದಾಯದ ಇನ್ನೊಬ್ಬರು ಕಸಿದುಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಸದಾಶಿವ ಆಯೋಗ ಒಳಮೀಸಲಾತಿ ಶಿಫಾರಸು ಮಾಡಿದೆ. ಆದರೆ ಅದನ್ನು ಜಾರಿಗೆ ತರುವುದರಲ್ಲಿ ಯಾವುದೇ ಸರ್ಕಾರ ಆಸಕ್ತಿ ತೋರಿಸಿಲ್ಲ’ ಎಂದು ಶಾಸಕ ಎನ್ ಮಹೇಶ್ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದ ವತಿಯಿಂದ ನಗರದ ರೈತ ಸಭಾಂಗಣದಲ್ಲಿ ಭಾನುವಾರ ನಡೆದ ಒಳಮೀಸಲಾತಿ ಅಸ್ತ್ರ-ದಲಿತರ ಮುಂದಿನ ಸವಾಲುಗಳು ಜಿಲ್ಲಾಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2005ರಲ್ಲಿ ಸದಾಶಿವ ಆಯೋಗ ರಚನೆ ಮಾಡಲಾಗಿತ್ತು. ಅದು 2012ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರಗಳು ಅದನ್ನು ಜಾರಿ ಮಾಡುವ ಚಿಂತನೆ ನಡೆಸಿಲ್ಲ. ಜಾತ್ಯತೀತ, ಸಮಾಜವಾದ ನಾಯಕ, ದಲಿತಪರ ಎಂದು ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದರೂ ಅದನ್ನು ಜಾರಿ ಮಾಡಲಿಲ್ಲ. ಆಗ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಆಂಜನೇಯ ಅವರು ಮೂರು ಬಾರಿ ವರದಿಯನ್ನು ವಿಧಾನಸಭೆಗೆ ತೆಗೆದುಕೊಂಡು ಹೋದರೂ ಅದನ್ನು ಮಂಡಿಸಲು ಅವಕಾಶ ನೀಡಲಿಲ್ಲ’ ಎಂದರು.

‘ರಾಷ್ಟ್ರಮಟ್ಟದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ಮಂಡಲ್ ಆಯೋಗವು ಶೇ 52 ಮೀಸಲಾತಿ ನೀಡಬಹುದು ಎಂದು ವರದಿ ನೀಡಿತ್ತು. ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಅದನ್ನು ಜಾರಿಗೆ ತಂದಿರಲಿಲ್ಲ. ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿಯಾಗಿದ್ದ ವಿಪಿ ಸಿಂಗ್ ಅವರು ಅದನ್ನು ಜಾರಿಗೆ ತರುವ ಮೂಲಕ ಮೀಸಲಾತಿ ನೀಡಿದರು’ ಎಂದರು.

ರೈತ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಮಾತನಾಡಿ ‘ಮೀಸಲಾತಿ ಎಂಬುದು ದಲಿತರಿಗೆ ಮಾತ್ರ ಇರುವುದು ಎಂಬ ತಪ್ಪು ಕಲ್ಪನೆ ಇದೆ. ಹಿಂದುಳಿದ ವರ್ಗದವರೆಲ್ಲರಿಗೂ ಮೀಸಲಾತಿ ಇದೆ. ಎಲ್ಲರೂ ಮೀಸಲಾತಿ ಪಡೆಯಲು ಅಂಬೇಡ್ಕರ್‌ ಅವರೇ ಕಾರಣರಾಗಿದ್ದಾರೆ. ಅಂದು ಅವರು ಸಂವಿಧಾನದಲ್ಲಿ ಮೀಸಲಾತಿ ಅಳವಡಿಸದಿದ್ದರೆ ಇಂದು ತುಳಿತಕ್ಕೊಳಗಾದವರಿಗೆ ಯಾವುದೇ ಅವಕಾಶಗಳು ಸಿಗುತ್ತಿರಲಿಲ್ಲ’ ಎಂದರು.

‘ಖಾಸಗೀಕರಣ ಎಂಬುದು ಮೀಸಲಾತಿಯನ್ನು ಅಪ್ರಸ್ತುತವನ್ನಾಗಿಸುವ ಹುನ್ನಾರವಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಹಲವಾರು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದು, ಇದರ ಹಿಂದೆ ಮೀಸಲಾತಿಯನ್ನು ಕಿತ್ತೊಗೆಯುವ ಹುನ್ನಾರ ಅಡಗಿದೆ. ಮೊದಲು ಇದನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು’ ಎಂದು ಹೇಳಿದರು.

ರಾಜ್ಯ ಘಟಕದ ಸಂಚಾಲಕ ವಿಜಯನಗರಸಿಂಗ್‌ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ನಂಜುಂಡ ಮೌರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ಕೆ.ಟಿ.ರಂಗಯ್ಯ, ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ತಾಳಶಾಸನ ಮೋಹನ್‌, ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್‌ ಕೊತ್ತೇಗೆರೆ ಇದ್ದರು.

ಬರಿಗೈ ಸಿಗುವ ಅಪಾಯ

‘ಕಾಡಿನಲ್ಲಿರುವವರ ಅವಕಾಶಗಳನ್ನು ಊರಿನಲ್ಲಿರುವವರು ಪಡೆಯುತ್ತಿದ್ದಾರೆ. ಗುಂಪಿನಲ್ಲಿ ಗೋವಿಂದ ಎನ್ನುವುದನ್ನು ಬಿಟ್ಟು ಅವರ ಸಮುದಾಯದವರೊಂದಿಗೆ ಸ್ಪರ್ಧೆ ಮಾಡಬೇಕು. ಇದಕ್ಕಾಗಿ ಸದಾಶಿವ ವರದಿಯ ಶಿಫಾರಸುಗಳು ಜಾರಿಯಾಗಬೇಕು. ಎಡಗೈ ಬಲಗೈ ಎಂದು ಕಿತ್ತಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಬರಿಗೈನಲ್ಲಿ ಇರಬೇಕಾಗುತ್ತದೆ. ಎಲ್ಲರೂ ಒಂದಾಗಿ ಸಮ ಸಮಾಜ ನಿರ್ಮಿಸಬೇಕು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು