ಮಂಡ್ಯ: ರಾಜ್ಯ ಸರ್ಕಾರಕ್ಕೆ ಅಸ್ಥಿರತೆ ಉಂಟು ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಕರ್ನಾಟಕದ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ‌್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ಕಾರ‌್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ತಿಂಗಳುಗಳಿಂದ ಕಾಂಗ್ರೆಸ್ ಪಕ್ಷದ ರಾಜ್ಯ ಆಡಳಿತದ ಮೇಲೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷವು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವಂತೆ ಕೇಂದ್ರ ಬಿಜೆಪಿ ಸರ್ಕಾರದಿಂದ ಒತ್ತಡ ಹಾಕಿಸಿ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿಯಾಗಿ ಕೆಲಸ ಮಾಡುವ ಬದಲು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ನಿಯಂತ್ರ ಕಾಯಿದೆ 17-ಎ ಅಡಿ ಅನುಮತಿ ನೀಡುವ ವೇಳೆ ಪಾಲಿಸಬೇಕಾಗಿರುವ ನಿಯಮಗಳನ್ನುಪ (ಎಸ್‌ಓಜಿ) ಉಲ್ಲಂಘಿಸಲಾಗಿದೆ. 2021ನೇ ಸೆಪ್ಟೆಂಬರ್ 3ರಂದು ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಲಾಗಿದೆ. ಇದನ್ನು ಪರಿಗಣಿಸಿಲ್ಲ ಎಂದು ಕಿಡಿಕಾರಿದರು.
ರಾಜ್ಯಪಾಲರು ದೇಶದ ರಾಷ್ಟ್ರಪತಿಗಳ ಪ್ರತಿನಿಧಿಯಾಗಿದ್ದು, ಸಂವಿಧಾನದ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವುದು ಅಕ್ಷಮ್ಯ. ರಾಜ್ಯಪಾಲರ ಈ ನಡಾವಳಿಯನ್ನು ಖಂಡಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಎಂ.ವಿ. ಕೃಷ್ಣ, ಕೆ.ಜೆ. ಶಿವಕುಮೂರ್ತಿ, ಜಿ.ಆರ್. ರವಿ, ವೆಂಕಟೇಶ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.