ಬುಧವಾರ, ಜನವರಿ 29, 2020
29 °C
ಪಟ್ಟಣ ಪ್ರದೇಶದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಮೊದಲು

ಮಂಡ್ಯ | ಇ–ಕ್ಷಣ ದಾಖಲಾತಿ ಪರಿಶೀಲನೆ ಶೇ 80ರಷ್ಟು ಪೂರ್ಣ

ಶರತ್‌ ಎಂ.ಆರ್‌. Updated:

ಅಕ್ಷರ ಗಾತ್ರ : | |

ಮಂಡ್ಯ: ಜಾತಿ, ಆದಾಯ ಮತ್ತು ವಾಸ ಸ್ಥಳ ಪ್ರಮಾಣ ಪತ್ರಗಳನ್ನು ಸ್ಥಳದಲ್ಲೇ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ‘ಇ–ಕ್ಷಣ’ ಯೋಜನೆಯ (ಒಟಿಸಿ– ಓವರ್‌ ದಿ ಕೌಂಟರ್‌) ದಾಖಲಾತಿ ಪರಿಶೀಲನಾ ಪಕ್ರಿಯೆ ಪಟ್ಟಣ ಪ್ರದೇಶದಲ್ಲಿ ಶೇ 80ರಷ್ಟು ಪೂರ್ಣಗೊಂಡಿದ್ದು, ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.

ಪ್ರಮಾಣ ಪತ್ರ ಮುದ್ರಿಸುವ ಪ್ರಕ್ರಿಯೆ ಶೇ 59ರಷ್ಟು ಪೂರ್ಣಗೊಂಡಿದ್ದು ಜಿಲ್ಲೆ 3ನೇ ಸ್ಥಾನ ಪಡೆದಿದೆ. ಜಿಲ್ಲೆಯ 7 ತಾಲ್ಲೂಕುಗಳಲ್ಲಿನ 2,39,444 ಪಡಿತರ ಚೀಟಿಯಲ್ಲಿರುವ ಸದಸ್ಯರ ಮಾಹಿತಿ ಸಂಗ್ರಹಗೊಂಡಿದ್ದು, ಇವರ ಜಾತಿ, ಆದಾಯ ಮತ್ತು ವಾಸಸ್ಥಳ ಪ್ರಮಾಣ ಪತ್ರಗಳು ಶೇ 100ರಷ್ಟು ಮುದ್ರಣಗೊಂಡಿವೆ. ಎಲ್ಲಾ ತಾಲ್ಲೂಕುಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ವರದಿ ಸಲ್ಲಿಕೆಯಾಗಿ ವಿಷಯ ನಿರ್ವಾಹಕರ ಬಳಿ 37,399, ಉಪ ತಹಶೀಲ್ದಾರ್‌ ಬಳಿ 3,054, ತಹಶೀಲ್ದಾರ್‌ ಬಳಿ 18,151 ಅರ್ಜಿಗಳು ಅನುಮೋದನೆಯಾಗಬೇಕಿದೆ. ಇಲ್ಲಿಯವರೆಗೆ 4,79,234 ಪ್ರಮಾಣ ಪತ್ರ ಮುದ್ರಿಸಲಾಗಿದೆ.

ಆಹಾರ, ನಾಗರಿಕ ಸರಬರಾಜು ಇಲಾಖೆ ನೀಡಿರುವ ಪಡಿತರ ಚೀಟಿ ದತ್ತಾಂಶವನ್ನು ಕಂದಾಯ ಇಲಾಖೆ ಅಧಿಕಾರಿಗಳು ಪಡೆದು, ದತ್ತಾಂಶದಿಂದ ತಪಾಸಣಾ ಪಟ್ಟಿ ತಯಾರಿಸಿ ಗ್ರಾಮ ಲೆಕ್ಕಾಧಿಕಾರಿಗಳು ಮನೆ ಮನೆಗೆ ತೆರಳಿ ಸರ್ವೆ ನಡೆಸಿ ಕುಟುಂಬದ ವಾರ್ಷಿಕ ಆದಾಯ, ಜಾತಿ ವಿವರ, ವಾಸಸ್ಥಳ ವಿವರ ಪಡೆದು ತಂತ್ರಾಂಶದಲ್ಲಿ ಸಂಗ್ರಹ ಮಾಡಲಾಗುತ್ತದೆ.

ಸಂಗ್ರಹಿಸಿದ ಎಲ್ಲಾ ವಿವರಗಳಿಗೆ ಗ್ರಾಮ ಲೆಕ್ಕಾಧಿಕಾರಿ, ಉಪ ತಹಶೀಲ್ದಾರ್‌ ಹಾಗೂ ತಹಶೀಲ್ದಾರ್‌ ಡಿಜಿಟಲ್‌ ಸಹಿ ಹಾಕಲಾಗಿರುತ್ತದೆ. ಅರ್ಜಿದಾರ ತನಗೆ ಅಗತ್ಯವಿರುವ ಪ್ರಮಾಣ ಪತ್ರ ಪಡೆಯಲು ಪಡಿತರ ಚೀಟಿ ಸಂಖ್ಯೆ ನೀಡಿದಾಗ ಅವರ ಹೆಸರಿನಲ್ಲಿರುವ ದತ್ತಾಂಶ ಶೋಧಿಸಲಾಗುತ್ತದೆ. ಅರ್ಜಿದಾರ ಕೇಳಿದ ಜಾತಿ, ಆದಾಯ, ವಾಸಸ್ಥಳ ದೃಢೀಕರಣ ಪತ್ರ ಈಗಾಗಲೇ ಇ–ಕ್ಷಣದ ಮೂಲಕ ಅನುಮೋದನೆ ಪಡೆದುಕೊಂಡಿದ್ದರೆ ಅದನ್ನು ತಾಲ್ಲೂಕು ಕಚೇರಿ ಅಥವಾ ನಾಡ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಸ್ಥಳದಲ್ಲೇ ಪ್ರಮಾಣಪತ್ರ ಪಡೆಯಬಹುದು.

‘ಇ–ಕ್ಷಣ ಯೋಜನೆ ದತ್ತಾಂಶ ಸಂಗ್ರಹ ಮತ್ತು ಪ್ರಮಾಣ ಪತ್ರ ಮುದ್ರಣದಲ್ಲಿ ಕಳೆದ ವರ್ಷದಿಂದೀಚೆಗೆ 1 ಅಥವಾ 2ನೇ ಸ್ಥಾನ ಪಡೆಯುತ್ತಲೇ ಇದೆ. ಕಂದಾಯ ಇಲಾಖೆ ಅಧಿಕಾರಿಗಳು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಈ ಕ್ಷಣದ ಮೂಲಕ ಪಡೆಯಲು ನೆರವಾಗುತ್ತಿದ್ದಾರೆ. ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಹೇಳಿದರು.

ದತ್ತಾಂಶ ಸಂಗ್ರಹವಾಗದಿದ್ದಲ್ಲಿ ಹಿಂದಿನ ಪ್ರಕ್ರಿಯೆಯೇ ಮುಂದುವರಿಯಲಿದೆ. ಹೊಸ ಅರ್ಜಿ ಹಾಕಿ, ಅಧಿಕಾರಗಳ ವರದಿ ಬಂದ ನಂತರ ಪ್ರಮಾಣ ಪತ್ರ ನೀಡಲಾಗುತ್ತದೆ. ಹಿಂದೆ ಪಡೆದಿರುವ ಜಾತಿ, ಆದಾಯ, ವಾಸಸ್ಥಳ ಪ್ರಮಾಣ ಪತ್ರದ ಅವಧಿ ಮುಗಿದಿದ್ದರೆ ಮತ್ತೆ ಪಡೆಯಲು ಹಿಂದಿನ ಪ್ರಮಾಣ ಪತ್ರದಲ್ಲಿನ ಸಂಖ್ಯೆ ಹೇಳಿದರೆ ಹೊಸ ಪ್ರಮಾಣ ಪತ್ರ ನೀಡಲಾಗುತ್ತಿದೆ.

‘ಹಳೆಯ ಪದ್ಧತಿಯಲ್ಲಿ ಪ್ರಮಾಣ ಪತ್ರ ಮಾಡಿಸಿಕೊಡುವುದಾಗಿ ಮಧ್ಯವರ್ತಿಗಳು ಅರ್ಜಿದಾರರನ್ನು ಶೋಷಣೆ ಮಾಡುತ್ತಿದ್ದರು. ಕೆಲಸ ಬೇಗ ಆಗಲಿ ಎಂದು ದುಡ್ಡು ನೀಡಿ ಪ್ರಮಾಣ ಪತ್ರ ಮಾಡಿಸಿಕೊಳ್ಳುತ್ತಿದ್ದರು. ಸರ್ಕಾರದ ಮಹತ್ತರ ಯೋಜನೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ಸರ್ಕಾರಿ ಸೇವೆ ಬೆರಳ ತುದಿಯಲ್ಲೇ ಸಿಗುತ್ತದೆ’ ಎಂದು ಅಶೋಕ್‌ನಗರದ ಶಿವಕುಮಾರ್ ಹೇಳಿದರು.

ಮಧ್ಯವರ್ತಿ ಇಲ್ಲ, ಕಾಯಬೇಕಿಲ್ಲ

ಈಗಾಗಲೇ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಅಧಿಕಾರಿಗಳು ಸರ್ವೆ ಕಾರ್ಯ ನಡೆಸುತ್ತಿದ್ದು, ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ನಂತರ ಮಾಹಿತಿ ಸಂಗ್ರಹಿಸಿ ಅನುಮೋದನೆ ನೀಡಿ ಪ್ರಮಾಣ ಪತ್ರ ದೃಢೀಕರಿಸಲಾಗುತ್ತದೆ. ಪಡಿತರ ಚೀಟಿ ಸಂಖ್ಯೆ ನೀಡಿ ಮತ್ತೆ ಕ್ಷಣದಲ್ಲಿಯೇ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಇದು ನಿತ್ಯ ಕಚೇರಿಗೆ ಅಲೆದಾಟ ತಪ್ಪಿಸಲಿದ್ದು, ಕ್ಷಣದಲ್ಲೇ ಸೇವೆ ಲಭ್ಯವಾಗಲಿದೆ. ಮಕ್ಕಳ ಶಾಲಾ, ಕಾಲೇಜು ದಾಖಲಾತಿ ಸಂದರ್ಭದಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತಿದೆ.


ಟಿ.ಯೋಗೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ

ಅರ್ಹರಿಗೆ ಸರ್ಕಾರಿ ಸೌಲಭ್ಯ

ಈ ಹಿಂದೆ ಅರ್ಜಿದಾರ ನೀಡಿದ ಮಾಹಿತಿ ಆಧರಿಸಿ ಗ್ರಾಮ ಲೆಕ್ಕಿಗ, ರಾಜಸ್ವ ನಿರೀಕ್ಷಕರ ವರದಿ ಆಧಾರದ ಮೇಲೆ ತಹಶೀಲ್ದಾರ್‌ ಪ್ರಮಾಣ ಪತ್ರ ನೀಡುತ್ತಿದ್ದರು. ಈ ಸಂದರ್ಭದಲ್ಲಿ ತಪ್ಪು, ಸುಳ್ಳು ಮಾಹಿತಿ ನೀಡಿ ತಮಗೆ ಬೇಕಾದ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯ ಪಡೆಯುತ್ತಿದ್ದರು. ಇದರಿಂದ ಅರ್ಹರಿಗೆ ಯೋಜನೆಯ ಲಾಭ ತಲುಪುವಂತಾಗಿತ್ತು. ಆದರೆ ಈ ಯೋಜನೆಯಿಂದ ವರದಿಯು ಶಾಶ್ವತವಾಗಿ ಉಳಿಯುವ ಕಾರಣ ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಾಸ್ತವ ವರದಿ ಬರೆಯಬೇಕಾಗುತ್ತದೆ. ಇದರಿಂದ ಅಕ್ರಮ, ಅನಧಿಕೃತ ದಾಖಲೆ ಪ್ರಮಾಣ ಪತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಇದಲ್ಲದೆ ಅರ್ಹ ಹೊಂದಿರುವ ವ್ಯಕ್ತಿಗಳಿಗೆ ಅಗತ್ಯ ಪ್ರಮಾಣ ಪತ್ರ ಮಧ್ಯವರ್ತಿಗಳ ಹಾವಳಿ ಇಲ್ಲದೆ ಸಿಕ್ಕಂತಾಗುತ್ತದೆ.

ಗ್ರಾಮಾಂತರ, ನಗರ ಪ್ರದೇಶಗಳಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಮನೆ ಬಳಿ ಬಂದಾಗ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು