ಶನಿವಾರ, ಡಿಸೆಂಬರ್ 14, 2019
24 °C
ದೀಪಾವಳಿ ಹಬ್ಬ ಮುಗಿದರೂ ಉಡುಗೊರೆಗೆ ಕೊನೆ ಇಲ್ಲ, ಮತದಾರರ ಸೆಳೆಯಲು ಶತಪ್ರಯತ್ನ

ಕೆ.ಆರ್‌.ಪೇಟೆಯಲ್ಲಿ ‘ಬೀಗರೂಟದ ಕೂಪನ್‌‘!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮಂಡ್ಯ: ಅತ್ಯಂತ ಸೂಕ್ಷ್ಮ ರೂಪ ಪಡೆದಿರುವ ಕೆ.ಆರ್‌.ಪೇಟೆ ಉಪ ಚುನಾವಣಾ ಕಣದ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಅದರ ನಡುವೆಯೂ ಅಭ್ಯರ್ಥಿಗಳು ನಾಮುಂದು, ತಾಮುಂದು ಎಂಬಂತೆ ಹಣ ಹಾಗೂ ಉಡುಗೊರೆಗಳ ಮಳೆ ಸುರಿಸುತ್ತಿದ್ದಾರೆ. ಮದ್ಯ, ಮಾಂಸದೂಟದ ಸಮಾರಾಧನೆ ನಡೆಸುತ್ತಿದ್ದಾರೆ.

ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುವವರೆಗೆ ಹಳ್ಳಿಹಳ್ಳಿಗಳಲ್ಲಿ ಬಹಿರಂಗವಾಗಿ ಬೀಗರೂಟದ ಏರ್ಪಾಡುಗಳು ನಡೆದಿದ್ದವು. ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರ ಹಿರಿಯ ಪುತ್ರಿಯ ವಿವಾಹವಾಗಿ ವರ್ಷ ಕಳೆದಿದ್ದು, ‘ಮಗಳ ಮದುವೆ ನಂತರ ಕ್ಷೇತ್ರದ ಮತದಾರರಿಗೆ ಬೀಗರೂಟ ಹಾಕಿಸಲು ಸಾಧ್ಯವಾಗಿರಲಿಲ್ಲ. ಈಗ ಆಯೋಜನೆ ಮಾಡುತ್ತಿದ್ದೇನೆ’ ಎಂದು ನಾರಾಯಣಗೌಡ ಹೇಳಿದ್ದರು.

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಬಹಿರಂಗ ಔತಣಕೂಟಗಳು ಸ್ಥಗಿತಗೊಂಡಿವೆ. ಆದರೆ, ಜನರಿಗೆ ಊಟ ಹಾಕಿಸಲು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ‘ಟೋಕನ್‌ ಪದ್ಧತಿ’ ಜಾರಿಯಾಗಿದ್ದು  ‘ಊಟ ಹಾಗೂ ಮದ್ಯದ ಚೀಟಿ’ ವಿತರಿಸುತ್ತಿದ್ದಾರೆ. ಆ ಟೋಕನ್‌ ತೋರಿಸಿದರೆ ಕೆ.ಆರ್‌.ಪೇಟೆಯ ಹೋಟೆಲ್‌, ಬಾರ್‌, ವೈನ್‌ಶಾಪ್‌, ಡಾಬಾಗಳಲ್ಲಿ ಉಚಿತ ಊಟ, ಮದ್ಯ ಸಿಗುತ್ತದೆ. ಚೀಟಿಯನ್ನು ‘ಬೀಗರೂಟದ ಟೋಕನ್‌’ ಎಂದೇ ಕರೆಯಲಾಗುತ್ತಿದೆ.


ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ದೀಪಾವಳಿ ಶುಭಾಶಯ ಕೋರಿ ಮತದಾರರಿಗೆ ವಿತರಿಸುತ್ತಿದ್ದಾರೆ ಎನ್ನಲಾದ ಸೀರೆ

‘ಕೆ.ಆರ್‌.ಪೇಟೆಯಲ್ಲಿ ಹಾದುಹೋಗಿರುವ ಮೈಸೂರು– ಶಿವಮೊಗ್ಗ ರಾಜ್ಯ ಹೆದ್ದಾರಿ ಬದಿಯ ಪ್ರಮುಖ ಹೋಟೆಲ್‌, ಡಾಬಾಗಳಿಗೆ ಟೋಕನ್‌ ತಂದವರಿಗೆ ಉಚಿತವಾಗಿ ಫುಲ್‌ ಊಟ, ಒಂದು ಕ್ವಾರ್ಟರ್‌ ಮದ್ಯ ನೀಡುವ ಸೂಚನೆ ನೀಡಲಾಗಿದೆ. ಟೋಕನ್‌ ಪದ್ಧತಿಯನ್ನು ಬಿಜೆಪಿ ಮಾತ್ರವಲ್ಲ, ಜೆಡಿಎಸ್‌, ಕಾಂಗ್ರೆಸ್‌ ಅಭ್ಯರ್ಥಿಗಳು ಕೂಡ ಅನುಸರಿಸುತ್ತಿದ್ದಾರೆ. ಕಾರ್ಯಕರ್ತರ ಸಭೆ, ಸಮಾವೇಶ ನಡೆಯುವ ದಿನ ಸಾವಿರಾರು ಟೋಕನ್‌ ವಿತರಣೆ ಮಾಡಲಾಗುತ್ತಿದೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ದೀಪಾವಳಿ ಮುಗಿದರೂ ಉಡುಗೊರೆ: ದೀಪಾವಳಿ ಹಬ್ಬ ಮುಗಿದು ತಿಂಗಳಾಗಿದೆ. ಆದರೆ, ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಈಗಲೂ ಹಬ್ಬದ ವಾತಾವರಣವಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ಭಾವಚಿತ್ರವಿರುವ ಸೀರೆಗಳನ್ನು ಕ್ಷೇತ್ರದಾದ್ಯಂತ ಹಂಚಿಕೆ ಮಾಡಲಾಗುತ್ತಿದೆ. ಅದರ ಮೇಲೆ ‘ದೀಪಾವಳಿ ಹಬ್ಬದ ಶುಭಾಶಯಗಳು’ ಎಂಬ ಸ್ಟಿಕ್ಕರ್ ಅಂಟಿಸಲಾಗಿದೆ. ಪ್ರತಿ ಗ್ರಾಮಮಟ್ಟದಲ್ಲಿ ಮುಖಂಡರೊಬ್ಬರಿಗೆ ಸೀರೆ ಬಾಕ್ಸ್‌ ಹಾಗೂ ಹಣ ನೀಡಿದ್ದು, ಅವರು ಮತದಾರರಿಗೆ ಹಂಚುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾವಿರಾರು ಸೀರೆ ವಶ: ಸಾಕ್ಷಿಬೀಡು ಗ್ರಾಮದ ಬಳಿ ಮಾರುತಿ ವ್ಯಾನ್‌ನಲ್ಲಿ ಕೊಂಡೊಯ್ಯುತ್ತಿದ್ದ ಸಾವಿರಾರು ಸೀರೆಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

‘ಕ್ಷೇತ್ರದಾದ್ಯಂತ 11 ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. 18 ಸಂಚಾರ ತಪಾಸಣಾ ದಳದ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಹಾಸನ, ಮೈಸೂರು, ಮಂಡ್ಯ ಜಿಲ್ಲೆಯ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿಗಳ ಸಭೆ ನಡೆಸಿ ಅಕ್ರಮ ಮದ್ಯ ನುಸುಳದಂತೆ ಕಣ್ಣಿಡಲಾಗಿದೆ. ಔತಣಕೂಟ ನಡೆಯುವುದು ಕಂಡು ಬಂದರೆ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಎಚ್ಚರಿಕೆ ನೀಡಿದ್ದಾರೆ.

ಅಪ್ಪಾಜಿ ಕ್ಯಾಂಟೀನ್‌ ಮತ್ತೆ ಆರಂಭ

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಕ್ಯಾಂಟೀನ್‌ ರಾಜಕಾರಣ ಗಮನ ಸೆಳೆದಿತ್ತು. ವಿವಿಧ ಪಕ್ಷಗಳ ಅಭ್ಯರ್ಥಿಗಳ ಕೃಪೆಯೊಂದಿಗೆ ₹10ಕ್ಕೆ ಊಟ, ತಿಂಡಿ ಕೊಡುವ ಕ್ಯಾಂಟೀನ್‌ಗಳು ತಲೆ ಎತ್ತಿದ್ದವು. ಚುನಾವಣೆ ನಡೆದ ನಂತರ ಬಹುತೇಕ ಕ್ಯಾಂಟೀನ್‌ಗಳು ಬಂದ್‌ ಆಗಿದ್ದವು. ಕೆ.ಆರ್‌.ಪೇಟೆಯಲ್ಲಿ ಬಂದ್‌ ಆಗಿದ್ದ ‘ಅಪ್ಪಾಜಿ (ಎಚ್‌.ಡಿ.ದೇವೇಗೌಡ) ಕ್ಯಾಂಟೀನ್‌’ ಈಗ ಮತ್ತೆ ಆರಂಭವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು