ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿಯಲ್ಲಿ ಪಾಸಾದ ವಾಸು: ಬೆಳಗೊಳದ ರೈತನ ಯಶೋಗಾಥೆ

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದ ರೈತನ ಯಶೋಗಾಥೆ
Published 21 ಮಾರ್ಚ್ 2024, 6:55 IST
Last Updated 21 ಮಾರ್ಚ್ 2024, 6:55 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಗ್ರಾಮದ ಬಿ.ಎನ್‌. ವಾಸು ಸಾಂಪ್ರದಾಯಿಕ ಕೃಷಿಯನ್ನು ಬದಿಗೊತ್ತಿ ಸಮಗ್ರ ಕೃಷಿ ಪದ್ದತಿ ಅನುಸರಿಸುವ ಮೂಲಕ ಕೃಷಿ ಕೂಡ ಲಾಭದಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ತಮ್ಮ 2.07 ಎಕರೆ ಕೃಷಿ ಜಮೀನಿನಲ್ಲಿ ಅಡಿಕೆ, ಕಾಳು ಮೆಣಸು, ತೆಂಗು, ಕಾಫಿ, ಮಾವು ಬೆಳೆಗಳ ಜೊತೆಗೆ ಕೋಳಿ ಸಾಕಣೆಯನ್ನೂ ಮಾಡುತ್ತಿದ್ದಾರೆ. ಇವರ ತೋಟದಲ್ಲಿ ತೀರ್ಥಹಳ್ಳಿ ತಳಿಯ 1500 ಅಡಿಕೆ ಮರಗಳಿವೆ. ಈ ಪೈಕಿ ಒಂದು ಸಾವಿರ ಮರಗಳು ಫಸಲು ಕೊಡುತ್ತಿದ್ದು, ವಾರ್ಷಿಕ ₹5 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿದೆ.

ತೋಟದಲ್ಲಿರುವ ಅಡಿಕೆ ಮರಗಳಿಗೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಇನ್ನು ಒಂದು ವರ್ಷದಲ್ಲಿ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಅಡಿಕೆ ತೋಟದ ಸುತ್ತ ಮತ್ತು ಮಧ್ಯೆ 150 ತೆಂಗಿನ ಮರಗಳಿವೆ. ತೆಂಗಿನ ಕಾಯಿ ಮತ್ತು ಎಳನೀರು ಮಾರಾಟದಿಂದ ವಾರ್ಷಿಕ ₹1 ಲಕ್ಷಕ್ಕೂ ಹೆಚ್ಚು ಹಣ ಸಿಗುತ್ತಿದೆ.

ಕಾಫಿಯ ಘಮಲು: ಬಯಲು ಸೀಮೆಯಲ್ಲಿ ಕಾಫಿ ಬೆಳೆಯುವುದು ಕಷ್ಟ. ಆದರೂ ವಾಸು ಶತಪ್ರಯತ್ನದಿಂದ ಕಾವೇರಿ ತಳಿಯ ಒಂದು ಸಾವಿರ ಕಾಫಿ ಗಿಡ ಬೆಳೆಸಿದ್ದು, ಫಲ ಕೊಡಲು ಆರಂಭಿಸಿವೆ. ಮೊದಲ ಕೊಯ್ಲಿನಲ್ಲಿ 3.25 ಕ್ವಿಂಟಲ್‌ ಕಾಫಿ ಬೀಜ ಸಿಕ್ಕಿದ್ದು, ಇದರಿಂದ ₹50 ಸಾವಿರ ಗಳಿಸಿದ್ದಾರೆ. ಕಾಫಿ ಬೆಳೆಯಿಂದ ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಹಣ ಸಿಗಲಿದೆ. ತೋಟದ ಅಲ್ಲಲ್ಲಿ ಕಿತ್ತಳೆ, ಏಲಕ್ಕಿ, ಮೋಸಂಬಿ, ಸೀತಾಫಲ, ಸಪೋಟ ಇತರ ಹಣ್ಣಿನ ಸಸಿಗಳನ್ನೂ ಬೆಳೆಸಿದ್ದಾರೆ.

ತೋಟದಲ್ಲಿ ಶೆಡ್‌ ನಿರ್ಮಿಸಿ ನಾಟಿ ಕೋಳಿ ಸಾಕಣೆ ಮಾಡುತ್ತಿದ್ದಾರೆ. ಸದ್ಯ 50 ನಾಟಿ ಕೋಳಿಗಳಿದ್ದು, ಒಂದು ವರ್ಷದ ಬಳಿಕ ಇವುಗಳ ಸಂಖ್ಯೆ 300 ದಾಟಲಿದೆ ಎಂದು ವಾಸು ಹೇಳುತ್ತಾರೆ.

ಮೂರು ಎಕರೆ ಜಮೀನು ಗುತ್ತಿಗೆ ಪಡೆದು ಭತ್ತ ಬೆಳೆಯುತ್ತಿದ್ದಾರೆ. ಕಳೆದ ಹಂಗಾಮಿನಲ್ಲಿ 109 ಕ್ವಿಂಟಲ್‌ ಭತ್ತ ಬೆಳೆದು ₹2 ಲಕ್ಷ ಆದಾಯ ಪಡೆದಿದ್ದಾರೆ. ವಾಸು ಅವರ ತೋಟಕ್ಕೆ ಅಧಿಕಾರಿಗಳು ಮತ್ತು ಆಸುಪಾಸಿನ ಗ್ರಾಮಗಳ ರೈತರು ಭೇಟಿ ನೀಡುತ್ತಿದ್ದಾರೆ. ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡಿರುವ ವಾಸು ಅವರಿಗೆ 2022–23ನೇ ಸಾಲಿನ ‘ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ’ ಲಭಿಸಿದೆ.

‘ವಾಸು ಅವರ ತೋಟವನ್ನು ಖುದ್ದು ವೀಕ್ಷಿಸಿದ್ದು, ಸಮಗ್ರ ತೋಟಗಾರಿಕೆ ಪದ್ದತಿಯಲ್ಲಿ ಅವರು ಯಶಸ್ವಿಯಾಗಿದ್ದಾರೆ. ರೈತರು ಭತ್ತ, ಕಬ್ಬು ಇತರೆ ಸಾಂಪ್ರದಾಯಿಕ ಬೆಳೆಯನ್ನೇ ಅವಲಂಬಿಸದೆ ಸಮಗ್ರ ಕೃಷಿ ಪದ್ದತಿಯಿಂದ ನಿರೀಕ್ಷಿತ ಲಾಭ ಗಳಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇತರೆ ರೈತರಿಗೆ ಮಾದರಿಯಾಗಿದ್ದಾರೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಎಸ್‌.ಎನ್‌. ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಬಿ.ಎನ್‌. ವಾಸು ಅವರ ಸಮಗ್ರ ಕೃಷಿ ತೋಟಕ್ಕೆ ಕೃಷಿ ಇಲಾಖೆ ಉಪ ನಿರ್ದೇಶಕಿ ಎಚ್‌.ಎನ್‌. ಮಮತಾ ಮತ್ತು ತಂಡ ಈಚೆಗೆ ಭೇಟಿ ನೀಡಿತ್ತು
ಬಿ.ಎನ್‌. ವಾಸು ಅವರ ಸಮಗ್ರ ಕೃಷಿ ತೋಟಕ್ಕೆ ಕೃಷಿ ಇಲಾಖೆ ಉಪ ನಿರ್ದೇಶಕಿ ಎಚ್‌.ಎನ್‌. ಮಮತಾ ಮತ್ತು ತಂಡ ಈಚೆಗೆ ಭೇಟಿ ನೀಡಿತ್ತು

‘ತೋಟದಲ್ಲಿರುವ ಬೆಳೆಗಳಿಗೆ ಶೇ 90 ಭಾಗ ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದೇನೆ. ರಸಗೊಬ್ಬರವನ್ನು ಸೀಮಿತ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಎಲ್ಲ ಬೆಳೆಗಳೂ ಹುಲುಸಾಗಿ ಬೆಳೆದಿದ್ದು, ಸದ್ಯ ವರ್ಷಕ್ಕೆ ₹ 8 ಲಕ್ಷ ಬರುತ್ತಿದೆ. ಮೂರು ವರ್ಷ ಕಳೆದರೆ ವಾರ್ಷಿಕ ಸುಮಾರು ₹12 ಲಕ್ಷಕ್ಕೂ ಹೆಚ್ಚು ಆದಾಯ ಸಿಗಲಿದೆ’ ಎಂಬ ವಿಶ್ವಾಸ ವಾಸು ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT