ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ರೈತರು ಕಿಡಿ

ಶಾಸಕ ಸುರೇಶ್‌ಗೌಡ ಎದುರಲ್ಲೇ ಅಧಿಕಾರಿಗಳ ತರಾಟೆ ತೆಗೆದುಕೊಂಡ ರೈತರು
Last Updated 3 ಜುಲೈ 2019, 14:00 IST
ಅಕ್ಷರ ಗಾತ್ರ

ನಾಗಮಂಗಲ: ಲಂಚ ಪಡೆದರೂ ಕೆಲಸ ಮಾಡಲ್ಲ, ರೈತರು ಎಷ್ಟು ಎಂದು ಸಹಿಸಿಕೊಳ್ಳಬೇಕು? ನಿಮಗೆ ನಿಜವಾಗಲೂ ಮಾನ, ಮರ್ಯಾದೆ ಇದ್ದರೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ...

ಶಾಸಕ ಸುರೇಶ್‌ಗೌಡ ಅಧ್ಯಕ್ಷತೆಯಲ್ಲಿ ಬುಧವಾರ ಪಟ್ಟಣದ ಸೆಸ್ಕ್‌ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ರೈತರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದು ಹೀಗೆ.

ಪ್ರತಿ ಕಾಮಗಾರಿಗೂ ಅಧಿಕಾರಿಗಳು ಲಂಚ ಕೇಳುತ್ತಾರೆ. ಸಾಲ ಸೋಲ ಮಾಡಿ ರೈತರು ಲಂಚ ಕೊಡುತ್ತಾರೆ. ಆದರೂ ರೈತರ ಕೆಲಸ ಮಾಡಿಕೊಡದೇ ನಿರ್ಲಕ್ಷ್ಯ ಮಾಡುತ್ತಾರೆ. ಬೆಂಗಳೂರಿನಿಂದ ಬಂದು ಜಮೀನು ‌ಖರೀದಿಸಿದವರಿಗೆ ಎರಡೇ ದಿನಗಳಲ್ಲಿ ಟಿಸಿ ಅಳವಡಿಸಿ ಕೊಡುತ್ತಾರೆ. ಆದರೆ ಸ್ಥಳೀಯ ರೈತರ ಕೆಲಸ ಮಾಡಲು ಹಿಂದೆ, ಮುಂದೆ ನೋಡುತ್ತಾರೆ. ಅಧಿಕಾರಿಗಳು ಲಂಚ ಕೊಟ್ಟರೆ ಮಾತ್ರ ಕೆಲಸ ಮಾಡುತ್ತಾರೆ ಎಂದು ಹರಿಹಾಯ್ದರು. ಈ ಸಂದರ್ಭದಲ್ಲಿ ಶಾಸಕ ಸುರೇಶ್‌ಗೌಡ ಮೂಕಪ್ರೇಕ್ಷಕರಂತಿದ್ದರು.

ಶಾಸಕರು ಕರೆದಿರುವುದಕ್ಕೆ ಸಭೆಗೆ ಅಧಿಕಾರಿಗಳು ಬಂದಿದ್ದಾರೆ, ನಾವು ಕರೆದರೆ ಬರುತ್ತಾರಾ? ಟಿಸಿ ಕೆಟ್ಟರೆ ಅದನ್ನು ಕೆಳಗಿಳಿಸಿ ದುರಸ್ತಿ ಮಾಡಲು ಹಣಕೊಡಿ ಎಂದು ಕೇಳುತ್ತಾರೆ. ಏನಾದರೂ ಪ್ರಶ್ನಿಸಿದರೆ ‘ಏಯ್ ಹೋಗಯ್ಯ ನೀನೇನು ಹೇಳ್ಬೇಡ. ನಿನ್ನ ಕೆಲಸ ಮಾಡಲು ಬಂದಿದಲ್ಲ’ ಎಂದು ಉತ್ತರ ಕೊಡುತ್ತಾರೆ ಎಂದರು. ಅಧಿಕಾರಿಗಳು ಅಯೋಗ್ಯರ ರೀತಿಯಲ್ಲಿ ಕೆಲಸ‌ ಮಾಡುತ್ತಿದ್ದು ಶಾಸಕರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದರು.

ಮಧ್ಯಪ್ರವೇಶ ಮಾಡಿದ ಶಾಸಕ ಸುರೇಶ್‌ಗೌಡ ‘ನಾನು ಬರುತ್ತೇನೆ ಎಂಬ ಭಯಕ್ಕೆ ಕೆಲಸ ಮಾಡಬೇಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ರೈತರ ಕೆಲಸಮಾಡಿ. ಅಧಿಕಾರಿಗಳು ಲಂಚ ಕೇಳಿದರೆ ನನಗೆ ನೇರವಾಗಿ ದೂರು ಕೊಡಿ’ ಎಂದು ಹೇಳಿದರು.

ಮೌನ: ನಿಗಮದ ಎಇಇ, ಜೆಇ ಸೇರಿ ಎಲ್ಲಾ ಹಂತದ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂದು ರೈತರು ಆರೋಪಿಸಿದರು. ಲಕ್ಕೇಗೌಡನಕೊಪ್ಪಲಿನ ಪುಟ್ಟರಾಜು, ಎಇಇ ಅವರು ನನ್ನಿಂದ ₹ 23,000 ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು. ಹಲವು ಅಧಿಕಾರಿಗಳಿಗೆ ನೀಡಿದ ಲಂಚದ ವಿವರನ್ನು ರೈತರು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.

ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ, ತಾಂತ್ರಿಕ ನಿರ್ದೇಶಕ ಅಫ್ತಾಬ್ ಅಹಮದ್, ಮೈಸೂರು ವಲಯ ಮುಖ್ಯ ಇಂಜಿನಿಯರ್ ಮಂಜುನಾಥ್, ಮುಖ್ಯ ಆರ್ಥಿಕ ಸಲಹೆಗಾರ ಶಿವಣ್ಣ, ಪಿ ಎಸ್ ಚಂದ್ರಶೇಖರ್, ಸೂಪರಿಟೆಡೆಂಟ್ ಇಂಜಿನಿಯರ್ ಶ್ರೀನಿವಾಸಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪಾ, ಜಿ.ಪಂ.ಸದಸ್ಯ ಡಿ.ಕೆ.ಶಿವಪ್ರಕಾಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ಅನಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT