ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ಹೆದ್ದಾರಿಯಲ್ಲಿ ರೈತರ ಅರೆಬೆತ್ತಲೆ ಪ್ರತಿಭಟನೆ

Last Updated 3 ಜುಲೈ 2019, 14:11 IST
ಅಕ್ಷರ ಗಾತ್ರ

ಮಂಡ್ಯ: ಕೆಆರ್‌ಎಸ್‌ ಹಾಗೂ ಹೇಮಾವತಿ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ನಗರದ ಹೊರವಲಯ ವಿ.ಸಿ.ಫಾರಂ ಗೇಟ್‌ ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.

ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ವಿವಿಧೆಡೆ ಪ್ರತಿಭಟನೆ ನಡೆಸುತ್ತಿರುವ ರೈತರು ಬುಧವಾರ ವಿಶೇಷವಾಗಿ ಪ್ರತಿಭಟನೆಗೆ ಇಳಿದರು. ರಸ್ತೆಯಲ್ಲಿ ಕಬ್ಬಿನ ಜಲ್ಲೆ ಇಟ್ಟುಕೊಂಡು, ಅರೆಬೆತ್ತಲೆಯಾಗಿ ಪ್ರತಿಭಟನೆಗೆ ಕುಳಿತರು. ಕೆಲವರು ತಲೆ ಕೆಳಕ್ಕೆ ಮಾಡಿ, ಕಾಲು ಮೇಲೆ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲೆಯಲ್ಲಿ ಕಬ್ಬು ಬೆಳೆ ತೀವ್ರವಾಗಿ ಒಣಗುತ್ತಿದ್ದು, ರೈತರು ಜಮೀನಿನ ಬಳಿ ಹೋಗದೆ ಮನೆಯಲ್ಲಿ ಕೊರಗುವಂತಾಗಿದೆ. ಈಗಾಗಲೇ ಜಿಲ್ಲೆಯ ಭಾಗಶಃ ಬೆಳೆ ಒಣಗಿ ನಾಶವಾಗಿದ್ದು, ಅರ್ಧ ಜೀವವಿರುವ ಬೆಳೆಗಳಿಗೆ ಕೂಡಲೇ ನೀರು ಹರಿಸಬೇಕು. ಸರ್ಕಾರ ರೈತರನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಬಂದು ಸಾಂತ್ವನ ಹೇಳಿ ಪರಿಹಾರ ನೀಡುವ ಬದಲು ರೈತರು ಸಾವನ್ನಪ್ಪದಂತೆ ತಡೆಯಲು ಮುಂದಾಗಬೇಕು. ರಾಜ್ಯ ಸರ್ಕಾರ ನಾಲೆಗಳಿಗೆ ನೀರು ಹರಿಸದೆ ಬೇಜವಾಬ್ದಾರಿ ಪ್ರದರ್ಶಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಬೆಳೆ ನಷ್ಟದಿಂದ ರೈತರು ಸಾವನ್ನಪ್ಪಿದರೆ ಅದು ಆತ್ಮಹತ್ಯೆ ಆಗುವುದಿಲ್ಲ, ಸರ್ಕಾರ ಮಾಡುತ್ತಿರುವ ಕೊಲೆಯಾಗುತ್ತದೆ. ನೀರು ಹರಿಸುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು. ಹೆದ್ದಾರಿ ತಡೆ ಮಾಡಿದ್ದರಿಂದಾಗಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್, ಮಹಿಳಾ ಅಧ್ಯಕ್ಷೆ ಲತಾ ಶಂಕರ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಮುಖಂಡರಾದ ಹಲ್ಲೇಗೆರೆ ಹರೀಶ್, ಸೋಮಶೇಖರ್, ಇಂಡುವಾಳು ಬಸವರಾಜು, ನಾಗರಾಜು, ಮರಿಲಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT