ಶನಿವಾರ, ಜನವರಿ 23, 2021
22 °C
ಬಿಜೆಪಿ ರೈತ ಮೋರ್ಚಾದಿಂದ ರೈತರ ಜಾಗೃತಿ ಅಭಿಯಾನ: ಸಂಸದ ಈರಣ್ಣ ಕಡಾಡಿ ಅಭಿಪ್ರಾಯ

ಕಾರ್ಪೊರೇಟ್‌ ಹೋರಾಟದಂತಾದ ರೈತ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ರೈತರ ಹೋರಾಟಗಳು ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಹೋರಾಟಗಳಾಗಿವೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ, ಸಂಸದ ಈರಣ್ಣ ಕಡಾಡಿ ಹೇಳಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ನಗರದ ಬ್ರಾಹ್ಮಣ ಸಮುದಾಯ ಭವನದಲ್ಲಿ ಶನಿವಾರ ನಡೆದ ರೈತರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರೊ.ನಂಜುಂಡಸ್ವಾಮಿ, ರುದ್ರಪ್ಪ ಸೇರಿದಂತೆ ಇನ್ನೂ ಅನೇಕರು ರೈತ ಪರವಾದ ಹೋರಾಟಗಳನ್ನು ರೂಪಿಸಿ ಹೋರಾಡಿದ್ದಾರೆ. ಅದರಲ್ಲಿ ಕಾಳಜಿ, ಪ್ರೀತಿ, ನಿಸ್ವಾರ್ಥ ಸೇವೆ ಎಲ್ಲವೂ ಇದ್ದವು. ರೈತರ ಬದುಕಿಗೆ ಭದ್ರತೆ, ಆರ್ಥಿಕತೆ ಕಲ್ಪಿಸುವ ಉದ್ದೇಶ ಹೊಂದಿದ್ದವು. ಆದರೆ, ಇಂದಿನ ಹೋರಾಟಗಳು ಕಾರ್ಪೊರೇಟ್ ಹೋರಾಟಗಳಾಗಿ ಬದಲಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತರ ಬದುಕಿನಲ್ಲಿ ದೊಡ್ಡ ಕ್ರಾಂತಿ ಮಾಡುವ ಸಲುವಾಗಿ ರೈತ ಪರವಾದ ಯೋಜನೆಗಳನ್ನು ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ಆದರೆ, ಇದರ ವಿರುದ್ಧ ಹೋರಾಟ ಮಾಡುತ್ತಿರುವ ಹೋರಾಟಗಾರರು ಸಂಪೂರ್ಣವಾಗಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಹೋರಾಟದ ದಿಕ್ಕು ತಪ್ಪಿಸುತ್ತಿವೆ ಎಂದು ಹೇಳಿದರು.

ಮೋದಿ ಸರ್ಕಾರ ರೈತರ ಹೋರಾಟವನ್ನು ಅತ್ಯಂತ ಗೌರವಯು ತವಾಗಿ ನಡೆಸಿಕೊಳ್ಳುತ್ತಿದೆ. ರೈತರ ಹೋರಾಟಕ್ಕೆ ಬೆಲೆ ನೀಡಿ ಎಂಟು ಬಾರಿ ಮಾತುಕತೆಗಳನ್ನು ನಡೆಸಿದೆ. ಹಲವಾರು ಬದಲಾವಣೆಗಳನ್ನು ಮಾಡುವುದಾಗಿ ಯೂ ತಿಳಿಸಿದ್ದಾರೆ. ಆದರೆ, ಇಡೀ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಪಟ್ಟು ಹಿಡಿದಿರುವುದು ಸರಿಯಲ್ಲ ಎಂದು ಹೇಳಿದರು. 

ಸರ್ಕಾರ ಜಾರಿಗೆ ತರುತ್ತಿರುವ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಈಗಾಗಲೇ 10 ಲಕ್ಷ ಕರಪತ್ರಗಳನ್ನು ಮುದ್ರಿಸಿ, ಗ್ರಾಮಸಭೆಗಳನ್ನು ಮಾಡುವ ಮೂಲಕ ಹಂಚಲಾಗಿದೆ. ನಮ್ಮ ಸರ್ಕಾರ ಬರುವುದಕ್ಕೂ ಮುನ್ನ ರೈತರ ಜಿಡಿಪಿ 11 ಇತ್ತು, ನಮ್ಮ ಸರ್ಕಾರದ ಅವಧಿಯಲ್ಲಿ ಶೇ 17ಕ್ಕೆ ಬಂದು ನಿಂತಿದೆ. ಶೇ 6ರಷ್ಟು ಬೆಳವಣಿಗೆ ಕಂಡಿದೆ ಎಂದರು.

ಪ್ರಸ್ತುತ ದೇಶದಲ್ಲಿ ಶೇ 48ರಷ್ಟು ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅವರಿಗೆ ಲಾಭವಾಗದಿದ್ದಲ್ಲಿ ರೈತರ ಆರ್ಥಿಕ ಪರಿಸ್ಥಿತಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರಿಗೆ ಪೂರಕವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.

ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್‌ನಾರಾಯಣ್, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ.ವಿಜಯಕುಮಾರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.