ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020| ಮಂಡ್ಯದಲ್ಲಿ ಈ ವರ್ಷ ನಡೆದಿದ್ದಿಷ್ಟು...

ಸಚಿವ ಸ್ಥಾನಕ್ಕೇರಿದ ಕೆ.ಸಿ.ನಾರಾಯಣಗೌಡ,
Last Updated 30 ಡಿಸೆಂಬರ್ 2020, 3:38 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ಕಷ್ಟದ ನಡುವೆಯೂ ಜಿಲ್ಲೆಯಾದ್ಯಂತ ಅಪರಾಧಿಕ ಪ್ರಕರಣಗಳು ಜನರನ್ನು ಬೆಚ್ಚಿಬೀಳಿಸಿದವು. ಕೊಲೆ, ಅತ್ಯಾಚಾರ, ಕಳ್ಳತನ, ವಂಚನೆ, ಬಾಲ್ಯ ವಿವಾಹಗಳ ಪ್ರಕರಣಗಳ ಸಂಖ್ಯೆ ಹೆಚ್ಚಾದವು. ಅವುಗಳ ನಡುವೆ ರಾಜಕಾರಣದಲ್ಲಿ ಹಲವು ಬದಲಾವಣೆಗಳಿಗೆ ಜಿಲ್ಲೆ ಸಾಕ್ಷಿಯಾಯಿತು.

ಕೋವಿಡ್‌ ಆರಂಭಕಾಲದಲ್ಲಿ ಸಕ್ಕರೆ ಜಿಲ್ಲೆ ರಾಜ್ಯಮಟ್ಟದ ಸುದ್ದಿಗೆ ಕಾರಣವಾಗಿತ್ತು. ಮುಂಬೈ ವಲಸಿಗರು ಒಮ್ಮೆಲೇ ಜಿಲ್ಲೆಗೆ ಬಂದ ಕಾರಣ ಕೋವಿಡ್‌–19 ರೋಗಿಗಳ ಸಂಖ್ಯೆ ಹೆಚ್ಚಾಯಿತು. ಮುಂಬೈನಲ್ಲಿ ಜೀವನ ಕಟ್ಟಿಕೊಳ್ಳಲು ತೆರಳಿದ್ದ ವಲಸಿಗರು ಸಿಕ್ಕಸಿಕ್ಕ ವಾಹನ ಹತ್ತಿ ಹುಟ್ಟೂರು ತಲುಪಿದ್ದರು. ಅವರನ್ನು ಹುಡುಕಿ ಕ್ವಾರಂಟೈನ್‌ ಮಾಡುವಷ್ಟರಲ್ಲಿ ಅಧಿಕಾರಿಗಳು ಹೈರಾಣಾದರು. ಜಿಲ್ಲೆಯ ಹೊರವಲಯದ ಚೆಕ್‌ಪೋಸ್ಟ್‌ಗಳಲ್ಲಿ ಮಹಾರಾಷ್ಟ್ರದಿಂದ ಬಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು.

ಇದಕ್ಕೂ ಮೊದಲು ದೆಹಲಿಯ ತಬ್ಲಿಗಿ ಜಮಾತೆ ಧರ್ಮಸಭೆಯಲ್ಲಿ ಭಾಗವಹಿಸಿ ಬಂದಿದ್ದ ಧರ್ಮಗುರುಗಳು ಮಳವಳ್ಳಿ ಪಟ್ಟಣದಲ್ಲಿ ಭಯಭೀತಿ ಸೃಷ್ಟಿಸಿದ್ದರು. ಮಳವಳ್ಳಿಯ ಮುಸ್ಲಿಂ ಬ್ಲಾಕ್‌, ಕಾಳಮ್ಮ ಕೋಟೆ ಬೀದಿ, ಪೇಟೆ ಬೀದಿಗಳಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಲೇ ಇತ್ತು. ಸೀಲ್‌ಡೌನ್‌ ಆಗುವ ಬೀದಿಗಳ ಸಂಖ್ಯೆ ಹೆಚ್ಚಾಗಿದ್ದವು. ಅದರ ನಡುವೆಯೇ ಮುಂಬೈ ವಲಸಿಗರ ಪ್ರವೇಶದಿಂದಾಗಿ ರೋಗಿಗಳ ಸಂಖ್ಯೆ ಜಿಲ್ಲೆಯಾದ್ಯಂತ ಪಸರಿಸಿತು.

ಕೋವಿಡ್ ಸಂಕಷ್ಟದ ಆರಂಭದಲ್ಲೇ ಕೆ.ಆರ್‌.ಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿತ್ತು. ವಿಜಯಮಾಲೆ ಧರಿಸಿದ ಕೆ.ಸಿ.ನಾರಾಯಣಗೌಡರು ಸಚಿವರಾಗುವ ಅದೃಷ್ಟ ಒಲಿದು ಬಂತು. ರೇಷ್ಮೆ, ಪೌರಾಡಳಿತ ಹಾಗೂ ತೋಟಗಾರಿಕೆ ಮೂರು ಇಲಾಖೆಗಳ ಮಂತ್ರಿಯಾಗುವ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಅಲಂಕರಿಸಿದರು.

ಹೆಚ್ಚಳಗೊಂಡ ಕೊಲೆ

ಜಿಲ್ಲೆಯ ವಿವಿಧೆಡೆ ಈ ವರ್ಷ ಕೊಲೆ ಪ್ರಕರಣಗಳು ಏರುತ್ತಲೇ ಹೋದವು. ಡಿಸೆಂಬರ್‌ವರೆಗೂ 50ಕ್ಕೂ ಹೆಚ್ಚು ಕೊಲೆಗಳಾದ ಬಗ್ಗೆ ವರದಿಯಾಗಿವೆ. ರೌಡಿ ಚಟುವಟಿಕೆ, ಹಳೇ ವೈಷಮ್ಯ, ಕ್ಷುಲ್ಲಕ ಕಾರಣಕ್ಕಾಗಿ ಹಲವರು ಕೊಲೆಯಾದರು. ಅಕ್ರಮ ಸಂಬಂಧ ಇಟ್ಟುಕೊಂಡ ಮಹಿಳೆಯೊಬ್ಬಳು ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲೆ ಮಾಡಿದಳು. ನಗರದ ಗುತ್ತಲು ಬಡಾವಣೆಯಲ್ಲಿ ಮಚ್ಚು ಝಳಪಿಸಿದವು.

ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಜಾಲವೊಂದು ನಗರದ ಗುತ್ತಲು ಬಡಾವಣೆಯಲ್ಲಿರುವ ಅರಕೇಶ್ವರಸ್ವಾಮಿ ದೇವಾಲಯದಲ್ಲಿ ಮಲಗಿದ್ದ ಮೂವರು ಅರ್ಚಕರನ್ನು ಹತ್ಯೆ ಮಾಡಿದ ಘಟನೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತು. ಕಳ್ಳರ ಹುಂಡಿ ಹಣದ ಆಸೆಗೆ ಮೂರು ಮುಗ್ಧ ಜೀವ ಬಲಿಯಾಗಬೇಕಾಯಿತು. ಕೊಪ್ಪ ಸಮೀಪ ಕಬ್ಬಿನಗದ್ದೆಯಲ್ಲಿ ಕಬ್ಬು ಕಡಿಯಲು ಬಂದಿದ್ದ ಕಾರ್ಮಿಕರ 11 ವರ್ಷದ ಹೆಣ್ಣುಮಗಳೊಬ್ಬಳ ಮೇಲೆ ಬಾಲಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ, ಹತ್ಯೆ ಮಾಡಿದ ಘಟನೆ ಕೂಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿತ್ತು.

ಕೋವಿಡ್‌ ಸಂದರ್ಭದಲ್ಲಿ ನಡೆದ ಬಹುತೇಕ ಸರಳವಿವಾಹಗಳಲ್ಲಿ ಹಲವು ಬಾಲ್ಯವಿವಾಹಗಳೇ ಆಗಿದ್ದವು ಎಂಬ ವರದಿ ಇದ್ದು ಜಿಲ್ಲೆಯ ಮಟ್ಟಿಗೆ ಕೆಟ್ಟ ಸುದ್ದಿಯಾಯಿತು. ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಈ ಬಗ್ಗೆ ನಿತ್ಯ ಪ್ರಕರಣಗಳು ದಾಖಲಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಭಾರತೀನಗರದ ಕೆ.ಶೆಟ್ಟಹಳ್ಳಿ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣ, ಮಂಡ್ಯ ನಗರದಲ್ಲಿ ನಡೆದ ಬಾಲಕನಿಂದ ವ್ಯಕ್ತಿಯ ಕೊಲೆ, ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಬಾಲಕರು ಪ್ರಮುಖ ಪಾತ್ರ ವಹಿಸಿರುವುದು ಆತಂಕ ಸೃಷ್ಟಿಸಿತ್ತು.

ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಧನುಶ್ರೀ ಮಹಡಿ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಜನರ ಕಣ್ಣೀರಿಗೆ ಕಾರಣವಾಯಿತು. ನಟಿ, ಮಾಡೆಲ್‌ ಮೆಬಿನಾ ಮೈಕೆಲ್‌ ನಾಗಮಂಗಲ ಬಳಿ ಅಪಘಾತದಲ್ಲಿ ಮೃತಪಟ್ಟರು. ಕೋವಿಡ್‌ ಸಮಯದಲ್ಲಿ ವೆಂಕಟೇಶ್ವರ ಧ್ಯಾನ ಕೇಂದ್ರ ಮುಖ್ಯಸ್ಥ ಅನಂತಕುಮಾರ ಸ್ವಾಮೀಜಿ, ನಟ ಪದ್ಮನಾಭ ಮೃತಪಟ್ಟರು. ಲಕ್ಷ್ಮಿನಾರಾಯಣ, ಕೆ.ಎಸ್‌.ರಾಜಣ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಜಿ.ಪಂ ಅಧಿಕಾರ ನಾಟಕ

ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ದಾಹದಿಂದಾಗಿ 2020ರಲ್ಲಿ ವರ್ಷವಿಡೀ ಸಾಮಾನ್ಯ ಸಭೆ ನಡೆಯಲಿಲ್ಲ. ಬಂದ ಅನುದಾನವೂ ವಾಪಸ್‌ ಹೋಗುವ ಸಂದರ್ಭ ಸೃಷ್ಟಿಯಾಗಿದೆ.

ರಾಜೀನಾಮೆ ನೀಡಬೇಕು ಎಂಬ ಸ್ವಪಕ್ಷೀಯರ ಒತ್ತಡಕ್ಕೆ ಮಣಿಯದ ಅಧ್ಯಕ್ಷೆ ನಾಗರತ್ನಾ ಸ್ವಾಮಿ ಕುರ್ಚಿಗೆ ಅಂಟಿ ಕುಳಿತಿದ್ದಾರೆ. ಕೆಳಗೆ ಇಳಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಬಹುಮತ ಹೊಂದಿರುವ ಜೆಡಿಎಸ್‌ ಸದಸ್ಯರು ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಿದ್ದಾರೆ.

ಅಗೆದಷ್ಟೂ ಚಿನ್ನ

ಅಧಿಕ ಬಡ್ಡಿಯಾಸೆ ಚಿನ್ನ, ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣ ರಾಜ್ಯದ ಗಮನ ಸೆಳೆಯಿತು. ₹ 20 ಕೋಟಿಗೂ ಹೆಚ್ಚು ಅವ್ಯವಹಾರವಾಗಿದ್ದರೂ ತನಿಖೆ ಕುಂಟುತ್ತಾ ಸಾಗುತ್ತಿದೆ.
ಪ್ರಮುಖ ಆರೋಪಿ ಪೂಜಾ ನಿಖಿಲ್‌ ಜಾಮೀನಿನ ಮೇಲೆ ಹೊರಬಂದಿದ್ದಾರೆ. ತನಿಖಾ ತಂಡವೂ ಬದಲಾಗಿದೆ. ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಉಳಿದಿವೆ. ಅಪಾರ ಪ್ರಮಾಣ ಪ್ರಮಾಣದ ಚಿನ್ನ ಇನ್ನೂ ಪತ್ತೆಯಾಗಿಲ್ಲ. ಈ ನಡುವೆ ಪೊಲೀಸರು ಸಿಐಡಿ ತನಿಖೆಗೆ ಒಪ್ಪಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಪ್ರಸಾದ ಸೇವಿ ಅಸ್ವಸ್ಥ

ಮಳವಳ್ಳಿ ತಾಲ್ಲೂಕು, ಹಲಗೂರು ಸಮೀಪದ ಲಿಂಗಪಟ್ಟಣ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ 75ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಅ.28ರಂದು ನಡೆದಿತ್ತು.
ಘಟನೆಯ ನಂತರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವೈದ್ಯರ ತಂಡ ಗ್ರಾಮಕ್ಕೆ ತೆರಳಿ ಶಾಲಾ ಆವರಣವನ್ನೇ ಆಸ್ಪತ್ರೆಯನ್ನಾಗಿ ರೂಪಿಸಿ ಚಿಕಿತ್ಸೆ ನೀಡಿತ್ತು. ಚಾಮರಾಜನಗರ ಜಿಲ್ಲೆ, ಸುಳ್ವಾಡಿ ದುರಂತದ ನಂತರ ಈ ಘಟನೆ ಆತಂಕ ಸೃಷ್ಟಿಸಿತ್ತು. ಅದೃಷ್ಟವಶಾತ್‌ ಜನರ ಪ್ರಾಣ ಹಾನಿಯಾಗಲಿಲ್ಲ.

ಪ್ರಧಾನಿಯ ಮನದ ಮಾತು

ಮಳವಳ್ಳಿ ತಾಲ್ಲೂಕು, ಕುಂದನಿ ಬೆಟ್ಟದಲ್ಲಿ ಕಟ್ಟೆ ಕಟ್ಟಿದ ಕಲ್ಮನೆ ಕಾಮೇಗೌಡರ ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಿತು. ‘ಮನದ ಮಾತು’ ಸರಣಿಯಲ್ಲಿ ಪ್ರಧಾನಿ ಕಾಮೇಗೌಡರನ್ನು ಕೊಂಡಾಡಿದರು.
ವರ್ಷಾಂತ್ಯದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂ ಬಳಿಯ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ಕಾಯಕಲ್ಪ ನೀಡಿದ ಯುವ ಬ್ರಿಗೇಡ್‌ ತಂಡದ ಕಾರ್ಯವನ್ನು ಕೂಡ ಪ್ರಧಾನಮಂತ್ರಿಗಳು ಶ್ಲಾಘಿಸಿದರು.

2020ರ ಘಟನಾವಳಿಗಳ ಮೆಲುಕು

* ಜನವರಿ 5ರಿಂದ 10– ರಾಷ್ಟ್ರಮಟ್ಟದ ಫುಟ್‌ಬಾಲ್‌ ಟೂರ್ನಿ, 31, ಫೆ.1– ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
* ಫೆಬ್ರುವರಿ 23– ರಾಷ್ಟ್ರೀಯ ವಾದಿಗಳ ಜಿಲ್ಲಾ ಮಟ್ಟದ ಸಮ್ಮೇಳನ
* ಮಾರ್ಚ್ 7,8– ಅಕ್ಕಮಹಾದೇವಿ ಮಹಿಳಾ ವಿವಿ ವತಿಯಿಂದ ರಾಜ್ಯ ಮಟ್ಟದ ಮಹಿಳಾ ಸಮಾವೇಶ
* ಮೇ 27– ನಟಿ, ಮಾಡೆಲ್‌ ಮೆಬಿನಾ ಮೈಕೆಲ್‌ ಅಪಘಾತದಲ್ಲಿ ಸಾವು
* ಜೂನ್‌ 28– ಕಲ್ಮನೆ ಕಾಮೇಗೌಡರ ಬಗ್ಗೆ ಮನದ ಮಾತು ಸರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
* ಜುಲೈ 29– ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಮಂಡ್ಯ ಬಂದ್‌ ಆಚರಣೆ
* ಆಗಸ್ಟ್‌ 4– ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಮಾರಗೌಡನಹಳ್ಳಿಯ ಅಭಿಷೇಕ್‌ಗೌಡ 278ನೇ ರ‍್ಯಾಂಕ್‌
* ಸೆಪ್ಟೆಂಬರ್‌ 8– ಅನಂತಕುಮಾರ ಸ್ವಾಮೀಜಿ ನಿಧನ
* ಅಕ್ಟೋಬರ್‌ 1– ನಟ ಪದ್ಮನಾಭ್‌ ಸಾವು
* ನವೆಂಬರ್‌ 1– ನಗರಸಭೆ ಅಧ್ಯಕ್ಷರಾಗಿ ಎಚ್‌.ಎಸ್‌.ಮಂಜು ಅಧಿಕಾರ ಸ್ವೀಕಾರ
* ಡಿಸೆಂಬರ್‌ 22– ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ, 27– ಗ್ರಾಮ ಪಂಚಾಯಿತಿ ದ್ವಿತೀಯ ಹಂತದ ಚುನಾವಣೆ, ಗಂಜಾಂನ ವೀರಭದ್ರೇಶ್ವರ ಸ್ವಾಮಿ ದೇಗುಲಕ್ಕೆ ಯುವ ಬ್ರಿಗೇಡ್‌ ಕಾಯಕಲ್ಪ, ಪ್ರಧಾನಿ ಮೆಚ್ಚುಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT