ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನಂತೆ ಬದಲಾಗದ ಜಾನಪದ ಕ್ಷೇತ್ರ

ವಿಚಾರ ಸಂಕಿರಣ: ಜಾನಪದ ವಿವಿ ಕುಲಪತಿ ಡಾ.ಡಿ.ಬಿ.ನಾಯಕ ಅಭಿಮತ
Last Updated 9 ಸೆಪ್ಟೆಂಬರ್ 2020, 12:18 IST
ಅಕ್ಷರ ಗಾತ್ರ

ಮಂಡ್ಯ: ‘ವಿಶ್ಲೇಷಣಾತ್ಮಕವಾಗಿ, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪಾಶ್ಚಾತ್ಯರು ಜಾನಪದವನ್ನು ಅಧ್ಯಯನ ಮಾಡಿದಷ್ಟು, ಸ್ವದೇಶಿಗರು ಅಧ್ಯಯನ ಮಾಡಿಲ್ಲ. ಬದುಕು, ಆಲೋಚನೆಗಳು ಬದಲಾದ ಹಾಗೆ ಜಾನಪದ ಕ್ಷೇತ್ರ ಬದಲಾಗುತ್ತಿಲ್ಲ’ ಎಂದು ಕರ್ನಾಟಕ ಜಾನಪದ ವಿವಿ ಕುಲಪತಿ ಡಾ.ಡಿ.ಬಿ.ನಾಯಕ ‌ಹೇಳಿದರು.

ಕರ್ನಾಟಕ ಜಾನಪದ ವಿವಿ, ಕರ್ನಾಟಕ ಸಂಘ, ಜಾನಪದ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ಬುಧವಾರ ನಡೆದ ‘ಜಾನಪದ ಅಧ್ಯಯನದ ಹೊಸ ಸಾಧ್ಯತೆಗಳು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿಂದೆಲ್ಲಾ ಧರ್ಮ ಮತ್ತು ಶ್ರಮದ ಕಾಯಕದಿಂದ ಜಾನಪದ ಸೃಷ್ಟಿಯಾಗುತ್ತಿತ್ತು. ನಾಟಿ ಮಾಡುವಾಗ, ರಾಗಿ ಬೀಸುವಾಗ, ಮದುವೆ ಸಂದರ್ಭದಲ್ಲಿ ಸೋಬಾನೆ ಪದಗಳು ಹುಟ್ಟುಕೊಳ್ಳುತ್ತಿದ್ದವು. ಈ ಜಾಗಗಳನ್ನು ಈಗ ಯಂತ್ರಗಳು ಆಕ್ರಮಿಸುತ್ತಿದ್ದು, ಮಾನವ ಯಾಂತ್ರೀಕೃತವಾಗುತ್ತಿದ್ದಾನೆ. ಶ್ರಮ ಕಡಿಮೆಯಾದಂತೆ ಜನಪದ ಸಾಹಿತ್ಯವೂ ಸೊರಗುತ್ತಿದೆ. ಸಂಗ್ರಹವಾಗಿರುವ ಭಾಷಿಕ ಸಾಮಾಗ್ರಿಯನ್ನು ಅಧ್ಯಯನ ಮಾಡಬೇಕು. ಜಾನಪದದಲ್ಲಿ ವಿಶ್ಲೇಷಣಾತ್ಮಕ ಅಧ್ಯಯನ ನಡೆಯುತ್ತಿದ್ದು, ಸೈದ್ಧಾಂತಿಕ ಅಧ್ಯಯನ ಆಗಬೇಕು’ ಎಂದು ಹೇಳಿದರು.

‘ನಾಟಿ ಔಷಧಿ ಪದ್ಧತಿ ಜಾನಪದದಲ್ಲಿ ಇದ್ದು, ಇದರ ಬಗ್ಗೆ ವೈಜ್ಞಾನಿಕ ಅಧ್ಯಯನ ಸಾಕಷ್ಟು ಆಗಲಿಲ್ಲ. ಆದ್ದರಿಂದ ಇಂದು ಆಯುರ್ವೇದ, ಆಯುಷ್‌, ಯುನಾನಿ ಇಲಾಖೆಯವರು ಇಂದು ನಮ್ಮದು ಎಂದು ಹೇಳುತ್ತಿದ್ದಾರೆ. ವೈಜ್ಞಾನಿಕವಾಗಿ ಅಧ್ಯಯನ ನಡೆದಿದ್ದರೆ ಅದರ ಮಹತ್ವ ಇಂದು ಜಗದಗಲ ಹರಡುತ್ತಿತ್ತು. ಜಾನಪದ ಒಂದು ವಿಜ್ಞಾನವಾಗಿದ್ದು, ಅದನ್ನು ಯಾರು ಬೇಕಾದರೂ ಅಧ್ಯಯನ ಮಾಡಬಹುದು ಎನ್ನುವಂತಾಗಿದೆ. ಆದರೆ ಅದು ಎಲ್ಲಾ ಜ್ಞಾನಗಳ ಮೂಲವಾಗಿದೆ, ಪ್ರಜಾತಂತ್ರ, ನ್ಯಾಯಾಂಗದ ಮೂಲವೂ ಜಾನಪದದಲ್ಲಿ ಇದೆ’ ಎಂದರು.

‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಜ್ಞಾನವೇ ಜಾನಪದವಾಗಿದೆ. ಜಾನಪದ ಪಳಿಯುಳಿಕೆಯಲ್ಲ. ಅದು ನಿತ್ಯ ನೂತನವಾಗಿದೆ, ಆದರೆ ಎಲ್ಲಾ ವಿಭಾಗಗಳಲ್ಲೂ ಸರಿಯಾದ ಅಧ್ಯಯನವಾಗುತ್ತಿಲ್ಲ ಎಂದು ಜಾನಪದಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಅಧ್ಯಯನಕ್ಕೆ ಆಫ್ರಿಕಾ ಮತ್ತು ಭಾರತ ಆಕರ್ಷಣೀಯವಾಗಿದೆ. ಧರ್ಮ ಮತ್ತು ಶ್ರಮದಿಂದ ಜಾನಪದ ಮೌಖಿಕವಾಗಿ ಬೆಳೆದಿದೆ. ಭಾರತಕ್ಕೆ ಬಂದ ಪಾಶ್ಚಾತ್ಯರು, ಪಾದ್ರಿಗಳು ಇಲ್ಲಿನ ಜನರ ಸಂಸ್ಕೃತಿ, ಜೀವನವನ್ನು ಅಧ್ಯಯನ ಮಾಡಿ ಸಂಶೋಧನೆ ನಡೆಸಿದರು. ಆದರೆ ಸ್ವದೇಶಿಗರು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಧ್ಯಯನ ನಡೆಸಿಲ್ಲ’ ಎಂದರು.

ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾ.ರಾಗೌ ಮಾತನಾಡಿ ‘ಜಾನಪದ ಎಲ್ಲಾ ವಿಜ್ಞಾನಗಳ ತಾಯಿಬೇರು ಆಗಿದೆ. ಇಂದು ವಿವಿಧ ವಿಜ್ಞಾನಗಳನ್ನು ನೋಡುತ್ತೇವೆ. ಆದರೆ ಇವೆಲ್ಲಾ ಜಾನಪದದಲ್ಲಿ ಐಕ್ಯವಾಗಿದ್ದವು. ಜಾನಪದ ಅಧ್ಯಯನ ಎಂಬುದು ಎಲ್ಲಾ ಶಾಸ್ತ್ರಗಳ ಅಧ್ಯಯನದಿಂದ ಮಾತ್ರ ಸಾಧ್ಯ. ಜಾನಪದವನ್ನು ಯಾವುದೇ ಮೂಲದಲ್ಲಿ ಸ್ಪರ್ಶಿಸಿದರೂ ಒಂದೇ ಬಗೆಯ ಸಾಮಗ್ರಿ ಕಾಣಬಹುದು. ಜಾನಪದ ಅಧ್ಯಯನ ಎಂಬುದು ಒಂದು ಸಮುದಾಯ, ಸಂಸ್ಕೃತಿ, ರಾಷ್ಟ್ರದ ಅಸ್ಮಿತೆಯಾಗಿ ರೂಪುಗೊಳ್ಳಬೇಕು’ ಎಂದರು.

‘ಸಮುದಾಯ, ಸಂಸ್ಕೃತಿಯನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಳೀಯವಾಗಿ ಹೇಳುವುದಾದರೆ ಮಹದೇಶ್ವರ, ಮಂಟೇಸ್ವಾಮಿ ಕಥೆಗಳು ಮಹಾಕಾವ್ಯಗಳಾಗಿದೆ. ಸೀಮಿತ ಪ್ರದೇಶ, ಸಂಸ್ಕೃತಿ, ಸಮುದಾಯದ ಧ್ವನಿಯಾಗಿದೆ. ಜಾನಪದ ಎಂಬುದು ಏಕಮೂಲವಾಗಿಲ್ಲ. ಅದು ಬಹುಮೂಲವಾಗಿದೆ’ ಎಂದರು.

‌‌ಪ್ರಾದೇಶಿಕ ಜಾನಪದ ಅಧ್ಯಯನ ಹಾಗೂ ಕಲಿಕಾ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ಜಯಪ್ರಕಾಶಗೌಡ ಹಾಜರಿದ್ದರು. ನಂತರ ಉಪಭಾಷಿಕ ಅಧ್ಯಯನ, ಉಪಸಾಂಸ್ಕೃತಿಕ ಅಧ್ಯಯನ, ಪ್ರಾದೇಶಿಕ ಅಧ್ಯಯನ, ಸಾಮಗ್ರಿ–ಸಂಘರ್ಷಾತ್ಮಕ ನೆಲೆ ಕುರಿತು ಗೋಷ್ಠಿಗಳು ನಡೆದವು.

******

ಗ್ರಾಮ ಚರಿತ್ರೆ ಕೋಶ

‘ಜಾನಪದ ವಿಶ್ವವಿದ್ಯಾಲಯದ ವತಿಯಿಂದ ಗ್ರಾಮ ಚರಿತ್ರೆ ಕೋಶ ರೂಪಿಸಲಾಗುತ್ತಿತ್ತು. ಈಗಾಗಲೇ 15 ಜಿಲ್ಲೆಗಳ ಸಂಪುಟ ಪ‍್ರಕಟವಾಗಿದ್ದು, 5 ಜಿಲ್ಲೆಗಳ ಸಂಪುಟ ಸಿದ್ಧಗೊಂಡಿದೆ. ಮಾಹಿತಿ ಸಂಗ್ರಹಕ್ಕಾಗಿ 500 ಮಂದಿ ಕ್ಷೇತ್ರಪಾಲಕರನ್ನು ನೇಮಿಸಲಾಗಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ. ಕೊರೊನಾ ಕಾರಣದಿಂದ ಕೆಲಸಕ್ಕೆ ಸಲ್ಪ ಹಿನ್ನೆಡೆಯಾಗಿದೆ’ ಎಂದು ಡಾ.ಡಿ.ಬಿ.ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT