ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌ ಪೇಟೆಯಲ್ಲಿ ಮಾಧುಸ್ವಾಮಿ, ನಾರಾಯಣ ಗೌಡ ಮೇಲೆ ಚಪ್ಪಲಿ ತೂರಾಟ

ತಾಲ್ಲೂಕು ಕಚೇರಿ ಬಳಿ ಉದ್ರಿಕ್ತ ಸ್ಥಿತಿ; ಜೆಡಿಎಸ್‌, ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Last Updated 1 ಡಿಸೆಂಬರ್ 2019, 13:59 IST
ಅಕ್ಷರ ಗಾತ್ರ

ಕೆ.ಆರ್‌.ಪೇಟೆ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು, ಸೋಮವಾರ ಇಲ್ಲಿಯ ಚುನಾವಣಾಧಿಕಾರಿ ಕಚೇರಿಗೆ ಬಂದಿದ್ದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಹಾಗೂ ಸಚಿವ ಜೆ. ಮಾಧುಸ್ವಾಮಿ ಅವರ ಮೇಲೆ ಕಿಡಿಗೇಡಿಗಳು ಚಪ್ಪಲಿ ತೂರಿದ್ದಾರೆ. ಇದರಿಂದ, ಕೆಲಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಏಕಕಾಲಕ್ಕೆ ಮೆರವಣಿಗೆಯಲ್ಲಿ ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ, ಪರಸ್ಪರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಬಿಜೆಪಿ ಅಭ್ಯರ್ಥಿ, ಸಚಿವ ಹಾಗೂ ಗುಂಪಿನ ಮೇಲೆ ಚಪ್ಪಲಿ ತೂರಿಬಂದವು.

ಇದರಿಂದ ಆಕ್ರೋಶಗೊಂಡ ನಾರಾಯಣಗೌಡ, ಜೆಡಿಎಸ್‌ ಕಾರ್ಯಕರ್ತರೇ ಚಪ್ಪಲಿ ತೂರಿದ್ದಾಗಿ ಆರೋಪಿಸಿದರು. ‘ಚಪ್ಪಲಿಯಲ್ಲಿ ಹೊಡೆಯಲು ಅವರಾರು? ಗೂಂಡಾಗಿರಿ ಮಾಡಲು ಬಂದಿದ್ದಾರಾ? ನಾನೂ ಜೆಡಿಎಸ್‌ನಲ್ಲಿ ಇದ್ದವನು. ಅಂತಹ ಸಂಸ್ಕೃತಿಯನ್ನು ನಾನು ಕಲಿತಿಲ್ಲ. ನಾನೇ ಅವರನ್ನು ಕೇಳುತ್ತೇನೆ’ ಎನ್ನುತ್ತಾ ಜೆಡಿಎಸ್‌ ಕಾರ್ಯಕರ್ತರತ್ತ ನುಗ್ಗಿದರು. ಆದರೆ ಪೊಲೀಸರು ಅವರನ್ನು ಸಮಾಧಾನಪಡಿಸಿದರು. ಆಗ, ಕೆಂಡಾಮಂಡಲರಾದ ಅವರು, ‘ಭದ್ರತೆ ನೀಡಲು ವಿಫಲರಾಗಿದ್ದೀರಿ’ ಎಂದು ಪೊಲೀಸರ ವಿರುದ್ಧವೂ ಹರಿಹಾಯ್ದರು.

ಧಿಕ್ಕಾರ ಹಾಕಿದ ಜೆಡಿಎಸ್ ಕಾರ್ಯಕರ್ತರು: ನಾಮಪತ್ರ ಸಲ್ಲಿಕೆಗಾಗಿ ನಾರಾಯಣಗೌಡ ಅವರು ಕಚೇರಿಯೊಳಗೆ ತೆರಳಿದಾಗ, ಜೆಡಿಎಸ್‌ ಕಾರ್ಯಕರ್ತರು ‘ಮೋಸ ಮಾಡಿದ ನಾರಾಯಣಗೌಡನಿಗೆ ಧಿಕ್ಕಾರ‘ ಎಂದು ಘೋಷಣೆ ಕೂಗಿದರು. ಬಿಜೆಪಿ ಕಾರ್ಯಕರ್ತರತ್ತ ಜೆಡಿಎಸ್‌ ಬಾವುಟ ಎಸೆದರು. ಈ ವೇಳೆ ಉದ್ರಿಕ್ತರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಟ್ಟರು.

ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆಯೇ ಜೆಡಿಎಸ್‌ ಕಾರ್ಯಕರ್ತರು ಮತ್ತಷ್ಟು ವ್ಯಗ್ರರಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಪರಶುರಾಮ್‌, ತಮ್ಮ ಕಾರಿನಲ್ಲಿ ನಾರಾಯಣಗೌಡ ಹಾಗೂ ಅವರ ಕುಟುಂಬದ ಸದಸ್ಯರನ್ನು ಕರೆದೊಯ್ದರು.

ರೇವಣ್ಣ, ನಿಖಿಲ್‌ ಸಾಥ್‌: ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಿ.ಎಲ್‌.ದೇವರಾಜು ಅವರಿಗೆ ಶಾಸಕ ಎಚ್‌.ಡಿ.ರೇವಣ್ಣ, ಯುವ ಮುಖಂಡ ನಿಖಿಲ್‌ ಕುಮಾರಸ್ವಾಮಿ ಸಾಥ್‌ ಕೊಟ್ಟರು. ಬಿ.ಎಲ್‌.ದೇವರಾಜು ಬೆಳಿಗ್ಗೆ ಎಚ್‌.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರಿಂದ ಬಿ.ಫಾರಂ ಸ್ವೀಕರಿಸಿದರು. ಚನ್ನಮ್ಮ ಅವರು ಪೂಜೆ ಸಲ್ಲಿಸಿ ಬಿ.ಫಾರಂ ವಿತರಿಸಿದರು. ನಂತರ ಎಚ್‌.ಡಿ.ದೇವೇಗೌಡರ ಆಶೀರ್ವಾದ ಪಡೆದರು.

ಕೆಬಿಸಿ ನಾಮಪತ್ರ: ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ.ಬಿ.ಚಂದ್ರಶೇಖರ್‌ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್‌ ಖಾನ್‌, ಮುಖಂಡರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಇದ್ದರು.

ಕನ್ನಡ ಓದಲು ತಡವರಿಸಿದ ನಾರಾಯಣಗೌಡ

ನಾಮಪತ್ರ ಸಲ್ಲಿಸಿದ ನಂತರ ಚುನಾವಣಾಧಿಕಾರಿ ಎದುರು ಪ್ರಮಾಣ ಪತ್ರ ಹಾಗೂ ದೃಢೀಕರಣ ಪತ್ರವನ್ನು ಓದುವಾಗ, ಕೆ.ಸಿ.ನಾರಾಯಣಗೌಡ ತಡವರಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ದೇವಕಿ ಓದಲು ಸಹಾಯ ಮಾಡಿದರು. ನಾರಾಯಣಗೌಡ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾಗ, ಪ್ರಮಾಣವಚನ ಸ್ವೀಕರಿಸುವಾಗಲೂ ಕನ್ನಡ ಓದಲು ತಡವರಿಸಿದ್ದರು.

ಓಡಿ ಬಂದರು: ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು ಎಂದು ಜ್ಯೋತಿಷಿಗಳೊಬ್ಬರು ಹೇಳಿದ್ದರು. ಹೀಗಾಗಿ, ತಡವಾಗುತ್ತಿದೆ ಎಂಬ ಕಾರಣಕ್ಕೆ ನಾರಾಯಣಗೌಡರು ಮೆರವಣಿಗೆಯ ವಾಹನದಿಂದ ಇಳಿದು ಚುನಾವಣಾಧಿಕಾರಿ ಕಚೇರಿಯತ್ತ ಓಡಿ ಬಂದರು.

ಬಾಂಬೆ ಗಿರಾಕಿ ಸುಳ್ಳುಗಾರ: ರೇವಣ್ಣ

‘ಜೆಡಿಎಸ್‌ ಕಾರ್ಯಕರ್ತರು ಚಪ್ಪಲಿ ಎಸೆದಿಲ್ಲ. ಬಾಂಬೆ ಗಿರಾಕಿ ನಾರಾಯಣಗೌಡ ಒಬ್ಬ ಸುಳ್ಳುಗಾರ. ಸೋಲಿನ ಭೀತಿ ಎದುರಾಗಿದ್ದು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾನೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಟೀಕಿಸಿದರು.

ಆರ್‌ಒ ವಿರುದ್ಧ ಮಾಧುಸ್ವಾಮಿ ಆಕ್ರೋಶ

ಸಚಿವ ಮಾಧುಸ್ವಾಮಿ ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ನಾಮಪತ್ರ ಸಲ್ಲಿಸುವ ವೇಳೆ ಗೊಂದಲ ಉಂಟಾಗಲು ಚುನಾವಣಾಧಿಕಾರಿಯೇ ಕಾರಣ. ಅಧಿಕಾರಿಗಳಿಗೆ ಪ್ರಜ್ಞೆ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಪ್ರಮುಖ ಪಕ್ಷಗಳು ನಾಮಪತ್ರ ಸಲ್ಲಿಸುವಾಗ ಎಲ್ಲರಿಗೂ ಪ್ರತ್ಯೇಕ ಸಮಯ ನಿಗದಿ ಮಾಡಬೇಕಾಗಿತ್ತು. ನನ್ನ ಮೇಲೆ ಯಾರೂ ಹಲ್ಲೆ ಮಾಡಿಲ್ಲ, ಹಲ್ಲೆಯ ಯತ್ನ ನಡೆಯಿತು. ಹಲ್ಲೆಯಾದರೂ ಸಹಿಸಿಕೊಳ್ಳುವ ರಣಹೇಡಿ ನಾನಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT