ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಮರಗಳ ಹನನ’

ಮೇಲಧಿಕಾರಿಗಳಿಗೆ 24 ಗಂಟೆಯೊಳಗೆ ವರದಿ: ಆರ್‌ಎಫ್‌ಒ
Last Updated 3 ಸೆಪ್ಟೆಂಬರ್ 2020, 8:22 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಮರ ಕಡಿದಿರುವುದು ನಿಜ. ಈ ಸಂಬಂಧ ಮೇಲಧಿಕಾರಿಗಳಿಗೆ 24 ಗಂಟೆ ಒಳಗೆ ವರದಿ ಸಲ್ಲಿಸಲಿದ್ದೇನೆ’ ಎಂದು ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಸುನೀತಾ ತಿಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿಯೇ ಮರಗಳ ಹನನ ನಡೆಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾಗ ಸುನೀತಾ ಮಾತನಾಡಿದರು.

‘ಗುರುತು ಮಾಡದ ಹರ್ಕ್ಯುಲೆಸ್‌ ಮರಗಳನ್ನು ಕಡಿದಿರುವುದು ಸೋಮವಾರವಷ್ಟೇ ತಿಳಿದಿದೆ. ಸಂಖ್ಯೆ ಹಾಕದ ಮರಗಳನ್ನು ಕಡಿದಿರುವುದು ನಿಜ. ಈ ಬಗ್ಗೆ ವನಪಾಲಕರಿಂದಲೂ ಮಾಹಿತಿ ಪಡೆದಿದ್ದೇನೆ. ಪ್ರಕರಣ ಕುರಿತು ತನಿಖೆ ನಡೆಯಬೇಕಿದ್ದು, ಸಂಬಂಧಿಸಿದ ಸಿಬ್ಬಂದಿಯ ವಿರುದ್ಧ ಇಲಾಖೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಎಸಿಎಫ್‌ ಶಶಿಧರ್‌ ಮಾತನಾಡಿ, ‘ಅಧಿಕಾರಿಗಳ ಗಮನಕ್ಕೆ ತರದೆ, ಗುರುತು ಮಾಡದೆ ಮರಗಳನ್ನು ಹನನ ನಡೆಸಿರುವುದು ತಪ್ಪು. ಈ ಬಗ್ಗೆ ವಾಸ್ತವಾಂಶದ ವರದಿ ಕೊಡುವಂತೆ ಆರ್‌ಎಫ್‌ಒಗೆ ಸೂಚಿಸಿದ್ದೇನೆ. ಮರ ಬೆಳೆಸಬೇಕಾದವರೇ ಅವುಗಳನ್ನು ಕಡಿದಿರುವುದು ಸರಿಯಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಗಣಿಗಾರಿಕೆಗೆ ಕುಮ್ಮಕ್ಕು: ‘ಅರಣ್ಯ ಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿಗಳು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಒಂದೂವರೆ ವರ್ಷದ ಹಿಂದೆ ಪ್ರಕರಣ ದಾಖಲಿಸಿರುವ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ಅಂತಿಮ ವರದಿ ಸಲ್ಲಿಸಿಲ್ಲ. ನೂರಾರು ಎಕರೆ ಅರಣ್ಯ ಭೂಮಿ ಅತಿಕ್ರಮಣವಾಗಿದ್ದರೂ ಸ್ಥಳೀಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳನ್ನು ಅಮಾನತುಪಡಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌. ವೆಂಕಟೇಶ್‌, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಗಂಜಾಂ ರವಿಚಂದ್ರ ಆಗ್ರಹಿಸಿದರು.

ನಕಲಿ ದಾಖಲೆ: ‘ಚಂದ್ರೇಗೌಡ ಎಂಬ ವ್ಯಕ್ತಿ ನಕಲಿ ದಾಖಲೆ ನೀಡಿ ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಿದ್ದಾರೆ. ಅವರ ಬಗ್ಗೆ ದಾಖಲೆ ಸಹಿತ ದೂರು ನೀಡಿದ್ದರೂ ಏಕೆ ಕ್ರಮ ವಹಿಸಿಲ್ಲ’ ಎಂದು ಡಿ.ಎಸ್‌. ಚಂದ್ರಶೇಖರ್‌ ಪ್ರಶ್ನಿಸಿದರು.

ಕರಿಘಟ್ಟದಲ್ಲಿ ಜೂಜು, ಎಣ್ಣೆ ಪಾರ್ಟಿ ಇತರ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಕರುನಾಡ ಸೇವಕರ ಪಡೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರಿಯಾ ರಮೇಶ್‌ ಒತ್ತಾಯಿಸಿದರು.

ಸಿದ್ದೇಗೌಡ, ಕೆ.ಟಿ. ರಂಗಯ್ಯ, ಮೋಹನ್‌, ಶ್ರೀಕಂಠು, ಕುಮಾರ್‌, ತಮ್ಮಣ್ಣ, ಕೃಷ್ಣೇಗೌಡ, ಕನ್ನಡ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಶಿವರಾಂ, ವಕೀಲರಾದ ಕಿರಣ್‌, ಮಧು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT