ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ನಾಳೆಯಿಂದ ಗಮ್ಯ ರಂಗಹಬ್ಬ

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರದರ್ಶನ
Last Updated 11 ಫೆಬ್ರುವರಿ 2021, 1:23 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ಫೆ.12 (ಶುಕ್ರವಾರ) ರಿಂದ 3 ದಿನ ‘ಗಮ್ಯ ರಂಗಹಬ್ಬ’ ನಾಟಕೋತ್ಸವ ನಡೆಯಲಿದೆ.

ಈ ನಾಟಕೋತ್ಸವ ನಿಮಿತ್ತ ಫೆ.12ರಂದು ಫ್ರೆಂಚ್‌ ನಾಟಕಕಾರ ಮೋಲಿಯರ್‌ನ ಡಾ.ಸಿದ್ರಾಜು (ಹಾಸ್ಯ ನಾಟಕ), 13ರಂದು ಭಾಸ ಮಹಾಕವಿಯ ದೂತ ವಾಕ್ಯ, 14ರಂದು ವಿಲಿಯಂ ಷೇಕ್ಸ್‌ಪಿಯರ್‌ನ ಮ್ಯಾಕ್‌ ಬೆತ್‌ ಆಧಾರಿತ (ಎಚ್‌.ಎಸ್‌.ಶಿವಪ್ರಕಾಶ್‌ ತರ್ಜುಮೆ) ಮಾರನಾಯಕ ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿ ದಿನ ಸಂಜೆ 7 ಗಂಟೆಯಿಂದ 8.45ರವರೆಗೆ ನಾಟಕ ಪ್ರದರ್ಶನ ಇರುತ್ತದೆ.

ಕೊರೊನಾ ಸಮಯ ಸದ್ಬಳಕೆ: ಕೊರೊನಾದ ಸಂದಿಗ್ಧ ಸಮಯದಲ್ಲಿ ಹಿರಿಯ ರಂಗ ಕಲಾವಿದ ಹಾಗೂ ನಿರ್ದೇಶಕ ಚ. ನಾರಾಯಣಸ್ವಾಮಿ ಮತ್ತು ತಂಡ ಮೂರೂ ನಾಟಕಗಳನ್ನು ಸಿದ್ಧಡಿಸಿದೆ. ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕಿನ ಯುವ ಕಲಾವಿದರು ಈ ನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ಡಾ.ಸಿದ್ರಾಜು’ ಮತ್ತು ‘ಮಾರನಾಯಕ’ ನಾಟಕಗಳನ್ನು ಚ. ನಾರಾಯಣಸ್ವಾಮಿ ಹಾಗೂ ‘ದೂತ ವಾಕ್ಯ’ ನಾಟಕವನ್ನು ಕೊಪ್ಪಳದ ರಮೇಶ್‌ ಬೆಳಕಲ್‌ ನಿರ್ದೇಶಿಸಿದ್ದಾರೆ. ಮಾರನಾಯಕ ನಾಟಕಕ್ಕೆ ಮುರಳಿ ಶೃಂಗೇರಿ ಸಂಗೀತ ನೀಡಿದ್ದು, ಉಳಿದೆರಡು ನಾಟಕಗಳಿಗೆ ಸಿನಿಮಾ ನಟ, ಚ.ನಾರಾಯಣಸ್ವಾಮಿ ಅವರ ಪುತ್ರ ಆದಿತ್ಯ (ಚಿಂಟೂ ಗಮ್ಯ) ಸಂಗೀತ ನೀಡಿದ್ದಾರೆ. ಅರುಣಮೂರ್ತಿ ಬೆಳಕಿನ ಸಂಯೋಜನೆ ಮಾಡಿದ್ದು, ಮೇಕಪ್‌ ಮತ್ತು ವಸ್ತ್ರಾಲಂಕಾರ ಚ.ನಾರಾಯಣಸ್ವಾಮಿ ಅವರದ್ದು.

30 ವರ್ಷಗಳ ರಂಗಭೂಮಿ ನಂಟು: ಚ.ನಾರಾಯಣಸ್ವಾಮಿ ಅವರು ಪ್ರೌಢಶಾಲಾ ಶಿಕ್ಷಕರಾಗಿದ್ದು, 30 ವರ್ಷಗಳಿಂದ ರಂಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಹೆಸರಾಂತ ರಂಗಭೂಮಿ ನಿರ್ದೇಶಕರಾದ ಬಸವಲಿಂಗಯ್ಯ, ಬಿ.ವಿ. ಕಾರಂತ, ಬಿ. ಸುರೇಶ್‌, ಮಂಡ್ಯ ರಮೇಶ್‌ ಅವರ ಜತೆ ಕೆಲಸ ಮಾಡಿದ ಅನುಭವ ಇದೆ. ಡಾ.ಸಿದ್ರಾಜು, ಮಹಿಮಾಪುರ, ಜಲಗಾರ, ಪರಿತ್ಯಕ್ತ, ಮಾರನಾಯಕ, ಬೇಂದ್ರೆ ಅವರ ಸಖೀಗೀತ, ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ ಆಧರಿಸಿದ ಪರಿಕಿಸು ಜೀವನಾರ್ಥ, ಹುಲಿಯ ಕತೆ, ಹರಹಂತ ಸೇರಿ ಸುಮಾರು 30 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮಕ್ಕಳ ನಾಟಕಗಳಾದ ಒಗಟಿನ ರಾಣಿ, ಕಿಲಾಡಿ ದಾಸಯ್ಯ, ರಾಧಮ್ಮನ ಫಜೀತಿ, ಬೆಟ್ಟಕ್ಕೆ ಚಳಿಯಾದರೆ, ಕೆರೆಗೆ ಹಾರ ನಾಟಕಗಳನ್ನೂ ನಿರ್ದೇಶಿಸಿದ್ದಾರೆ.

ನಟರೂ ಹೌದು: ನಾರಾಯಣಸ್ವಾಮಿ ಚರಣ ದಾಸ, ಮಣ್ಣಿನ ಗಾಡಿ, ಅಗ್ನಿ ಮತ್ತು ಮಳೆ, ಸಂಸಾರದಲ್ಲಿ ಸನಿದಪ, ಅಪ್ಪ, ಒಂದು ಸೈನಿಕನ ವೃತ್ತಾಂತ, ತಬರನ ಕತೆ, ಸಾಹೇಬರು ಬರುತ್ತಾರೆ, ಅಶ್ವ ಪರ್ವ, ಕಿರವಂತ, ಮೋಜಿನ ಸೀಮೆಯಾಚೆ ಒಂದೂರು, ಹರಕೆಯ ಕುರಿ, ಯುಯುತ್ಸು, ನಾಗಮಂಡಲ, ಗಾಂಧಿ– ಅಂಬೇಡ್ಕರ್‌, ರವೀಂದ್ರ ನಾಟಕ ಟ್ಯಾಗೋರರ ದೃಷ್ಟಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ಕೇರಳ, ತಮಿಳುನಾಡು, ಮುಂಬೈ, ದೆಹಲಿ, ಕೋಲ್ಕತ್ತಾ, ಅಸ್ಸಾಂ ಮೊದಲಾದ ಕಡೆ ನಾಟಕ ಪ್ರದರ್ಶನ ನೀಡಿರುವುದು ನಾರಾಯಣಸ್ವಾಮಿ ಅವರ ಹೆಗ್ಗಳಿಕೆ.

ಬಸವಲಿಂಗಯ್ಯ ನಿರ್ದೇಶನದಲ್ಲಿ, ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ಕಂಡಿರುವ ‘ಗಾಂಧಿ– ಅಂಬೇಡ್ಕರ್‌’ ನಾಟಕದಲ್ಲಿ ಗಾಂಧಿ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ ಕನ್ನಡೇತರ ರಂಗಭೂಮಿ ನಿರ್ದೇಶಕರಿಂದಲೂ ನಾರಾಯಣಸ್ವಾಮಿ ಬೆನ್ನು ತಟ್ಟಿಸಿಕೊಂಡಿದ್ದಾರೆ. ಈ ನಾಟಕ ದೇಶದಾದ್ಯಂತ 150ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ‘ಪರಿತ್ಯಕ್ತ’ ನಾಟಕ ಪ್ರದರ್ಶನವನ್ನು ಕುಂತಿ ಬೆಟ್ಟದ ತುದಿಯಲ್ಲಿ ಏರ್ಪಡಿಸಿದ್ದು ಮರೆಯಲಾರದ ಅನುಭವ ಎಂದು ಚ.ನಾರಾಯಣಸ್ವಾಮಿ ಸ್ಮರಿಸುತ್ತಾರೆ.

ಚಿಂಟೂ ಬಗ್ಗೆ: ತಂದೆಗೆ ಹೆಗಲಾಗಿ ನಿಂತಿರುವ ಚ.ನಾರಾಯಣಸ್ವಾಮಿ ಅವರ ಪುತ್ರ ಚಿಂಟೂ ಗಮ್ಯ (ಆದಿತ್ಯ) ಸಂಗೀತ ನಿರ್ದೇಶಕ ಮಾತ್ರವಲ್ಲ; ಸಿನಿಮಾ ನಟರೂ ಹೌದು. ಕಂಠೀರವ, ವೀರಬಾಹು, ಸಿದ್ಲಿಂಗು, ಗೋಕುಲ ಕೃಷ್ಣ, ಸಕ್ಕರೆ, ಮೈತ್ರಿ, ಕರಿಯ ಕಣ್‌ ಬಿಟ್ಟ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್‌ಲಾಲ್‌ ಜತೆ ‘ಮೈಹೀರೋ’ ಚಿತ್ರದಲ್ಲೂ ಚಿಂಟೂ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT