ಶುಕ್ರವಾರ, ಅಕ್ಟೋಬರ್ 30, 2020
19 °C
ಗಾಂಧೀಜಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಜಯಂತಿ ಆಚರಣೆ; ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅಭಿಮತ

ಅಹಿಂಸೆ, ಶಾಂತಿ ಮಂತ್ರ ವಿಶ್ವವ್ಯಾಪಿಯಾಗಲಿ: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮಹಾತ್ಮ ಗಾಂಧೀಜಿ ವಿಶ್ವ ಕಂಡ ಶ್ರೇಷ್ಠ ಹೋರಾಟಗಾರ, ಅಧ್ಮಾತ್ಮ ಚಿಂತಕ. ತಲ್ಲಣಗಳ ಇಂದಿನ ಯುಗದಲ್ಲಿ ಅವರು ಹಾಕಿಕೊಟ್ಟ ಅಹಿಂಸೆ ಮತ್ತು ಶಾಂತಿಯ ಮಂತ್ರ ವಿಶ್ವವ್ಯಾಪಿಯಾಗುವ ಅವಶ್ಯಕತೆ ಇದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಶುಕ್ರವಾರ ನಡೆದ ಮಹಾತ್ಮ ಗಾಂಧಿ ಹಾಗೂ ಲಾಲ್‍ಬಹುದ್ದೂರ್ ಶಾಸ್ತ್ರಿ ಜನ್ಮದಿನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಗಾಂಧೀಜಿ ಬಾಲ್ಯದಿಂದಲೇ ಶ್ರವಣಕುಮಾರನಿಂದ ಪ್ರೇರೇಪಿತರಾಗಿದ್ದರು. ಭಾರತದ ಸಂಸ್ಕತಿ, ಸನಾತನ ಧರ್ಮದಲ್ಲಿರುವ ಗುರು-ಹಿರಿಯ ಬಗ್ಗೆ, ಮಾತಾ, ಪಿತೃವಿನ ಬಗ್ಗೆ ಅಪಾರ ಗೌರವ ಹೊಂದಿದ್ದರು. ಸತ್ಯ ಹರಿಶ್ಚಂದ್ರನ ಆದರ್ಶ ಅಳವಡಿಸಿಕೊಂಡಿದ್ದರು. ಲಂಡನ್‍ನಲ್ಲಿ ಬ್ಯಾರಿಸ್ಟರ್‌ ಪದವಿ ಪಡೆದು ವಿಶ್ವದ ವಿವಿಧ ಭಾಗದಲ್ಲಿ ಇದ್ದ ಅಸಮಾನತೆ, ಜನಾಂಗೀಯ ಘರ್ಷಣೆ ಮತ್ತು ಗುಲಾಮಗಿರಿ ವಿರುದ್ಧ ಧ್ವನಿ ಎತ್ತಿದರು. ದಕ್ಷಿಣ ಆಫ್ರಿಕಾದಲ್ಲಿ ಚಳವಳಿಯ ಕಿಚ್ಚು ಹಚ್ಚುವ ಮೂಲಕ ವಿಶ್ವವ್ಯಾಪಿಯಾದರು’ ಎಂದು ಹೇಳಿದರು.

‘ಭಾರತದಲ್ಲಿದ್ದ ಅಸಮಾನತೆ, ಸಂಘರ್ಷ ಮತ್ತು ಶೋಷಣೆ ವಿರುದ್ಧ ಧ್ವನಿ ಎತ್ತಿದರು. ಸತ್ಯ, ಅಹಿಂಸೆ, ಶಾಂತಿಯ ಮೂಲಕ ಹೋರಾಟ ಮಾಡಲು ದೇಶದ ಜನರಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಬೇಕು’ ಎಂದು ಹೇಳಿದರು.

‘ಭಾರತ ದೇಶಕಂಡ ಬಲಿಷ್ಠ ಪ್ರಧಾನಮಂತ್ರಿಗಳಲ್ಲಿ ಲಾಲ್‍ಬಹದ್ದೂರ್ ಶಾಸ್ತ್ರಿ ಪ್ರಮುಖರು. ನಮ್ಮ ದೇಶದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ಧಾರೆ. ಬಡತನ, ಹಸಿವು ತಂಡವವಾಡುವ ಸಂದರ್ಭದಲ್ಲಿ ಹಾಲಿನ ಉತ್ಪಾದನೆಗೆ ಆದ್ಯತೆ ನೀಡಿದರು. ನ್ಯಾಷನಲ್‌ ಡೇರಿ ಡೆವಲಪ್‌ಮೆಂಟ್ ಬೋರ್ಡ್‌ , ಅಮುಲ್ ಕೋ-ಅಪರೇಟಿವ್ ಸೊಸೈಟಿ ಸ್ಥಾಪನೆಗೆ ಕಾರಣಕರ್ತರಾದರು. ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ರೈತ ಹಾಗೂ ಯೋಧರ ಮಹತ್ವವನ್ನು ದೇಶಕ್ಕೆ ಸಾರಿದರು’ ಎಂದರು.

ಇದೇ ವೇಳ ಪದ್ಮನಾಭ ಅವರು ಭಗವದ್ಗೀತೆ, ಅನಿಶ್ ಜೋಸೆಫ್ ಬೈಬಲ್ ಮತ್ತು ತನ್ವೀರ್ ಮಾಸ್ಟರ್ ಕುರಾನ್ ಪಠಣ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಪ್ರತಿಜ್ಞಾವಿಧಿ ಬೋಧಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿಗ ಶೈಲಜಾ, ಅನನ್ಯಾ ಹಾರ್ಟ್‌ ಸಂಸ್ಥೆ ಅಧ್ಯಕ್ಷೆ ಬಿ.ಎಸ್‌.ಅನುಪಮಾ, ನಗರಸಭಾ ಸದಸ್ಯ ಎಂ.ಎನ್‌.ಶ್ರೀಧರ್‌, ಟಿ.ಹರೀಶ್‌ ಇದ್ದರು.

ಕಾಳೇಗೌಡ ಶಾಲೆ: ನಗರದ ಕಾಳೇಗೌಡ ಶಾಲೆಯಲ್ಲಿ ಸಮೃದ್ಧಿ ಲಯನ್ಸ್ ಸಂಸ್ಥೆ, ನಿವೃತ್ತ ಶಿಕ್ಷಕ ದಿ.ಮಾಯಿಗಶೆಟ್ಟಿ ಸೇವಾ ಸಮಿತಿ ವತಿಯಿಂದ ಮಹಾತ್ಮಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಅಂಗವಾಗಿ ಪ್ರಬಂಧ, ಚಿತ್ರಕಲಾ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್‌ ನಾಯಕಿ ನೀನಾ ಪಟೇಲ್‌ ಮಾತನಾಡಿ ‘ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಗಾಂಧೀಜಿ ಹೇಳಿದ್ದರು. ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ ನಿವಾರಣೆಗೆ ಶ್ರಮಿಸಿದ ಗಾಂಧೀಜಿ ತತ್ವಾದರ್ಶ ಪಾಲಿಸುವ ಮೂಲಕ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು’ ಎಂದು ಹೇಳಿದರು.

ಕೃಷಿಕ ಲಯನ್ಸ್ ಸಂಸ್ಥೆ ಪ್ರಧಾನಪೋಷಕ ಕೆ.ಟಿ. ಹನುಮಂತು, ಮಾಯಿಗಶೆಟ್ಟಿ ಸೇವಾ ಸಮಿತಿ ಅಧ್ಯಕ್ಷ ಎಂ. ಲೋಕೇಶ್, ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಬಿ.ಎಂ. ಅಪ್ಪಾಜಪ್ಪ, ವಲಯ ಅರಣ್ಯಾಧಿಕಾರಿ ಶಿಲ್ಪಾ ಇದ್ದರು.

ಕೋವಿಡ್‌ ತಗ್ಗಿಸಲು ಹೆಚ್ಚು ಕೆಲಸ ಮಾಡಿ

ಮಂಡ್ಯ: ‘ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು ಈ ಸಂದರ್ಭದಲ್ಲಿ ಅಧಿಕಾರಿಗಳು ಹೆಚ್ಚು ಕೆಲಸ ಮಾಡಬೇಕು. ಗಾಂಧಿ ಜಯಂತಿಯಂದು ರಜೆ ಪಡೆಯದೇ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಅವರು ‘ಗಾಂಧೀಜಿ ಹಾಕಿಕೊಟ್ಟಿರುವ ಶ್ರಮದಾನದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಕೋವಿಡ್‌ ಪ್ರಕರಣಗಳನ್ನು ತಗ್ಗಿಸಲು ಆಂದೋಲನದ ರೀತಿಯಲ್ಲಿ ಕೆಲಸ ಮಾಡಬೇಕು. ಆ ಮೂಲಕ ಕೋವಿಡ್‌ ಮುಕ್ತ ಜಿಲ್ಲೆ ನಿರ್ಮಿಸಬೇಕು’ ಎಂದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು