ಬುಧವಾರ, ಫೆಬ್ರವರಿ 19, 2020
16 °C
ಜಲಮೂಲ ಕಲುಷಿತ, ಸೊಳ್ಳೆ ಹಾವಳಿ, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನ

ಕೊಪ್ಪ ಕೆರೆಯಂಗಳದಲ್ಲಿ ಕಸದ ರಾಶಿ

ಬಿ.ಎ.ಮಧುಕುಮಾರ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಗ್ರಾಮದ ಕೆರೆಯಂಗಳಕ್ಕೆ ಹೊಂದಿಕೊಂಡಿರುವ ರಸ್ತೆ ಬದಿಗಳಲ್ಲಿ ಕಸವನ್ನು ಸುರಿಯುತ್ತಿದ್ದು, ಈ ಭಾಗದ ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ಕೋಳಿ ತ್ಯಾಜ್ಯ, ಕಸ ಕಡ್ಡಿ, ಪ್ಲಾಸ್ಟಿಕ್‌ ವಸ್ತುಗಳು, ಮದ್ಯದ ಬಾಟಲಿಗಳನ್ನು ಸುರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.

ಕೊಪ್ಪದ ಕೆರೆಯ ಕೆಳಭಾಗದಲ್ಲಿರುವ ಕಾಲುವೆ ಮೂಲಕ ರೈತರ ಹೊಲ, ಗದ್ದೆಗಳಿಗೆ ನೀರು ಹರಿಯುತ್ತದೆ. ಈ ನೀರಿಗೆ ಕಸ ಸೇರುತ್ತಿದ್ದು, ಜಲಮೂಲ ಕಲುಷಿತಗೊಳ್ಳುತ್ತಿದೆ. ಕೋಳಿ ಮಾಂಸದ ಅಂಗಡಿ ಮಾಲೀಕರು ಕೋಳಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಮೂಟೆಗಳಲ್ಲಿ ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ. ಮಾಂಸ ತಿನ್ನಲು ನಾಯಿಗಳು ಮುಗಿ ಬೀಳುತ್ತಿವೆ. ನಾಯಿಗಳ ಹಾವಳಿಯಿಂದಾಗಿ ಈ ಭಾಗದಲ್ಲಿ ಮಕ್ಕಳು, ವೃದ್ಧರು ಸಂಚರಿಸಲು ಭಯ ಪಡುವಂತಾಗಿದೆ.

ಸಂತೆ ಮೈದಾನ, ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣ, ಕೊಪ್ಪದ ಎಲ್ಲಾ ಬಡಾವಣೆಗಳ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಕಂಡುಬರುತ್ತಿವೆ. ಶಾಲಾ ಕಾಲೇಜುಗಳ ಮುಂದೆ ಕಸದ ರಾಶಿ ಬಿದ್ದಿವೆ.

ಕೆಲ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಮಾಡಿದ್ದರೂ ಕೊಪ್ಪದ ಯಾವುದೇ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಬಳಕೆ ನಿಂತಿಲ್ಲ. ಚರಂಡಿಗಳ ಹೂಳನ್ನು ನಿಯಮಿತವಾಗಿ ತೆರವುಗೊಳಿಸುತ್ತಿಲ್ಲ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೊಳಚೆ ನೀರು ಕಾಲುವೆಗಳಿಗೆ ಸೇರುತ್ತಿದೆ. ಕಾಲುವೆ ನೀರನ್ನು ಬಳಸುವ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ರೋಗಗಳ ಭೀತಿಯಲ್ಲಿ ಜನರು ವಾಸ ಮಾಡುವಂತಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ಹುರುಗಲವಾಡಿ ಉಮೇಶ್ ಆಗ್ರಹಿಸಿದರು.

ಕೊಪ್ಪ ಗ್ರಾಮ ಪಂಚಾಯಿತಿಯು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ವಿಫಲವಾಗಿದೆ. ರಸ್ತೆ ಬಳಿ ಕಸ ಹಾಕುವವರು ಹಾಗೂ ಕೋಳಿ ಮಾಂಸದ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಸ ವಿಲೇವಾರಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕದೊಡ್ಡಿ ಶಿವಕುಮಾರ್, ರಾಮಣ್ಣ ಒತ್ತಾಯಿಸಿದರು.

‘2 ಎಕರೆ ಜಾಗಕ್ಕೆ ಕೋರಿಕೆ’
ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಸ್ಕರಣೆ ಮಾಡಲು ಅತ್ಯಾಧುನಿಕ ಘಟಕ ಸ್ಥಾಪಿಸಬೇಕು. ಈ ಘಟಕ ಸ್ಥಾಪಿಸಲು ಸರ್ಕಾರಿ ಜಾಗದ ಕೊರತೆ ಇದೆ. ಕಸ ವಿಲೇವಾರಿ ಮಾಡಲು ಸಣ್ಣ ವಾಹನವಿದೆ. ಚರಂಡಿಗಳ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಅಧಿಕಾರ ನೀಡಲು ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ಕಸ ವಿಲೇವಾರಿ ಮಾಡಲು ಕೊಡಿದೊಡ್ಡಿ ಬಳಿ 2 ಎಕರೆ ಪ್ರದೇಶ ನೀಡುವಂತೆ ತಹಶೀಲ್ದಾರ್ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೊಪ್ಪ ಗ್ರಾ.ಪಂ ಪಿಡಿಒ ವೈ.ಡಿ.ನಿರಂಜನ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು