ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಕಾರ್ಪೊರೇಟ್‌ ಧಣಿಗಳ ಕಾವಲು ನಾಯಿ-ಪ್ರೊ.ಕಾಳೇಗೌಡ ನಾಗವಾರ

ಸಮ್ಮೇಳನದ ಸಂಕೀರ್ಣ ಗೋಷ್ಠಿಯಲ್ಲಿ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅಭಿಮತ
Last Updated 22 ಫೆಬ್ರುವರಿ 2021, 4:50 IST
ಅಕ್ಷರ ಗಾತ್ರ

ಮಂಡ್ಯ: ರಾಷ್ಟ್ರದಲ್ಲಿ ರೈತರ ಸಮಸ್ಯೆ ಪ್ರಜಾಪ್ರಭುತ್ವದ ಅಪಮಾನವಾಗಿದ್ದು, ಸರ್ಕಾರಗಳು ಕಾರ್ಪೊರೇಟ್‌ ಧಣಿಗಳ ಕಾವಲು ನಾಯಿಗಳಾಗುತ್ತಿವೆ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ದಿನದ ಸಂಕೀರ್ಣಗೊಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರ ಹಿತ ಕಾಯದೆ ಕಾರ್ಪೊರೇಟ್‌ ಧಣಿಗಳು, ಕೋಟ್ಯಂತರ ರೂಪಾಯಿ ಕಳ್ಳರಿಗೆ ರಕ್ಷಣೆ ನಿಡುತ್ತಿದ್ದಾರೆ. ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ಅನ್ನ ಕೊಡುವ ಧಣಿಯ ಬದುಕು ಶೋಷನೀಯವಾಗಿದೆ. ದೇಶ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ
ಕಾಡುತ್ತಿದೆ. ಸರ್ಕಾರದ ಅವಿವೇಕತನದ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದರು.

ಬ್ರಿಟಿಷರ ಕಾಲದಲ್ಲಿ ಕೊಲ್ಹಾಪುರ ಶಾಹು ಮಹಾರಾಜರು, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಫ್ರೇಸರ್‌ ಅವರು ಎಳೆಯ ವಯಸ್ಸಿನಲ್ಲಿ ಶಾಹು, ನಾಲ್ವಡಿ ಅವರಿಗೆ ಅತ್ಯುತ್ತಮ ಶಿಕ್ಷಣ ನೀಡಿದ ಗುರುಗಳಾಗಿದ್ದರು. ಅವರ ಗರಡಿಯಲ್ಲಿ ಬೆಳೆದ ರಾಜರು ಇಡೀ ದೇಶವೇ ತಿರುಗಿ ನೋಡುವ ರೀತಿಯಲ್ಲಿ ಆಳ್ವಿಕೆ ನಡೆಸಿದ್ದಾರೆ ಎಂದು ಹೇಳಿದರು.

ಬ್ರಿಟಿಷರು ಬಂದಿದ್ದರಿಂದ ಒಳ್ಳೆಯದೂ ಆಗಿದೆ ಕೆಟ್ಟದ್ದೂ ಆಗಿದೆ. ಫ್ರೇಸರ್‌ ನೀಡಿದ ಶಿಕ್ಷಣದಿಂದ ಸಾಕಷ್ಟು ಒಳ್ಳೆಯದು ಆಗಿದೆ. ಬೆಂಗಳೂರಿನ ಫ್ರೇಸರ್‌ ಟೌನ್‌ ಹೆಸರು ಬದಲಿಸಿ ಅದನ್ನು ಪುಲಕೇಶಿನಗರ ಮಾಡಿದ್ದೇವೆ. ಅಂದು ರಾಜರು ಜನತೆಯ ಶತ್ರುವಾಗಿದ್ದರು. ರಾಜರು, ಪುರೋಹಿತರು ಮೇಲು ಕೀಳು ಹೇಳುವ ಪಾತಕಿಗಳಾಗಿದ್ದರು. ಇದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಫ್ರೇಸರ್‌ ಅವರು ನಾಲ್ವಡಿ ಅವರನ್ನು ಸಂತೆ, ಜಾತ್ರೆ, ದಲಿತ ಕೇರಿಗೆ ಕರೆದುಕೊಂಡು ಹೋಗುತ್ತಿದ್ದರು. ದಲಿತರಿಗೆ ಶಿಕ್ಷಣ ನೀಡಿದ್ದರು. ರಾಜರು ಪಾವನ ಆಗುವುದನ್ನು ಹೇಳಿಕೊಟ್ಟಿದ್ದರು ಎಂದು ಬಣ್ಣಿಸಿದರು.

ಟಿಪ್ಪು ಸುಲ್ತಾನ್‌ ಅವರು ರೈತ ವರ್ಗಕ್ಕೆ ಮಾಡಿದ ಸೇವೆ ಅಪಾರವಾಗಿದೆ. ರೇಷ್ಮೆ, ಜಲಾಶಯ ಸೇರಿದಂತೆ ವಿವಿಧ ಕಲ್ಪನೆಗಳನ್ನು ನೀಡಿದ್ದಾರೆ. ಟಿಪ್ಪು ಬ್ರಿಟಿಷರ ವಿರುದ್ಧ ಸೆಣಸಾಡಿದ್ದರಿಂದ ಕಾವೇರಿ ವಿಚಾರದಲ್ಲಿ ಬ್ರಿಟೀಷರು ತಮಿಳುನಾಡಿಗೆ ಸಹಾಯ ಮಾಡಿದ್ದರು ಎಂದು ಹೇಳಿದರು.

ಗೊಷ್ಠಿ ಉದ್ಘಾಟಿಸಿದ ರೈತ ನಾಯಕಿ ಸುನಂದಾ ಜಯರಾಂ, ಕೃಷಿ ಭೂಮಿ ಖಾಸಗೀಕರಣದಿಂದ ವಿದೇಶಿ ಕಂಪನಿಗಳು ಭೂಮಿಯನ್ನು ಕೊಂಡುಕೊಳ್ಳುವಂತಾಗಲಿದ್ದು, ಕೃಷಿ ಭೂಮಿ ಅಸ್ಮಿತೆ ನಾಶವಾಗಲಿದೆ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್‌.ಅನಿತಾ ಯುವಜನ ಮತ್ತು ಕ್ರೀಡೆ ಬಗ್ಗೆ ವಿಷಯ ಮಂಡಿಸಿದರು. ಸಹಾಯಕ ಪ್ರಾಧ್ಯಾಪಕ ಎಂ.ಬಿ.ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT