ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ | ಅಂತರ್ಜಲ ಕುಸಿತ; ಜಲಕ್ಷಾಮದ ಭೀತಿ

ಸಂಪೂರ್ಣ ಬರಿದಾದ ಲೋಕಪಾವನಿ, ವೀರವೈಷ್ಣವಿ ನದಿಗಳು, ಬತ್ತಿಹೋಗುತ್ತಿರುವ ಕೆರೆಕಟ್ಟೆಗಳು
Published 20 ಏಪ್ರಿಲ್ 2024, 5:20 IST
Last Updated 20 ಏಪ್ರಿಲ್ 2024, 5:20 IST
ಅಕ್ಷರ ಗಾತ್ರ

ನಾಗಮಂಗಲ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ತೀವ್ರ ಕೊರತೆಯಾದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಬರಗಾಲ ಹೆಚ್ಚಾಗಿದ್ದು, ಅಂತರ್ಜಲ ಮಟ್ಟದ ತೀವ್ರವಾಗಿ ಕುಸಿತವಾಗಿದೆ. ಸಾವಿರ ಅಡಿಗಳವರೆಗೂ ಕೊಳವೆ ಬಾವಿ ಕೊರೆದರೂ ನೀರು ಬರದಿರುವುದು ರೈತರಲ್ಲಿ ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ತಾಲ್ಲೂಕಿನಾದ್ಯಂತ ಸಾವಿರಾರು ಕೊಳವೆ ಬಾವಿಗಳು ಬತ್ತಿ ಹೋಗುತ್ತಿರುವುದು ಆತಂಕ ತಂದಿದೆ.

‘ಬರಪೀಡಿತ ತಾಲ್ಲೂಕು’ ಎಂದು ಘೋಷಣೆಯಾಗಿದ್ದು, ಈ ಬಾರಿ ಮಳೆಗಾಲದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಬೇಸಿಗೆಗೂ ಮುನ್ನವೇ ಕೆರೆಕಟ್ಟೆ ಸೇರಿದಂತೆ ಜಲಮೂಲಗಳು ಬತ್ತುತ್ತಿದ್ದವು. ಅಲ್ಲದೇ ಮಳೆಯ ಕೊರತೆಯಾದ ಹಿನ್ನೆಲೆಯಲ್ಲಿ ರೈತರು ಬೆಳೆಯನ್ನು ಉಳಿಸಿಕೊಳ್ಳಲು ಕೊಳವೆ ಬಾವಿಗಳನ್ನು ಆಶ್ರಯಿಸಿದ್ದರು. ಆದರೆ ಈಗ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಕೆರೆಕಟ್ಟೆಗಳಲ್ಲೂ ನೀರು ಬತ್ತಿರುವುದರಿಂದ ಜನಜಾನುವಾರುಗಳ ಬಳಕೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಸಮಸ್ಯೆ ಎದುರಾಗಲಿದೆ.

ಬತ್ತಿದ್ದ ಲೋಕಪಾವನಿ, ವೀರವೈಷ್ಣವಿ: ಪ್ರತಿ ವರ್ಷವೂ ವಾಡಿಕೆಯಷ್ಟು ಮಳೆಯಾದಾಗ ವೀರವೈಷ್ಣವಿ ಮತ್ತು ಲೋಕಪಾವನಿ ನದಿ ಮೂಲಗಳ ಹಳ್ಳಕೊಳ್ಳಗಳಲ್ಲಿ ನೀರು ಸಂಗ್ರಹವಾಗಿ ಬೇಸಿಗೆ ನಿರ್ವಹಣೆಗೆ ರೈತರಿಗೆ ಸಹಕಾರಿಯಾಗುತ್ತಿದ್ದು, ಅಂತರ್ಜಲ ಮಟ್ಟವೂ ಸುಧಾರಿಸುತ್ತಿತ್ತು. ಆದರೆ ಈ ಬಾರಿ ವಾಡಿಕೆಗಿಂತಲೂ ಅತ್ಯಂತ ಕನಿಷ್ಠ ಮಳೆಯಾಗಿದ್ದು, ನದಿ ಮೂಲಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿತ್ತು.

ಜೊತೆಗೆ ಈಗ ತೀವ್ರ ಬೇಸಿಗೆ ಪ್ರಾರಂಭವಾದ ನಂತರ ಉಳಿದಿದ್ದ ನೀರು ಬತ್ತಿಹೋಗಿ, ಆವಿಯಾಗಿ ಬರಿದಾಗಿದೆ.

ನಾಗಮಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ಕೆರೆ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸಂಪೂರ್ಣ ಬತ್ತಿಹೋಗಿದೆ
ನಾಗಮಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ಕೆರೆ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಸಂಪೂರ್ಣ ಬತ್ತಿಹೋಗಿದೆ
ಹೆಚ್ಚಿದ ಕೊಳವೆ ಬಾವಿ ಬೇಡಿಕೆ
ಹಳೆಯ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದ್ದರಿಂದ ನೀರು ನಿಂತ ಹಿನ್ನೆಲೆಯಲ್ಲಿ ರೈತರು ಕಷ್ಟಪಟ್ಟು ಬೆಳೆಸಿದ ತೆಂಗು, ಅಡಿಕೆ, ಮಾವು ಸೇರಿದಂತೆ ವಿವಿಧ ಬೆಳೆಗಳನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂದು ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗುತ್ತಿದ್ದಾರೆ. ಇದರಿಂದ, ಕೊಳವೆ ಬಾವಿ ಕೊರೆಯುವ ಯಂತ್ರಗಳಿಗೆ ಬೇಡಿಕೆ ಸೃಷ್ಟಿ ಮಾಡಿದೆ‌.

ಮತ್ತಷ್ಟು ಗಂಭೀರ: ಈಗಾಗಲೇ ಬೇಸಿಗೆಯಲ್ಲಿ ಪ್ರತಿವರ್ಷಕ್ಕಿಂತ ಅಧಿಕ ತಾಪಮಾನ ಏರಿಕೆಯಾಗಿದ್ದು, ಕೆರೆಕಟ್ಟೆಗಳಲ್ಲಿ ನೀರು ಬರಿದಾಗಿದೆ. ಮುಂದಿನ ಎರಡು ತಿಂಗಳಲ್ಲಿ ಸಮಸ್ಯೆಯು ಮತ್ತಷ್ಟು ಗಂಭೀರತೆ ಪಡೆಯಲಿದೆ. 700-800 ಅಡಿ ಕೊರೆದರೆ ನೀರು ಬರದಂತಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಹೀಗೆಯೇ ಮುಂದುವರಿದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾನುವಾರುಗಳ ನಿರ್ವಹಣೆ ಮಾಡುವುದು ಸಹ ಕಷ್ಟವಾಗುತ್ತದೆ ಎಂದು ಮೂಡಲಕೊಪ್ಪಲು ಗ್ರಾಮದ ಯುವ ರೈತ ಪುಟ್ಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT