ಗುರುವಾರ , ಆಗಸ್ಟ್ 5, 2021
21 °C
ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ

ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಜಿಲ್ಲಾ ಘಟಕದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಅನೇಕ ವರ್ಷಗಳಿಂದ ಸರ್ಕಾರದ ನಿಯಮಾವಳಿ ಅನುಸಾರ ಆಯ್ಕೆಗೊಂಡು ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಅಭದ್ರತೆಯಿಂದ ಜೀವನ ನಡೆಸುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರನ್ನು ಕಾಯಂಗೊಳಿಸಿ ಉದ್ಯೋಗ ಭದ್ರತೆ ನೀಡಲಾಗಿದೆ. ಜೂನ್‍ನಲ್ಲಿ ಅಸ್ಸಾಂ ಸರ್ಕಾರ 46 ಸಾವಿರ ಶಿಕ್ಷಕರು, ಆಂಧ್ರಪ್ರದೇಶ 25 ಸಾವಿರ, ದೆಹಲಿ ಸರ್ಕಾರ 25 ಸಾವಿರ ಶಿಕ್ಷಕರನ್ನು ಸೇವಾಭದ್ರತೆಗೆ ಒಳಪಡಿಸಿವೆ. ಆದರೆ, ರಾಜ್ಯದಲ್ಲಿ ಈವರೆಗೆ ಸೇವಾ ಭದ್ರತೆ ವಿಚಾರವಾಗಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಾಲ್ವರು ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಕುಟುಂಬಕ್ಕೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಈ ಅತಿಥಿ ಉಪನ್ಯಾಸಕರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದರು.

ಅತಿಥಿ ಉಪನ್ಯಾಸಕರಿಗೆ 12 ತಿಂಗಳ ವೇತನ ನೀಡಿ ಉದ್ಯೋಗ ಭದ್ರತೆ ಘೋಷಿಸಬೇಕು. ಸೇವಾ ಭದ್ರತೆ ನೀಡುವವರೆಗೆ ಹೊಸ ಬೋಧಕರ ನೇಮಕಾತಿ ಮಾಡಬಾರದು. ಒಳ್ಳೆಯ ನೀತಿಗಳನ್ನು ರೂಪಿಸುವ ಮೂಲಕ ಅತಿಥಿ ಉಪನ್ಯಾಸಕರ ಹಿತ ಕಾಪಾಡಿ ಸರಣಿ ಸಾವುಗಳನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎಸ್.ನಾಗರಾಜು, ಮಂಡ್ಯ ಕುಮಾರ್, ವಿ.ಕೆ.ಅರವಿಂದ್, ಎನ್.ಜೆ. ಅನಿಲ್‍ಕುಮಾರ್, ಪುಟ್ಟರಾಮೇಗೌಡ, ಆರ್.ವಿನಯಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು