ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಹಲ್ಲೇಗೆರೆ ರಸ್ತೆ ಸಂಚಾರಕ್ಕೆ ಮುಕ್ತ

ಗ್ರಾಮದ ಮುಖಂಡರ ಮನವೊಲಿಸಿದ ಶಾಸಕ ಪಿ.ರವಿಕುಮಾರ್‌
Published 4 ಸೆಪ್ಟೆಂಬರ್ 2024, 4:50 IST
Last Updated 4 ಸೆಪ್ಟೆಂಬರ್ 2024, 4:50 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ಒಂದು ದಶಕದಿಂದ ನನೆಗುದಿಗೆ ಬಿದ್ದಿದ್ದ ಮಂಡ್ಯ- ಕೌಡ್ಲೆ ರಸ್ತೆ ವ್ಯಾಪ್ತಿಯಲ್ಲಿ ಬರುವ ಹಲ್ಲೇಗೆರೆ ಗ್ರಾಮ ವ್ಯಾಪ್ತಿಯ ರಾಜ್ಯ ಹೆದ್ದಾರಿ- 84ರ ಕಗ್ಗಂಟು ಬಗೆಹರಿಸಲು ಶಾಸಕ ಪಿ.ರವಿಕುಮಾರ್ ಆಸಕ್ತಿ ತೋರಿದ ಫಲವಾಗಿ ಮಂಗಳವಾರ ತಾತ್ಕಾಲಿಕ ಅಡೆ-ತಡೆ ನಿವಾರಣೆಯಾಯಿತು.

ಹಲ್ಲೇಗೆರೆ ಗ್ರಾಮದ ಕೆಲವು ಮುಖಂಡರ ಆಕ್ಷೇಪದಿಂದ ರಾಜ್ಯ ಹೆದ್ದಾರಿ ನಿರ್ಮಾಣ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡಿದ್ದ ಗ್ರಾಮಸ್ಥರ ಮನವೊಲಿಸಿ ತಾತ್ಕಾಲಿಕ ಸಂಚಾರಕ್ಕೆ ಮುಕ್ತಗೊಳಿಸಿ ಚರಂಡಿ ಮತ್ತು ಅಗತ್ಯ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಸುಮಾರು 700 ಮೀಟರ್ ರಸ್ತೆ ನಿರ್ಮಾಣ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವ ಕಾರಣದಿಂದ ಕೆ-ಶಿಪ್‌ ರಸ್ತೆ ನಿರ್ಮಾಣವಾಗದೇ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ಹತ್ತಾರು ವರ್ಷಗಳ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೆರೆದ ಕಾಳಜಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಭೂ ಮಾಲೀಕರನ್ನು ಮನವೊಲಿಸುವಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹಾಗೂ ಚಿಕ್ಕಬಳ್ಳಿ ಕೃಷ್ಣ ಶಾಸಕರಿಗೆ ಸಾಥ್ ನೀಡಿದರು. ವಿವಾದ ಬಗೆಹರಿಸಿ ರಸ್ತೆ ನಿರ್ಮಾಣ ಮಾಡಬೇಕೆಂಬ ಶಾಸಕರ ನಿರ್ಧಾರಕ್ಕೆ ಬೆಂಬಲವಾಗಿ ಡಿವೈಎಸ್ಪಿ ಎಲ್.ಕೆ.ರಮೇಶ್, ಸಿಪಿಐ ಮಹೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಹರ್ಷ, ಗುತ್ತಿಗೆದಾರ ರಾಘವೇಂದ್ರ ಹಾಗೂ ಸ್ಥಳೀಯ ಗ್ರಾ.ಪಂ. ಜನಪ್ರತಿನಿಧಿಗಳು ಉಪಸ್ಥಿತಿಯಿದ್ದು, ಬೆಂಬಲ ನೀಡಿದರು.

ರಸ್ತೆ ನಿರ್ಮಾಣದ ಭರವಸೆ:

ಮಂಡ್ಯ ಕೌಡ್ಲೆ ರಸ್ತೆಯಲ್ಲಿ ಹಲ್ಲೇಗೆರೆ ಗ್ರಾಮ ಪರಿಮಿತಿಯಲ್ಲಿ 13 ವರ್ಷಗಳಿಂದ ರಸ್ತೆ ನಿರ್ಮಾಣವಾಗಿಲ್ಲ. ಸದರಿ ಭೂ ವಿವಾದ ಆಲಿಸಿ ತಡೆಯಾಜ್ಞೆ ತೆರವುಗೊಳಿಸಿ ನೈಜ ಮಾಲೀಕರ ಭೂ ದಾಖಲೆ ಪರಿಶೀಲಿಸಿ ಪರಿಹಾರ ನೀಡಿ, ರಸ್ತೆ ನಿರ್ಮಿಸುವ ಭರವಸೆ ನೀಡಿ ಸಂಚಾರಕ್ಕೆ ಉಂಟಾಗಿದ್ದ ತೊಂದರೆ ನಿವಾರಿಸಲಾಗಿದೆ. ಮುಂದಿನ ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT