ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ ಕಾಂಗ್ರೆಸ್‌ ಪ್ರಾಯೋಜಿತ : ಎಚ್‌ಡಿಕೆ ಆರೋಪ

ಗೃಹ ಸಚಿವರ ಹೇಳಿಕೆಗೆ ಕಿಡಿ: ಪೊಲೀಸರಿಗೂ ಭದ್ರತೆ ನೀಡದ ದರಿದ್ರ ಸರ್ಕಾರ
Published : 13 ಸೆಪ್ಟೆಂಬರ್ 2024, 15:20 IST
Last Updated : 13 ಸೆಪ್ಟೆಂಬರ್ 2024, 15:20 IST
ಫಾಲೋ ಮಾಡಿ
Comments

ನಾಗಮಂಗಲ: ‘ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಪಟ್ಟಣದಲ್ಲಿ ನಡೆದ ಗಲಭೆ ಪೂರ್ವಯೋಜಿತ, ವ್ಯವಸ್ಥಿತ ಪಿತೂರಿ. ಅಷ್ಟೇ ಅಲ್ಲ; ಇದು ಕಾಂಗ್ರೆಸ್ ಪ್ರಾಯೋಜಿತ ಗಲಭೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ‌ಆರೋಪಿಸಿದರು.

ಗಲಭೆ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಅಂಗಡಿ, ಮಳಿಗೆಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ವ್ಯವಸ್ಥಿತವಾಗಿ ಗಲಭೆಗಳನ್ನು ಸೃಷ್ಟಿಸುವುದು ಕಾಂಗ್ರೆಸ್‌ಗೆ ಕರತಲಾಮಲಕ. 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರಾಮನಗರ, ಚನ್ನಪಟ್ಟಣದಲ್ಲಿ ಕೋಮುಗಲಭೆ ಸೃಷ್ಟಿಸಿ ಬೆಂಕಿ ಹಾಕಲಾಯಿತು. ಅವಳಿ ಪಟ್ಟಣಗಳು ಹೊತ್ತಿ ಉರಿದವು. ಅದೇ ಮಾದರಿಯಲ್ಲಿ ನಾಗಮಂಗಲದಲ್ಲಿ ಗಲಭೆ ಎಬ್ಬಿಸಲಾಗಿದೆ ಎಂದು ದೂರಿದರು.

‘ಡಿ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಸುಟ್ಟು ಹಾಕಲಾಯಿತು. ಅದಕ್ಕೂ ಕಾಂಗ್ರೆಸ್ ನಾಯಕರೇ ಕಾರಣ. ಆ ಪ್ರಕರಣದಲ್ಲಿ ಜೈಲಿಗೆ ಹೋದವರು ಏನಾಗಿದ್ದಾರೋ ಗೊತ್ತಿಲ್ಲ. ನಾಗಮಂಗಲದಲ್ಲಿ ಈಗ ಯಾವ ದುರುದ್ದೇಶದೊಂದಿಗೆ ಗಲಭೆ ಸೃಷ್ಟಿಸಲಾಗಿದೆಯೇ ಗೊತ್ತಿಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಈಗ ಚನ್ನಪಟ್ಟಣದಲ್ಲಿ ಉಪಚುನಾವಣೆ ಬರುತ್ತಿದೆ. ಬೇರೆ ಘಟನೆಗಳೂ ನಡೆಯುತ್ತಿವೆ. ಹೀಗಾಗಿ ಒಂದು ಸಮುದಾಯವನ್ನು ಓಲೈಸಲು ಸಂಚು ರೂಪಿಸಿರಬಹುದು. ಇಡೀ ಘಟನೆಯನ್ನು ನೋಡಿದರೆ ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್ ಇರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.

‘ಘಟನೆಗೆ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಹಾಗೂ ಸ್ಥಳೀಯ ಪೊಲೀಸರ ಕರ್ತವ್ಯ ಲೋಪವೂ ಕಾರಣ. ಪೊಲೀಸರು ನಿಜವಾದ ದುಷ್ಕರ್ಮಿಗಳನ್ನು ಬಂಧಿಸಿ, ಅವರಿಗೆ ಶಿಕ್ಷೆಯಾಗುವ ರೀತಿಯಲ್ಲಿ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

‘ಇಷ್ಟೊಂದು ದೊಡ್ಡ ಗಲಭೆಯಾಗಿದೆ. ಯೋಜಿತವಾಗಿ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೂ ಜಿ.ಪರಮೇಶ್ವರ್‌, ಇದೊಂದು ಸಣ್ಣ, ಆಕಸ್ಮಿಕ ಘಟನೆ ಎನ್ನುತ್ತಾರೆ, ಇವರನ್ನು ಗೃಹ ಸಚಿವರು ಎಂದು ಕರೆಯಬೇಕೆ? ಎಂದು ಕೇಳಿದರು.

ಪೊಲೀಸರಿಗೆ ಭದ್ರತೆ ನೀಡದ ದರಿದ್ರ ಸರ್ಕಾರ:

‘ಪ್ರತಿಯೊಂದರಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಅಮಾಯಕ‌ ಜನರ ಬದುಕು‌ ಬೀದಿಗೆ ಬಂದಿದೆ. ಗಲಭೆಯಲ್ಲಿ ಪೊಲೀಸರನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಬರೆದಿದ್ದಾರೆ. ಪೊಲೀಸರಿಗೆ ಭದ್ರತೆ ನೀಡದ ದರಿದ್ರ ಸರ್ಕಾರ ರಾಜ್ಯದಲ್ಲಿದೆ. ಆಗಿರುವ ಲೋಪ ಒಪ್ಪಿಕೊಳ್ಳುವುದನ್ನು ಬಿಟ್ಟು, ಸಮುದಾಯಗಳ ನಡುವೆ ಕಂದಕ ತೊಡುವುದು ಸರಿಯಲ್ಲ’ ಎಂದರು.

ಪಿಎಸ್‌ಐ ತ್ರಿಕಾಲ ಜ್ಞಾನಿಯೇ?

‘ದೂರು ನೀಡಿರುವ ಪಿಎಸ್‌ಐ ರವಿಗೆ, ರಾತ್ರಿ 1.30ರಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವವರ ಹೆಸರುಗಳು ಹೇಗೆ ಗೊತ್ತು? ಪೆಟ್ಟು ತಿಂದು ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಅಷ್ಟು ಜನರ ಹೆಸರುಗಳು ನೆನಪಾಗಿದ್ದು ಹೇಗೆ? ಆತನಿಗೆ ಎಷ್ಟು ನೆನಪಿನ ಶಕ್ತಿ ಇದೆ? ಆತನೇನು ತ್ರಿಕಾಲಜ್ಞಾನಿಯೇ‘ ಎಂದು ಕೇಳಿದರು.

ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಅವರೊಂದಿಗೆ ಇದ್ದರು.

ನಾಗಮಂಗಲದಲ್ಲಿ ನಡೆದ ಗಲಭೆಯಿಂದ ಹಾನಿಯಾಗಿರುವ ಅಂಗಡಿ ಮಳಿಗೆಗಳನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ವೀಕ್ಷಿಸಿದರು. ಜಿಲ್ಲಾಧಿಕಾರಿ ಕುಮಾರ ಮಾಜಿ ಶಾಸಕರಾದ ಸುರೇಶಗೌಡ ಅನ್ನದಾನಿ ಇದ್ದಾರೆ 
ನಾಗಮಂಗಲದಲ್ಲಿ ನಡೆದ ಗಲಭೆಯಿಂದ ಹಾನಿಯಾಗಿರುವ ಅಂಗಡಿ ಮಳಿಗೆಗಳನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ವೀಕ್ಷಿಸಿದರು. ಜಿಲ್ಲಾಧಿಕಾರಿ ಕುಮಾರ ಮಾಜಿ ಶಾಸಕರಾದ ಸುರೇಶಗೌಡ ಅನ್ನದಾನಿ ಇದ್ದಾರೆ 

ಬಿಜೆಪಿ ಸತ್ಯಶೋಧನಾ ತಂಡ ರಚನೆ

ನಾಗಮಂಗಲ ಪಟ್ಟಣದಲ್ಲಿ ನಡೆದ ಗಲಭೆಯ ಸತ್ಯಾಸತ್ಯತೆ ತಿಳಿಯಲು ಬಿಜೆಪಿಯು ಸತ್ಯಶೋಧನಾ ತಂಡವನ್ನು ರಚಿಸಿದೆ. ಮಾಜಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಮಾಜಿ ಸಚಿವರಾದ ಭೈರತಿ ಬಸವರಾಜ ಕೆ.ಸಿ. ನಾರಾಯಣಗೌಡ ರಾಜ್ಯ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ರಾವ್ ನೇತೃತ್ವದ ತಂಡ ರಚಿಸಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ವೈಯಕ್ತಿಕ ಪರಿಹಾರ ನೀಡಿದ ಎಚ್‌.ಡಿ.ಕೆ.

ಗಲಭೆಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವೈಯಕ್ತಿಕ ಪರಿಹಾರ ನೀಡಿದರು. ಸಂತ್ರಸ್ತರಿಗೆ ಶುಕ್ರವಾರ ಸಾಂತ್ವನ ಹೇಳಿದ ಅವರು ನಷ್ಟ ಆಧರಿಸಿ ಎರಡು ಸಮುದಾಯದವರಿಗೂ ಆರ್ಥಿಕ ನೆರವು ನೀಡಿದರು. ಮಾಜಿ ಶಾಸಕ ಸುರೇಶ್‌ಗೌಡ ಅವರ ನಿವಾಸಕ್ಕೆ ಸಂತ್ರಸ್ತರನ್ನು ಕರೆಸಿಕೊಂಡು ತಲಾ ₹25 ಸಾವಿರದಿಂದ ₹2 ಲಕ್ಷದವರೆಗೆ ಪರಿಹಾರ ವಿತರಿಸಿದರು.  ಗಲಭೆಯಿಂದ ₹1.5 ಕೋಟಿ ನಷ್ಟ ಅನುಭವಿಸಿರುವ ಟೆಕ್ಸ್‌ಟೈಲ್ಸ್ ಮಾಲೀಕ ಭೀಮ್‌ರಾಜ್ ಪರ ಹಿಂದೂ ಸಮುದಾಯದವರು ಸಾಮಾಜಿಕ ಜಾಲತಾಣದಲ್ಲಿ ಆರ್ಥಿಕ ನೆರವು ನೀಡುವಂತೆ ಅಭಿಯಾನ ನಡೆಸುತ್ತಿದ್ದಾರೆ.

ಗಣೇಶ ಮೂರ್ತಿ ಕೂರಿಸಿದವರು ಎ–1 ಆರೋಪಿ’

‘ಬದ್ರಿಕೊಪ್ಪಲಿನಲ್ಲಿ ಗಣೇಶ ಕೂರಿಸಿದವರನ್ನು ಎ–1 ಎ–2 ಆರೋಪಿಗಳನ್ನಾಗಿಸಲಾಗಿದೆ. ಹಿಂದೂ ಯುವಕರನ್ನೇ ಮೊದಲ 23 ಆರೋಪಿಗಳನ್ನಾಗಿ ಮಾಡಲಾಗಿದೆ. ಬೆಂಕಿ ಇಟ್ಟು ಗಲಭೆ ನಡೆಸಿದವರು ಕೊನೆಯಲ್ಲಿದ್ದಾರೆ. ಒಂದು ಕೋಮಿಗಾಗಿ ನಿಮ್ಮ ಸರ್ಕಾರವಿದೆಯಾ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.  ‘ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎಂದವರನ್ನ ಲೆಕ್ಕಕ್ಕೆ ಇಡಲಿಲ್ಲ. ಮತೀಯ ಶಕ್ತಿ ನಡೆಸುತ್ತಿರುವ ಸರ್ಕಾರ ಇದು. ಕಾಂಗ್ರೆಸ್ ಮುಖವಾಡ ಧರಿಸಿ ಮತೀಯ ಶಕ್ತಿ ತಲೆ ಎತ್ತಿದೆ. ಈ ಎಫ್‌.ಐ.ಆರ್‌. ಅನ್ನು ಕೂಡಲೇ ರದ್ದುಪಡಿಸಬೇಕು. ಯಾರು ಬೆಂಕಿ ಇಟ್ಟರೋ ಅವರು ಎ–1 ಆರೋಪಿ ಆಗಬೇಕು’ ಎಂದು ಆಗ್ರಹಿಸಿದರು.  ‘ಭ್ರಷ್ಟಾಚಾರದ ಸುಳಿಗೆ ಸಿಲುಕಿದ ಮೇಲೆ ಸಿದ್ದರಾಮಯ್ಯನವರಿಗೆ ಸರ್ಕಾರ ನಡೆಸಲು ಆಗ್ತಿಲ್ಲ. ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಸಣ್ಣ ಗಲಾಟೆ ಅಂತಾರೆ’ ಎಂದು ಟೀಕಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT