ಸೋಮವಾರ, ಸೆಪ್ಟೆಂಬರ್ 27, 2021
25 °C
ಸಂಸದೆ ಸುಮಲತಾ ಅಭಿಮತ; ₹3.5 ಕೋಟಿ ಮೌಲ್ಯದ ವೈದ್ಯಕೀಯ ಪರಿಕರ ಸ್ವೀಕಾರ, ಸೇವಾ ಕಾರ್ಯಕ್ಕೆ ಶ್ಲಾಘನೆ

ಸ್ಕೋಪ್‌ ಫೌಂಡೇಷನ್‌ನಿಂದ ಆರೋಗ್ಯ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಅಮೆರಿಕದ ಸ್ಕೋಪ್‌ (ಸೊಸೈಟಿ ಆಫ್‌ ಚಿಲ್ಡ್ರನ್‌ ಆಫ್‌ ಪ್ಲಾನೆಟ್‌ ಅರ್ಥ್‌) ಫೌಂಡೇಷನ್‌ ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡಿರುವ ₹3.5 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಸಂಸದೆ ಸುಮಲತಾ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.

ಅಮೆರಿಕದ ಸರ್ಜನ್‌ ಜನರಲ್‌ ಡಾ.ವಿವೇಕ್‌ ಮೂರ್ತಿ ಅವರ ತಂದೆ ಡಾ.ಎಚ್‌.ಎನ್‌. ಲಕ್ಷ್ಮಿನರಸಿಂಹ ಮೂರ್ತಿ ಸ್ಕೋಪ್‌ ಫೌಂಡೇಷನ್‌ ಸ್ಥಾಪಿಸಿದ್ದು, ಮೇ ತಿಂಗಳಲ್ಲಿ ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಿಗೆ ₹1.41 ಕೋಟಿ ಮೌಲ್ಯದ ಉಪಕರಣ ವಿತರಿಸಿದ್ದರು. ಈಗ ಮತ್ತೆ ₹3.5 ಕೋಟಿ ಮೊತ್ತದ 50 ಆಮ್ಲಜನಕ ಕಾನ್ಸಂಟ್ರೇಟರ್‌, 3 ಲಕ್ಷ ಎನ್‌–95 ಮಾಸ್ಕ್‌, 100 ಪಲ್ಸ್‌ ಆಕ್ಸಿಮೀಟರ್‌ ಇನ್ನಿತರ ವಸ್ತುಗಳನ್ನು ಕಳುಹಿಸಿದ್ದಾರೆ.

ಪರಿಕರ ಸ್ವೀಕರಿಸಿ ಮಾತನಾಡಿದ ಸಂಸದೆ ಸುಮಲತಾ, ‘ಡಾ.ಎಚ್‌.ಎನ್‌.ಲಕ್ಷ್ಮಿನರಸಿಂಹಮೂರ್ತಿ ಅವರ ವಿಶೇಷ ಕಾಳಜಿ, ಪ್ರೀತಿ, ಅಭಿಮಾನದಿಂದ ಕೋವಿಡ್ 3ನೇ ನಿಯಂತ್ರಣಕ್ಕೆ ₹ 3.5 ಕೋಟಿ ಮೊತ್ತದ ಸಲಕರಣೆ ಕಳುಹಿಸಿದ್ದಾರೆ. ಹಲ್ಲೇಗೆರೆ ಗ್ರಾಮದ ಅವರು 40 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರ ಪುತ್ರ ಡಾ.ವಿವೇಕ್ ಮೂರ್ತಿ ಅಮೆರಿಕದ ಸರ್ಜನ್‌ ಜನರಲ್‌ ಆಗಿ ಸಾಧನೆ ಮಾಡಿದ್ದಾರೆ. ಅವರ ಕುಟುಂಬ ಸದಸ್ಯರು ರಾಜ್ಯದ ಜನತೆಯ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವುದು ಸಂತಸದ ವಿಚಾರ’ ಎಂದರು.

‘ಕೋವಿಡ್ 3ನೇ ಅಲೆಯ ಬಗ್ಗೆ ನಮಗೆ ಭಯವಿದ್ದು, ಅದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾನು ಡಾ.ವಿವೇಕ್‌ ಮೂರ್ತಿ ಅವರಿಂದ ನಿರಂತರವಾಗಿ ಸಲಹೆ ಪಡೆಯುತ್ತಿದ್ದೇನೆ. ಮಂಡ್ಯದ ಮೇಲಿನ ಅವರ ಈ ಉದಾರ ಮನೋಭಾವ ನಿಜಕ್ಕೂ ಶ್ಲಾಘನೀಯ. ನಮ್ಮ ಜಿಲ್ಲೆಗೆ ಅವರು ತೋರಿಸಿರುವ ಪ್ರೀತಿಗೆ ನಾನು ಸದಾ ಚಿರಋಣಿ’ ಎಂದರು.

ವಿವೇಕ್‌ ಮೂರ್ತಿ ಕುಟುಂಬ ಸದಸ್ಯರಾದ ಎಚ್‌.ಕೆ.ವಸಂತಕುಮಾರ್‌ ಮಾತನಾಡಿ, ‘ಸ್ಕೋಪ್‌ ಫೌಂಡೇಷನ್‌ ನಿಂದ ರಾಜ್ಯದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ. ಗ್ರಾಮೀಣ ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡುವುದು ಸಂಸ್ಥೆಯ ಮುಂದಿನ ಗುರಿಯಾಗಿದೆ. ಜನರಿಗೆ ಉಚಿತ ಆರೋಗ್ಯ ಸೇವೆ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸೌರಶಕ್ತಿ ವಿದ್ಯುತ್‌ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಡಿಎಚ್‌ಒ ಡಾ.ಧನಂಜಯ ಇದ್ದರು.

ಚಿಕ್ಕಬಳ್ಳಾಪುರಕ್ಕೆ ₹1 ಕೋಟಿ ಮೌಲ್ಯದ ಪರಿಕರ

‘ಸದ್ಯ ವಿತರಣೆ ಮಾಡಿರುವ ₹3.5 ಕೋಟಿ ಮೌಲ್ಯದ ವೈದ್ಯಕೀಯ ಪರಿಕರಗಳಲ್ಲಿ ₹1 ಕೋಟಿ ಮೌಲ್ಯದ ಪರಿಕರಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಕಳುಹಿಸಲಾಗುವುದು. ಡಾ.ಲಕ್ಷ್ಮಿನರಸಿಂಹ ಮೂರ್ತಿ ಅವರ ಸಹಪಾಠಿ, ಸ್ನೇಹಿತ ಡಾ.ಶ್ರೀನಿವಾಸಮೂರ್ತಿ ಅವರು ಚಿಕ್ಕಬಳ್ಳಾಪುರದಿಂದ ಬಂದಿದ್ದು ₹1 ಕೋಟಿ ಮೌಲ್ಯದ ಪರಿಕರ ಸ್ವೀಕಾರ ಮಾಡಿದ್ದಾರೆ’ ಎಂದು ಎಚ್‌.ಕೆ.ವಸಂತಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.