ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಖಂಡಿಸಿ ರೈತರಿಂದ ಹೆದ್ದಾರಿ ತಡೆ

ಮೂರು ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯ: ಬಂಧಿತ ರೈತರ ಕೂಡಲೇ ಬಿಡುಗಡೆಗೆ ಒತ್ತಾಯ
Last Updated 1 ಡಿಸೆಂಬರ್ 2020, 4:08 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪಾದಯಾತ್ರೆಗೆ ದೆಹಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸದಿರುವುದನ್ನು ಖಂಡಿಸಿ ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಸೋಮವಾರ ಬೆಂಗಳೂರು– ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು ಅದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಸಾಕಷ್ಟು ಒತ್ತಾಯಗಳು ಕೇಳಿ ಬಂದರೂ ನಿರ್ಲಕ್ಷ ವಹಿಸಿದ ಕಾರಣ, ಪಂಜಾಬ್, ಹರಿಯಾಣ ರೈತರು ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲು ದೆಹಲಿಗೆ ತೆರಳುತ್ತಿದ್ದರು. ಇದನ್ನು ನಿರ್ಬಂಧಿಸಿ ಪ್ರವೇಶ ನಿರಾಕರಣೆ ಮಾಡಿರುವುದು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವಾಗಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕು. ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ದೆಹಲಿ ಪ್ರವೇಶ ತಪ್ಪಿಸುವ ಸಲುವಾಗಿ ಹೋರಾಟನಿರತ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ, ಜಲ ಫಿರಂಗಿ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದಾರೆ. ಆದರೆ ದೇಶಕ್ಕೆ ಬೆನ್ನೆಲುಬಾಗಿರುವ ರೈತರ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂ ಸೂಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನಾನಿರತ ರೈತರನ್ನು ಬಂಧಿಸಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಕೆ.ನಾಗಣ್ಣ, ಮುಖಂಡರಾದ ಸೋಮಶೇಖರ್, ಜವರೇಗೌಡ, ದೊರೆಸ್ವಾಮಿ, ಮರಿಚನ್ನಪ್ಪ, ಬಾಲಚಂದ್ರ, ಶ್ರೀಧರ್, ಹರೀಶ್ ಇದ್ದರು.

ರೈತರ ರ‍್ಯಾಲಿಗೆ ತಡೆ, ಹಲ್ಲೆಗೆ ಖಂಡನೆ

ಕೆ.ಆರ್.ಪೇಟೆ: ರೈತ ವಿರೋಧಿ ಶಾಸನ ರಚನೆ ವಿರೋಧಿಸಿ ನವದೆಹಲಿ ಚಲೋ ಹೊರಟ ರೈತರು ನವದೆಹಲಿಗೆ ಬಾರದಂತೆ ಕಿರುಕುಳ ನೀಡುತ್ತಿರುವ ಕೇಂದ್ರ ಮತ್ತು ಹರಿಯಾಣ ಸರ್ಕಾರದ ವಿರುದ್ಧ ಪಟ್ಟಣದಲ್ಲಿ ಸೋಮವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದ ಪ್ರತಿಭಟನಕಾರರು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರುವಿನಹಳ್ಳಿ ಶಂಕರ್, ರಾಜ್ಯ ಉಪಾಧ್ಯಕ್ಷ ಮಂದಗೆರೆ ಜಯರಾಮು, ಜಿಲ್ಲಾ ಮಾಜಿ ಅಧ್ಯಕ್ಷ ಮುದುಗೆರೆ ರಾಜೇಗೌಡ, ‘ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ರೈತ ವಿರೋಧಿ ಸರ್ಕಾರಗಳಾಗಿವೆ. ಮೋದಿಯವರಿಗೆ ಅನ್ನದಾತರ ಬಗ್ಗೆ ಕನಿಷ್ಠ ಕಾಳಜಿಯಿಲ್ಲ. ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕರೆದು ಮಾತನಾಡುವ ಸೌಜನ್ಯವಿಲ್ಲ. ಕೇಂದ್ರ ಸರ್ಕಾರವು ರೈತರ ಚಳವಳಿಯನ್ನೇ ಹತ್ತಿಕ್ಕಿ, ರೈತರ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆಸುತ್ತಿದೆ’ ಎಂದು ಆರೋಪಿಸಿದರು.

ಮುಖಂಡರಾದ ಜಗದೀಶ್, ನಾಗರಾಜು, ಕುಮಾರ್, ನಾರಾಯಣಸ್ವಾಮಿ, ತಮ್ಮಯ್ಯ, ಬಸವರಾಜು, ಪುಟ್ಟೇಗೌಡ, ಲತಾಕೇಶವ್, ಪಿಡಿಜಿ ಕೊಪ್ಪಲು ಮಹೇಶ್, ಹೆಗ್ಗಡಹಳ್ಳಿ ಚೇತನ್ ಸೇರಿದಂತೆ ಹಲವು ಮುಖಂಡರು ಇದ್ದರು.

ಹೋರಾಟಕ್ಕೆ ಬೆಂಬಲ

ಪಾಂಡವಪುರ: ನವದೆಹಲಿ ಬಳಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ, ರೈತರ ಹೋರಾಟವನ್ನು ಬೆಂಬಲಿಸಿ ಪಟ್ಟಣದಲ್ಲಿ ಸೋಮವಾರ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ಕೇಂದ್ರ ಸರ್ಕಾರ, ಪೊಲೀಸ್ ದೌರ್ಜನ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ, ಕಾರ್ಮಿಕ, ದಲಿತ ವಿರೋಧಿ ಕಾನೂನುಗಳನ್ನು ಕೈಬಿಡಿ ಎಂದು ಆಗ್ರಹಿಸಿದರು.

ಗಾಂಧಿವಾದಿ ಸಂತೋಷ್‌ ಕೌಲಗಿ ಮಾತನಾಡಿ, ‘ದೇಶದಲ್ಲಿನ ರೈತರು, ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲು ದೆಹಲಿಗೆ ತೆರಳುತ್ತಿದ್ದರೆ, ದೇಶವನ್ನು ಆಳುತ್ತಿರುವವರು ಇವರನ್ನು ನಿರ್ಬಂಧಿಸಿ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ. ಇದು ದೇಶದಲ್ಲಿಯೇ ಒಂದು ಚಾರಿತ್ರಿಕ ಹೋರಾಟವಾಗಿದೆ’ ಎಂದರು.

‘ದೇಶದ ಪ್ರಧಾನಿ ಅ‌ವರು ರೈತರ ಈ ಹೋರಾಟದ ಬಗ್ಗೆ ಚಕಾರವೆತ್ತದೆ ನಿರ್ಲಕ್ಷ್ಯಿಸುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನ, ಸೌಜನ್ಯ ಅವರಲ್ಲಿಲ್ಲ. ಇಷ್ಟೊಂದು ದೊಡ್ಡ ಮಟ್ಟದ ಚಳವಳಿ ನಡೆಯುತ್ತಿದ್ದರೂ ದೇಶದ ಗೃಹಸಚಿವ ಅಮಿತಾ ಶಾ ಕಂಡು ಕಾಣದಂತಿದ್ದಾರೆ’ ಎಂದು ಕಿಡಿಕಾರಿದರು.

ಭತ್ತ ಖರೀದಿ ನಡೆಯುತ್ತಿಲ್ಲ: ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ’ಅಧಿಕಾರಿಗಳು ಭತ್ತ ಖರೀದಿ ಕೇಂದ್ರ ಆರಂಭವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ರೈತರ ನೋಂದಣಿ ಮಾತ್ರ ನಡೆಯುತ್ತಿದ್ದು, ಭತ್ತ ಖರೀದಿ ನಡೆಯುತ್ತಿಲ್ಲ. ಭತ್ತ ಕಟಾವಿಗೆ ಯಂತ್ರದ ಬಾಡಿಗೆಯನ್ನು ಕೂಡಾ ನಿಗದಿ ಮಾಡಿಲ್ಲ’ ಎಂದು ಆರೋಪಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಾಡೆ ಹರೀಶ್, ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೆ.ಕೆ.ಗೌಡೇಗೌಡ, ರಾಜೇಂದ್ರ, ಡಾಮಡಹಳ್ಳಿ ಸ್ವಾಮಿಗೌಡ, ವೈ.ಎಚ್.ಮಂಜುನಾಥ್, ರಘು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಡಿ.ಕೆ.ಅಂಕಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT