ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ನಿಷೇಧ | ಸರ್ಕಾರದ ನಿರ್ಧಾರಕ್ಕೆ ಸ್ವಾಗತ; ಓದು ಮುಂದುವರಿಸುವೆ– ಮುಸ್ಕಾನ್‌

Published 23 ಡಿಸೆಂಬರ್ 2023, 10:52 IST
Last Updated 23 ಡಿಸೆಂಬರ್ 2023, 10:52 IST
ಅಕ್ಷರ ಗಾತ್ರ

ಮಂಡ್ಯ: ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಖಾನ್‌ ಸ್ವಾಗತಿಸಿದ್ದು, ಮತ್ತೆ ಓದು ಮುಂದುವರಿಸುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪೊಂದರ ‘ಜೈ ಶ್ರೀರಾಮ್’ ಘೋಷಣೆಗೆ ಪ್ರತಿಯಾಗಿ ‘ಅಲ್ಲಾಹು ಅಕ್ಬರ್‌’ ಘೋಷಣೆ ಕೂಗುವ ಮೂಲಕ ಮುಸ್ಕಾನ್ ಗಮನ ಸೆಳೆದಿದ್ದರು. ಹಿಂದಿನ ಬಿಜೆಪಿ ಸರ್ಕಾರ ಶಾಲೆ–ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದಕ್ಕೆ ನಿಷೇಧ ಹೇರಿದ್ದನ್ನು ಪ್ರತಿಭಟಿಸಿ ಕಾಲೇಜು ತೊರೆದಿದ್ದು, ಬಿ.ಕಾಂ. ಪರೀಕ್ಷೆಗೂ ಹಾಜರಾಗಿರಲಿಲ್ಲ.

‘ ಈ ಹಿಂದಿನ ಸರ್ಕಾರ ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದಕ್ಕೆ ನಿಷೇಧ ಹೇರಿದ್ದ ಕಾರಣ ನನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದೆ. ಒಂದು ವರ್ಷದಿಂದ ಬೇರೆ ಕೋರ್ಸ್ ಓದುತ್ತಿದ್ದೆ. ಈಗಿನ ಸರ್ಕಾರದ ನಿರ್ಧಾರದಿಂದ ಖುಷಿ ಆಗಿದೆ. ಈಗ ಮತ್ತೆ ಕಾಲೇಜಿಗೆ ತೆರಳುತ್ತೇನೆ‘ ಎಂದರು.

‘ ಹಿಜಾಬ್ ನಿಷೇಧದಿಂದಾಗಿ ನನ್ನಂತೆ ಅನೇಕ ವಿದ್ಯಾರ್ಥಿನಿಯರು ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಯಾರೆಲ್ಲ ಹೀಗೆ ವಿದ್ಯಾಭ್ಯಾಸವನ್ನು ಬಿಟ್ಟಿದ್ದರೋ ಅವರೆಲ್ಲ ಮತ್ತೆ ಕಾಲೇಜಿಗೆ ವಾಪಸ್ ಬನ್ನಿ’ ಎಂದು ಮನವಿ ಮಾಡಿದರು.

ಮುಸ್ಕಾನ್ ತಂದೆ ಮಹಮ್ಮದ್ ಉಸೇನ್ ಖಾನ್ ಪ್ರತಿಕ್ರಿಯಿಸಿ ‘ ಹಿಜಾಬ್‌ ವಿವಾದದ ಬಳಿಕ ಸುಮಾರು 85 ಸಾವಿರ ಮಕ್ಕಳು ಅರ್ಧಕ್ಕೆ ಶಿಕ್ಷಣ ತೊರೆದಿದ್ದಾರೆ ಎಂಬ ಮಾಹಿತಿ ಇದೆ. ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ. ಈ ಸಂಬಂಧ ನ್ಯಾಯಾಲಯದಲ್ಲಿಯೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.

‘ ನಾವು ಮಕ್ಕಳಿಗೆ ಚಿಕ್ಕಂದಿನಿಂದಲೂ ಹಿಜಾಬ್ ಧರಿಸುವುದನ್ನು ಅಭ್ಯಾಸ ಮಾಡಿಸಿರುತ್ತೇವೆ. ಅದಕ್ಕೆ ನಿಷೇಧ ಹೇರುವುದು ಸರಿಯಲ್ಲ. ಇನ್ನೊಂದು ಧರ್ಮದವರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋದರೆ ನಮ್ಮ ವಿರೋಧ ಇಲ್ಲ. ಅದು ಅವರ ಅಭ್ಯಾಸ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT