ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಒಕ್ಕಲಿಗರು ಹೊಟ್ಟೆಕಿಚ್ಚು ಬಿಡಲಿ: ನಾಗರಾಜು

ಜಾತಿ ಪ್ರಚೋದನೆಗೆ ಒಳಗಾಗದೇ ಸಮುದಾಯಕ್ಕೆ ದುಡಿಯಿರಿ: ಸಲಹೆ
Published 8 ಜೂನ್ 2024, 13:47 IST
Last Updated 8 ಜೂನ್ 2024, 13:47 IST
ಅಕ್ಷರ ಗಾತ್ರ

ಮಂಡ್ಯ: ‘ಒಕ್ಕಲಿಗರಲ್ಲಿ ಒಗ್ಗಟ್ಟಿಲ್ಲ, ಜಾತಿ ಪ್ರಚೋದನೆಗಳಿಗೆ ಒಳಗಾಗದೇ ಅಭಿಮಾನ ಇಟ್ಟುಕೊಂಡು ಸಮುದಾಯದ ಪರವಾಗಿ ದುಡಿಯಬೇಕು. ಆಗ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು ಅಭಿಪ್ರಾಯ ಪಟ್ಟರು.

ನಗರದ ಗಾಂಧಿ ಭವನದಲ್ಲಿ ಒಕ್ಕಲಿಗರ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ಸಂಸ್ಥಾಪಕ ಅಧ್ಯಕ್ಷ ನಾಗಣ್ಣ ಬಾಣಸವಾಡಿ ಮತ್ತು ಶಿವಣ್ಣ ಸ್ಮರಣಾರ್ಥ ಶನಿವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಹಣ್ಣಿನ ಮರಗಳು ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೆ ಯಾವುದೇ ಭೇದವಿಲ್ಲದೇ ಫಲ ನೀಡುವಂತೆ, ಒಕ್ಕಲಿಗರ ವಿದ್ಯಾರ್ಥಿಗಳು ಸಾಧನೆ ಮಾಡಿ ಸಮಾಜದ ಎಲ್ಲ ಸಮುದಾಯದ ಜನರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ನಿಮ್ಮ ಬಳಿ ಬರುವವರ ಜಾತಿ ಕೇಳದೆ ಅವರಿಗೆ ಸಹಾಯ ಮಾಡಿ, ಒಕ್ಕಲಿಗರಲ್ಲಿ ಒಗ್ಗಟ್ಟಿಲ್ಲ ಇದನ್ನೇ ಬಂಡವಾಳ ಮಾಡಿಕೊಂಡು ನಗುತ್ತಿದ್ದಾರೆ. ಇದನ್ನು ಬಿಟ್ಟು ಒಗ್ಗಟ್ಟಿನಿಂದ ಎಲ್ಲರೂ ಸಮುದಾಯದ ಅಭಿವೃದ್ಧಿಗೆ ದುಡಿಯಬೇಕು’ ಎಂದು ಹೇಳಿದರು.

‘ನಮ್ಮ ಜಿಲ್ಲೆಯ ಕೆಲವು ರೈತರು ಕಬ್ಬು, ಭತ್ತ ಮಾರಿ ಲಕ್ಷಾಂತರ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೇರೆ ಜಿಲ್ಲೆಯ ಕಾಲೇಜುಗಳಿಗೆ ಸುರಿಯುತ್ತಿದ್ದಾರೆ. ಒಕ್ಕಲಿಗರ ಸಂಘದವರು ಜಿಲ್ಲೆಯಲ್ಲಿ ಒಳ್ಳೆಯ ಕಾಲೇಜನ್ನು ನಿರ್ಮಿಸಿ ಹೆಣ್ಣು ಮಕ್ಕಳು ಸೇರಿದಂತೆ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ಸೌಲಭ್ಯ ಕಲ್ಪಿಸಿ ನೆರವಾಗಬೇಕು. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ತೆರೆದು ನೀಟ್‌ ತರಬೇತಿ ಕೊಡಿಸಬೇಕು’ ಎಂದು ಸಲಹೆ ನೀಡಿದರು.

‘ಕಾಲೇಜುಗಳನ್ನು ಹುಡುಕಿಕೊಂಡು ಉಡುಪಿ, ಮಂಗಳೂರು, ಕಾರ್ಕಳ, ಮೈಸೂರಿನ ಕಡೆ ಹೋಗುವುದು ಏಕೆ ಎನ್ನುವುದು ಅರ್ಥವಾಗುತ್ತಿಲ್ಲ. ನಮ್ಮ ಸಮುದಾಯದಲ್ಲಿ ಜ್ಞಾನಿಗಳು ಎಲ್ಲ ಕ್ಷೇತ್ರದಲ್ಲಿಯೂ ಸಾಧಿಸಿ ತೋರಿಸಿದ್ದಾರೆ. ಮಕ್ಕಳಲ್ಲಿ ಕೀಳರಿಮೆ ಋಣಾತ್ಮಕ ಮನೋಭಾವ ಬೆಳೆಸದೇ ಅವರ ಪ್ರತಿಭೆ ಬೆಳೆಸುವ ಕೆಲಸ ಮಾಡಬೇಕು. ಮಕ್ಕಳು ಯಾವಾಗಲೂ ಪೋಷಕರನ್ನೇ ಅವಲಂಬಿಸುವಂತಾಗಬಾರದು, ಬದಲಿಗೆ ಮಕ್ಕಳನ್ನು ಸ್ವತಂತ್ರವಾಗಿ ಬಿಡಬೇಕು’ ಎಂದರು.

ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ‘ಒಕ್ಕಲಿಗರ ಮಠಗಳು ಧರ್ಮ, ಜಾತಿ ನೋಡದೇ ಸಮಾನವಾಗಿ ಶಿಕ್ಷಣ ನೀಡುವ ಮೂಲಕ ದೇಶ ಮತ್ತು ವಿದೇಶಗಳಲ್ಲಿ ಹೆಸರು ಮಾಡಿದೆ, ಒಕ್ಕಲಿಗರ ಸಮುದಾಯಕ್ಕಷ್ಟೇ ಅಲ್ಲದೇ ರೈತರ ಮಕ್ಕಳಿಗೆ ವಿಶೇಷ ಆದ್ಯತೆ ನೀಡಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳಿಗೆ ಸಂಸ್ಕೃತಿ ಕಲಿಸುವುದು ಮುಖ್ಯವಾಗಬೇಕು. ತಾಯಿ, ತಂದೆಯರಿಗೆ ಮಕ್ಕಳು ವಿಧೇಯರಾಗಿರಬೇಕು. ಗುರುಗಳಿಗೆ ಗೌರವ ನೀಡುವ ಮೂಲಕ ಅವರ ಅಣತಿಯಂತೆ ಸಾಗಬೇಕು’ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆರ್‌ಎಪಿಸಿಎಂಎಸ್‌ ಅಧ್ಯಕ್ಷ ಯು.ಸಿ.ಶೇಖರ್, ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌.ಬಸವೇಗೌಡ, ಗೌರವಾಧ್ಯಕ್ಷ ಸಿ.ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಅನುಸೂಯ, ಉಪಾಧ್ಯಕ್ಷೆ ಸುಜಾತಾ ಕೃಷ್ಣ, ಟ್ರಸ್ಟಿಗಳಾದ ಬಿ.ಆರ್‌.ಕೃಷ್ಣೇಗೌಡ, ಎಲ್‌.ಕೃಷ್ಣ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಲಿಂಗೇಗೌಡ, ಕೆ.ಸಿ.ರವೀಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT