ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪಕ್ಕೆ ಕಾದಿರುವ ಹೊಸಪಟ್ಟಣ ದ್ವೀಪ

ಕೆ.ಆರ್‌.ಪೇಟೆ ತಾಲ್ಲೂಕಿನ ಹೇಮಗಿರಿ ಸಮೀಪದ ಹೇಮಾವತಿ ನದಿಯಿಂದ ಆವರಿಸಿರುವ ನಡುಗಡ್ಡೆ
Last Updated 11 ಜುಲೈ 2021, 4:12 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಕಣ್ಣು ಹಾಯಿಸಿದಷ್ಟೂ ಕಾಣುವ ಹಸಿರ ಸೊಬಗು, ಸನಿಹದಲ್ಲೇ ನಿನಾದದೊಂದಿಗೆ ಹರಿಯುವ ಹೇಮೆ. ನಡುಗಡ್ಡೆಯಲ್ಲಿ ಬಗೆ ಬಗೆ ಗಿಡ- ಮರಗಳು, ಔಷಧೀಯ ಸಸ್ಯಗಳು. ನವಿಲು, ಕೆಂಬೂತ, ನರಿ-ಚಿರತೆಯಂಥ ವನ್ಯಜೀವಿಗಳ ಗೂಡಾಗಿರುವ ಹೊಸಪಟ್ಟಣ ಎಂಬ ಮಿನಿ ದ್ವೀಪದ ಸೊಗಸಿದು.

ತಾಲ್ಲೂಕಿನ ಹೇಮಗಿರಿ ಸಮೀಪದ ಬಂಡಿಹೊಳೆಯ ಸನಿಹದಲ್ಲಿರುವ ಈ ತಾಣವನ್ನು ಹೇಮಾವತಿ ನದಿ ಸುತ್ತುವರಿದಿದೆ. ಶ್ರೀರಂಗಪಟ್ಟಣದ ಮಾದರಿಯಲ್ಲಿ ಪಟ್ಟಣವೊಂದನ್ನು ನಿರ್ಮಿಸಲು ಈ ಪ್ರದೇಶದ ಸುತ್ತ ಕೋಟೆ ನಿರ್ಮಾಣದ ಪ್ರಯತ್ನ ನಡೆದಿತ್ತು ಎಂಬು ದಕ್ಕೆ ಇಲ್ಲಿ ಕುರುಹುಗಳು ಸಿಗುತ್ತವೆ.

ಸುಮಾರು ಮನ್ನೂರು ಎಕರೆ ಭೂಪ್ರದೇಶದಲ್ಲಿರುವ ಹೊಸಪಟ್ಟಣ ದ್ವೀಪ ಆಕರ್ಷಕ ತಾಣವಾಗಿದ್ದರೂ ಪ್ರವಾಸೋದ್ಯಮ ಅಭಿವೃದ್ಧಿಗೊಂಡಿಲ್ಲ. ಅರಣ್ಯ ಇಲಾಖೆಯವರು ಬಿದಿರು ಸೇರಿದಂತೆ ವಿವಿಧ ಗಿಡಗಳನ್ನು ಬೆಳೆಸಿದ್ದಾರೆ. ಹೇಮಗಿರಿ- ಬೆಳ್ಳಿಬೆಟ್ಟದ ಸಾಲುಗಳ ನಡುವೆ ಇರುವ ಈ ದ್ವೀಪಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಅವಕಾಶಗಳು ಹೇರಳವಾಗಿವೆ.

ಕೆ.ಆರ್.ಪೇಟೆಯಿಂದ 10 ಕಿ.ಮೀ ದೂರದಲ್ಲಿ ಹೇಮಗಿರಿ ಕ್ಷೇತ್ರವಿದ್ದು, ಇದರ ಸಮೀಪ ಬಂಡಿಹೊಳೆ ಗ್ರಾಮವಿದೆ. ಬಂಡಿಹೊಳೆಗೆ ಕೂಗಳತೆಯಲ್ಲೇ ಈ ದ್ವೀಪವಿದೆ. ಗಂಗರಸರ ಕಾಲದಿಂದಲೂ ಈ ದ್ವೀಪವನ್ನು ಅಡಗುದಾಣವನ್ನಾಗಿಸಿಕೊಳ್ಳುವ ಪ್ರಯತ್ನ ನಡೆದಿತ್ತು. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲಿ ಶತ್ರುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಅಡಗುದಾಣಕ್ಕಾಗಿ ಈ ದ್ವೀಪವನ್ನು ಬಳಸಿಕೊಳ್ಳಲಾಗಿತ್ತು. ಹಾಗಾಗಿ ಶ್ರೀರಂಗಪಟ್ಟಣದ ಮಾದರಿಯಲ್ಲಿ ಇಲ್ಲಿ ಕೋಟೆ ನಿರ್ಮಿಸಿ ಉಪ ರಾಜಧಾನಿ ಮಾಡಲು ಅವರು ಪ್ರಯತ್ನಿಸಿದ್ದರು.

ಸುತ್ತಲೂ ಕೋಟೆ ಕಟ್ಟಿದ ನಂತರ ಹೆಬ್ಬಾಗಿಲ ಬಳಿ ನಿಂತು ವೀಕ್ಷಿಸಿದಾಗ ಎದುರಿಗೆ ಬೆಳ್ಳಿಬೆಟ್ಟ ಕಾಣಿಸಿತು. ರಾಜರು ಕೋಟೆಯ ಹೆಬ್ಬಾಗಿಲ ಬಳಿ ಕೊಳಿ ಹುಂಜವನ್ನು ಕಟ್ಟಿ ಬೆಳ್ಳಿ ಬೆಟ್ಟದ ಮೇಲಿನಿಂದ ತುಪಾಕಿ ಹಾರಿಸಲು ಸೂಚಿಸಿದರು. ತುಪಾಕಿಯ ಗುಂಡು ಹುಂಜದ ಮೇಲೆ ಬಿದ್ದಾಗ ಇದು ಅಡಗುದಾಣವಾಗಲು ಸುರಕ್ಷಿತವಲ್ಲ ಎಂದು ಆಲೋಚಿಸಿ ಕೋಟೆ ನಿರ್ಮಾಣದ ಯೋಜನೆ ಕೈಬಿಟ್ಟರು. ಈ ಬಗ್ಗೆ ಜಾನಪದಕ್ಷೇತ್ರದ ಆದ್ಯಪ್ರವರ್ತಕರಾದ ಅರ್ಚಕ ರಂಗಸ್ವಾಮಿಭಟ್ಟರು ಹುಟ್ಟಿದ ಹಳ್ಳಿಯಲ್ಲಿ ಉಲ್ಲೇಖಿಸಿದ್ದರು ಎಂದು ಗ್ರಾಮದ ಹಿರಿಯರಾದ ರಾಮೇಗೌಡ ಹೇಳುತ್ತಾರೆ.

ದ್ವೀಪದ ಸುತ್ತ ನದಿ ಅಂಚಿನಲ್ಲಿ ಪಯಣಿಸಿದರೆ ಕೋಟೆಯ ಕುರುಹುಗಳು, ಬಳಸಿದ ಕಲ್ಲುಗಳು ಇವರ. ಈ ದ್ವೀಪಕ್ಕೆ ಬೇಸಿಗೆಯಲ್ಲಿ ಗದ್ದೆಗಳ ನಡುವೆ ಕಾಲುದಾರಿಯಲ್ಲೇ ಹೋಗಬೇಕು. ನದಿ ತುಂಬಿದಾಗ ಹರಿಗೋಲು, ದೋಣಿಯಲ್ಲಿ ದ್ವೀಪ ತಲುಪಬಹುದು.

ಇಲ್ಲಿನ ಆಕರ್ಷಣೆಗಳನ್ನು ಬಳಸಿ ಕಿರು ಅರಣ್ಯ ನಿರ್ಮಾಣ ಮಾಡಿ ಪ್ರವಾಸಿಗರನ್ನು ಸೆಳೆಯಲು ಅವಕಾಶ ಇದೆ. ಹೊಸಪಟ್ಟಣದ ದ್ವೀಪದ ಭೂಪ್ರದೇಶದಲ್ಲಿ ಹೂವು, ಹಣ್ಣಿನ ವಿವಿಧ ಮರಗಳನ್ನು ಬೆಳೆಸಿ ಸುತ್ತ ರಸ್ತೆ ಮಾಡಿದರೆ ಪರಿಸರವನ್ನು ಆಸ್ವಾದಿಸಬಹುದು. ದ್ವೀಪಕ್ಕೆ ತೂಗು ಸೇತುವೆ ನಿರ್ಮಾಣ ಮಾಡಿದರೆ ಹೊಸಪಟ್ಟಣದ ಆಕರ್ಷಣೆ ಹೆಚ್ಚಾಗಲಿದೆ. ಇದರಿಂದ ಗ್ರಾಮ ಅಬಿವೃದ್ಧಿಯಾಗಲಿದ್ದು, ಹೇಮಗಿರಿಯೂ ಪ್ರಸಿದ್ಧ ತಾಣವಾಗುತ್ತದೆ. ಈ ಬಗ್ಗೆ ಕ್ಷೇತ್ರದ ಶಾಸಕರೂ ಆದ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡುತ್ತಾರೆ.

ಪ್ರವಾಸಿಗರು ಹೇಮಗಿರಿ ಬೆಟ್ಟದ ಕಲ್ಯಾಣ ವೆಂಕಟರಮಣಸ್ವಾಮಿ (ರಂಗನಾಥ) ದರ್ಶನ ಪಡೆಯಬಹುದು. ಮಹಾರಾಜರ ಕಾಲದಲ್ಲಿ ನಿರ್ಮಿತವಾದ ಇಲ್ಲಿನ ಅಣೆ (ಬ್ಲಫ್ )ಯಿಂದ ಧುಮುಕುವ ನದಿಯ ಸೊಬಗು ಕಣ್ತುಂಬಿಸಿಕೊಳ್ಳಬಹುದು. ಪ್ರತಿ ವರ್ಷ ದನಗಳ ಜಾತ್ರೆ ಸಂದರ್ಭ ಹೆಚ್ಚು ಭಕ್ತರು, ಪ್ರವಾಸಿಗರನ್ನೂ ಸೆಳೆಯಬಹುದು. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ತಾಣವನ್ನು ಪ್ರವಾಸಿ ತಾಣವನ್ನಾಗಿಸಲು ಅವಕಾಶ ಮಾಡಿದರೆ ಸರ್ಕಾರಕ್ಕೆ ಆದಾಯವೂ ಹೆಚ್ಚಲಿದೆ. ಈ ಬಗ್ಗೆ ಗಮನ ಹರಿಸದೆ ಇರುವುದು ಬೇಸರ ಮೂಡಿಸಿದೆ ಎಂದು ಅನುಗ್ರಹ ಫೌಂಡೇಷನ್‌ ಸಂಚಾಲಕ ಪ್ರವೀಣ್ ಚಕ್ರವರ್ತಿ ತಿಳಿಸಿದರು.

ಪ್ರಾಚೀನ ಕೋಟೆ, ಕೊತ್ತಲಗಳ ಸಂರಕ್ಷಣೆಗೆ ಕ್ರಮ ವಹಿಸಿ ಈ ತಾಣದ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸ ಲಾಗುವುದು ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT