ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚಿದ ಬರ; ಭತ್ತದ ಒಣ ಹುಲ್ಲಿನ ಬೇಡಿಕೆ

ತಿ.ನರಸೀಪುರದಿಂದ ಕೇರಳ, ತಮಿಳುನಾಡಿನ ವ್ಯಾಪಾರಿಗಳಿಂದ ಖರೀದಿ
Published 6 ಜನವರಿ 2024, 15:58 IST
Last Updated 6 ಜನವರಿ 2024, 15:58 IST
ಅಕ್ಷರ ಗಾತ್ರ

ಮಳವಳ್ಳಿ: ಬರದ  ಬೆನ್ನಲೇ ಭತ್ತದ ಒಣ ಹುಲ್ಲಿಗೆ ಬೇಡಿಕೆ ಹೆಚ್ಚುತ್ತಿದ್ದು, ಖರೀದಿದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ನೀರಿನ ಅಭಾವದ ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗುವ ಸಾಧ್ಯತೆಗಳು ಹೆಚ್ಚಿದೆ.  ಬೇಸಿಗೆಯ ಮುಂದಿನ ನಾಲ್ಕೈದು ತಿಂಗಳಿಗೆ ಜಾನುವಾರುಗಳಿಗೆ ಮೇವು ಸಂಗ್ರಹಣೆ ರೈತರು ಮುಂದಾಗಿದ್ದು, ಬೆಲೆಯೂ ಗಗನಕ್ಕೇರಿದೆ. ಬೇಡಿಕೆ ಹೆಚ್ಚುತ್ತಿರುವುದನ್ನು ಕಂಡು, ಮೈಸೂರಿನ ತಿ.ನರಸೀಪುರದ ಹುಲ್ಲು ಮಾರಾಟಗಾರರು ಟ್ರ್ಯಾಕ್ಟರ್‌ನಲ್ಲಿ ಹುಲ್ಲು ತುಂಬಿಕೊಂಡು ಮಳವಳಿಯತ್ತ ಧಾವಿಸುತ್ತಿದ್ದಾರೆ.

ಪಟ್ಟಣದ ಲೋಕೋಪಯೋಗಿ ಕಚೇರಿ ಮುಂದೆ ಸಾಲುಗಟ್ಟಿ ಟ್ರ್ಯಾಕ್ಟರ್‌ ನಿಲ್ಲಿಸಿದ್ದು, ರೈತರು ದುಬಾರಿ ಬೆಲೆ ನೀಡಿ ಹುಲ್ಲು ಖರೀದಿಸುತ್ತಿದ್ದಾರೆ. ಪಟ್ಟಣದಿಂದ ಐದಾರು ಕಿ.ಮೀ. ಅಂತರಕ್ಕೆ ಒಂದೇ ಬೆಲೆ ನಿಗದಿಪಡಿಸಲಾಗಿದೆ. ನಂತರ ಕ್ರಮಿಸಿದ ದೂರಕ್ಕೆ ಅನುಗುಣವಾಗಿ ಹಣ ಪಾವತಿಸಬೇಕು.

ಹೆಚ್ಚಿದ ಹಾವಳಿ: ಕೇರಳ ಮತ್ತು ತಮಿಳುನಾಡಿನಲ್ಲಿ ಭತ್ತದ ಒಣ ಹುಲ್ಲಿಗೆ ಬೇಡಿಕೆ ಕುದುರಿದ್ದು, ಅಲ್ಲಿನ ಮಧ್ಯವರ್ತಿಗಳು ತಿ. ನರಸೀಪುರಕ್ಕೆ ತೆರಳಿ ದುಬಾರಿ ಬೆಲೆ ನೀಡಿ ಹುಲ್ಲು ಖರೀದಿಗೆ ಮುಂದಾಗಿದ್ದಾರೆ. ಇದರಿಂದ, ಸಹಜವಾಗಿ ಪ್ರತಿವರ್ಷ ಮಳವಳ್ಳಿಗೆ ಬರುತ್ತಿದ್ದ ಹುಲ್ಲಿನ ಪ್ರಮಾಣ ಕುಸಿತ ಕಂಡಿದೆ. ಕಳೆದ ಬಾರಿಗೆ ಹೋಲಿಸಿದರೆ,‌ ಬಾರಿ ಹುಲ್ಲಿನ ಬೆಲೆ ದುಪ್ಪಟ್ಟು ಆಗಿದೆ.

ಟ್ರಾಕ್ಟರ್‌ಗೆ ₹12 ಸಾವಿರ: ಕಳೆದ ವರ್ಷ ತಿ.ನರಸೀಪುರದಲ್ಲಿ ₹100ಕ್ಕೆ ಒಂದು ಕಟ್ಟಿನಂತೆ ಮಾರಾಟವಾಗಿದ್ದ ಹುಲ್ಲಿಗೆ ಈ ಬಾರಿ ₹200ರಿಂದ ₹250ಕ್ಕೆ ಹೆಚ್ಚಿದೆ. ಕೇರಳ ಮತ್ತು ತಮಿಳುನಾಡಿನವರು ಖರೀದಿಗೆ ಮುಂದಾಗಿರುವುದೇ ದರ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ವರ್ಷ ಟ್ರಾಕ್ಟರ್‌ಗೆ ₹6ರಿಂದ ₹7 ಸಾವಿರವಿತ್ತು. ಈ ಬಾರಿ ₹12 ರಿಂದ ₹13 ಸಾವಿರವಾಗಿದೆ ಎಂದು ರೈತ ಮಹೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT