ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಕಿಲ್ಲ; ಪರದಾಟ

ಕ್ರೀಡಾಪಟುಗಳಿಗೆ ಸೌಲಭ್ಯಗಳಿಲ್ಲ, ಕುಡಿಯವ ನೀರಿಲ್ಲ, ಕೆ.ಸಿ.ನಾರಾಯಣಗೌಡರೇ ಈ ಕಡೆ ನೋಡಿ
Last Updated 15 ಜೂನ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಕ್ರೀಡಾಪಟುಗಳಿಗೆ ಸಕಲ ಸೌಲಭ್ಯ ಒದಗಿಸಬೇಕು ಎಂಬ ಮುನ್ನೋಟದೊಂದಿಗೆ ನಿರ್ಮಾಣಗೊಂಡಿದ್ದ ಒಳಾಂಗಣ ಕ್ರೀಡಾಂಗಣ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಒಳಾಂಗಣದಲ್ಲಿ ಕನಿಷ್ಠ ಬೆಳಕಿನ ವ್ಯವಸ್ಥೆಯನ್ನೂ ಮಾಡದಿರುವುದು ಕ್ರೀಡಾಪಟುಗಳನ್ನು ಕಂಗೆಡಿಸಿದೆ.

₹ 4 ಕೋಟಿ ವೆಚ್ಚದಲ್ಲಿ 2018ರಲ್ಲಿ ನಿರ್ಮಾಣಗೊಂಡ ಒಳಾಂಗಣ ಕ್ರೀಡಾಂಗಣ ಅಂದಿನಿಂದ ಇಂದಿನವರೆಗೂ ಸಮಸ್ಯೆಗಳ ಸುಳಿಯಲ್ಲೇ ಸಿಲುಕಿದೆ. ಜಿಲ್ಲೆಯ ನೂರಾರು ಯುವ ಕ್ರೀಡಾಪಟುಗಳು ಅಲ್ಲಿ ಅಭ್ಯಾಸ ಮಾಡುತ್ತಾರೆ. ನಿಗದಿತ ಶುಲ್ಕ ಪಾವತಿಸಿ ವಾಯುವಿಹಾರಿಗಳು, ಕ್ರೀಡಾಸಕ್ತರು ಕೂಡ ಅಲ್ಲಿ ಕ್ರೀಡಾಭ್ಯಾಸ ಮಾಡುತ್ತಾರೆ.

ಮುಖ್ಯವಾಗಿ ಶಟಲ್‌ ಕಾಕ್‌ ಅಭ್ಯಾಸ ನಡೆಯುತ್ತವೆ. ಅದೇ ಅಂಕಣವನ್ನು ಬ್ಯಾಸ್ಕೆಟ್‌ ಬಾಲ್‌, ಟೇಬಲ್‌ ಟೆನಿಸ್‌, ಟೆನಿಸ್‌ ಬ್ಯಾಡ್ಮಿಂಟನ್‌ ಅಂಕಣವಾಗಿಯೂ ಬದಲಾಯಿಸಿಕೊಳ್ಳುವಂತೆ ನಿರ್ಮಾಣ ಮಾಡಲಾಗಿದೆ.

ವಿಶಾಲವಾಗಿರುವ ಒಳಾಂಗಣದಲ್ಲಿ ಐದಾರು ಶೆಟಲ್‌ ಕಾಕ್‌ ಅಂಕಣಗಳಿವೆ. ಉತ್ತಮ ಗುಣಮಟ್ಟದ ದೀಪ ಅಳವಡಿಸಿದರೆ ಮಾತ್ರ ಆಟವಾಡಲು ಸಾಧ್ಯ. ಭವನ ನಿರ್ಮಾಣ ಹಂತದಲ್ಲೇ ಕಳಪೆ ದೀಪ ಹಾಕಿರುವ ಕಾರಣ ಬಹುತೇಕ ಎಲ್ಲಾ ದೀಪಗಳು ಹಾಳಾಗಿವೆ. ಶುಲ್ಕ ಪಾವತಿಸಿ ಆಟಕ್ಕೆ ಬರುವ ಕ್ರೀಡಾಪಟುಗಳು, ವಿಹಾರಿಗಳು ಹೊಸ ದೀಪ ಅಳವಡಿಸುವಂತೆ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಹಲವು ತಿಂಗಳುಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಹೊಸ ದೀಪಗಳನ್ನು ಇಲ್ಲಿವರೆಗೂ ಅಳವಡಿಸಿಲ್ಲ.

ದೀಪವಿಲ್ಲ ಎಂಬ ಕಾರಣಕ್ಕೆ ಆಟ ನಿಲ್ಲಿಸಲು ಮನಸ್ಸಾಗದ ಕ್ರೀಡಾಪಟುಗಳು ತಾವೇ ಹಣ ಹಾಕಿ ಏಳೆಂಟು ಫೋಕಸ್‌ ದೀಪ ತಂದು ಎರಡೂ ಕಡೆ ಅಳವಡಿಸಿದ್ದಾರೆ. ಆದರೆ ಅವು ಶಾಮಿಯಾನದವರು ಕಾರ್ಯಕ್ರಮಗಳಲ್ಲಿ ಹಾಕುವಂತಹ ದೀಪಗಳಾಗಿದ್ದು ಪೂರ್ತಿ ಕ್ರೀಡಾಂಗಣಕ್ಕೆ ಬೆಳಕು ಒದಗಿಸುತ್ತಿಲ್ಲ. ಮಂದ ಬೆಳಕಿನಲ್ಲಿ ಕಾಕ್‌ ಕಾಣದಾಗಿದ್ದು ಕ್ರೀಡಾಪಟುಗಳು ಪರದಾಡುವಂತಾಗಿದೆ.

‘ಕಡಿಮೆ ಬೆಳಕಿನಲ್ಲಿ ಆಟವಾಡಿ ಕಣ್ಣುಗಳಿಗೆ ತೊಂದರೆಯಾಗುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಿಸುವ ಯೋಗ್ಯತೆ ಇಲ್ಲವೇ? ಮಂಡ್ಯ ಜಿಲ್ಲೆಯವರಾದ ಕೆ.ಸಿ.ನಾಯಾರಣಗೌಡರೇ ಕ್ರೀಡಾ ಇಲಾಖೆ ಸಚಿವರಾಗಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಯುವ ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸಿದರು.

ಆಟಕ್ಕೆ ಬರುವ ಕ್ರೀಡಾಪಟುಗಳು ಜೊತೆಯಲ್ಲಿ ನೀರು ತರಲೇಬೇಕು. ಕ್ರೀಡಾಂಗಣದಲ್ಲಿ ನೀರು ದೊರೆಯುತ್ತದೆ ಎಂದು ಬಂದರೆ ಅವರು ಬಾಯಾರಿ ಬಸವಳಿಯಬೇಕು. ಒಳಾಂಗಣ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲೇ ಕುಡಿಯವ ನೀರಿನ ಆರ್‌ಒ ಪ್ಲಾಂಟ್‌ ಇದೆ, ಆದರೆ ಅದು ಹಾಳಾಗಿದ್ದು ನೀರು ಬರುವುದಿಲ್ಲ.

‘ಶಾರ್ಟ್‌ ಸರ್ಕಿಟ್‌ ಆಗಿ ವೈರ್‌ ಸುಟ್ಟು ಹೋಗಿವೆ. ಈ ಕುರಿತು ಸ್ಟೇಡಿಯಂ ಕಮಿಟಿಗೆ ವರದಿ ನೀಡಲಾಗಿದೆ. ಕೆಆರ್‌ಐಡಿಎಲ್‌ನವರು ಈ ಕುರಿತು ಅಂದಾಜು ವೆಚ್ಚ ನೀಡಿದ್ದಾರೆ. ಟೆಂಡರ್‌ ಆಹ್ವಾನಿಸಿ ಒಳಾಂಗಣ ಕ್ರೀಡಾಂಗಣಕ್ಕೆ ದೀಪದ ವ್ಯವಸ್ಥೆ ಮಾಡಿಸಲಾಗುವುದು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್‌ ತಿಳಿಸಿದರು.

ಬಳಕೆಯಾಗದ ಜಿಮ್‌ ಉಪಕರಣ

ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಜಿಮ್‌ ಸೌಲಭ್ಯ ಒದಗಿಸುವ ಉದ್ದೇಶ ಮೊದಲಿನಿಂದಲೂ ಇತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಟ್ರೆಡ್‌ಮಿಲ್‌ ಸೇರಿದಂತೆ ಜಿಮ್‌ ಉಪಕರಣಗಳು ಬಂದಿವೆ, ಆದರೆ ಅವು ಕೊಠಡಿಗಳಲ್ಲಿ ತುಕ್ಕು ಹಿಡಿಯುತ್ತಿದ್ದು ಬಳಕೆಯಾಗುತ್ತಿಲ್ಲ.

ಜಿಮ್‌ ಉಪಕರಣ ಮಾತ್ರವಲ್ಲದೇ ಟೇಬಲ್‌ ಟೆನಿಸ್‌, ವಾಲಿಬಾಲ್‌, ಬ್ಯಾಡ್ಮಿಂಟನ್‌ ಉಪಕರಣಗಳನ್ನೂ ಕೊಠಡಿಯಲ್ಲಿ ತುಂಬಿ ಇಡಲಾಗಿದೆ.

ನಾಯಿಗಳ ವಾಸಸ್ಥಳ

ಒಳಾಂಗಣ ಕ್ರೀಡಾಂಗಣ ಕಟ್ಟಡದ ಆವರಣ ಅವ್ಯವಸ್ಥೆಯ ಆಗರವಾಗಿದ್ದು ಬೀದಿನಾಯಿಗಳ ವಾಸಸ್ಥಳವೂ ಆಗಿದೆ. ಭವನದ ಮೆಟ್ಟಿಲುಗಳ ಮೇಲೆಯೇ ಹತ್ತಾರು ನಾಯಿಗಳು ಮಲಗಿರುತ್ತವೆ. ಅಲ್ಲಿಗೆ ಬರುವವರಿಗೆ ಬೊಗಳಿ ಬೆದರಿಸುತ್ತವೆ. ಕ್ರೀಡಾಂಗಣಕ್ಕೆ ರಕ್ಷಣೆಯೂ ಇಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸಲು ಭಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT