ಶನಿವಾರ, ಮಾರ್ಚ್ 6, 2021
31 °C
ಬೂಕನಕೆರೆ ಹೋಬಳಿಗೆ ನೀರು ಪೂರೈಸುವ ಹೊಸಹೊಳಲು ಮೇಲ್ಗಾಲುವೆ ಯೋಜನೆ

ಎರಡು ದಶಕಗಳಿಂದ ಕುಂಟುತ್ತಾ ಸಾಗಿದ ಕಾಮಗಾರಿ

ಬಲ್ಲೇನಹಳ್ಳಿ ಮಂಜುನಾಥ್ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್‌.ಪೇಟೆ: ತಾಲ್ಲೂಕಿನ ಹೊಸಹೊಳಲು ಕೆರೆಯ ನೀರನ್ನು ಮೇಲ್ಗಾಲುವೆ ಮೂಲಕ ಬೂಕನಕೆರೆ ಹೋಬಳಿಯ ಹಳ್ಳಿಗಳ ಹೊಲಗಳಿಗೆ ಹಾಯಿಸಿ ಅರೆ ನೀರಾವರಿ ಕಲ್ಪಿಸುವ ಹೊಸಹೊಳಲು ದೊಡ್ಡಕೆರೆ ಮೇಲ್ಗಾಲುವೆ ನೀರಾವರಿ ಯೋಜನೆ ಆರಂಭವಾಗಿ ಎರಡು ದಶಕ ಉರುಳಿದರೂ ಪೂರ್ಣಗೊಂಡಿಲ್ಲ.

ಹೊಸಹೊಳಲು ಕೆರೆಯ ಕೋಡಿಯಿಂದ ಹರಿದು ದೊದ್ದನ ಕಟ್ಟೆ ಹಳ್ಳದ ಮೂಲಕ ಕೂಡಲಕುಪ್ಪೆಯಲ್ಲಿ ಹೇಮಾವತಿ ನದಿ ಸೇರುತ್ತಿದ್ದ ಸುಮಾರು 150 ಕ್ಯೂಸೆಕ್‌ ನೀರನ್ನು ರೈತರ ಜಮೀನಿಗೆ ಹರಿಸಲು ಯೋಜನೆ ರೂಪಿಸಲಾಗಿತ್ತು. ಇದು ಜೆ.ಎಚ್.ಪಟೇಲ್ ಅವರು ಮುಖ್ಯ ಮಂತ್ರಿಯಾಗಿದ್ದಾಗ ಶಾಸಕರಾಗಿದ್ದ ಬಿ.ಪ್ರಕಾಶ್ ಅವಧಿಯಲ್ಲಿ ಸುಮಾರು ₹ 6 ಕೋಟಿ ವೆಚ್ಚದಲ್ಲಿ 1998ರಲ್ಲಿ ಆರಂಭವಾಯಿತು.

ಹತ್ತಾರು ಕೋಟಿ ರೂಪಾಯಿ ವೆಚ್ಚವಾದರೂ ಇನ್ನೂ ಯೋಜನೆ ಪೂರ್ಣಗೊಳ್ಳದೆ ಇರುವುದು ಇಲ್ಲಿನ ರೈತರಲ್ಲಿ ನಿರಾಸೆ ಮೂಡಿಸಿದೆ. ಇದು ಪೂರ್ಣಗೊಂಡರೆ ಬೂಕನಕೆರೆ ಹೋಬಳಿಯ ಬಳ್ಳೇಕೆರೆ, ನಾಟನಹಳ್ಳಿ, ಹೆಮ್ಮಡಹಳ್ಳಿ, ಬಿ.ಬಾಚಹಳ್ಳಿ, ಬೂಕನಕೆರೆ, ಕೀಳನಕೊಪ್ಪಲು ಮತ್ತೀಕೆರೆ, ಕುರುಬಹಳ್ಳಿ, ಮುದುಗೆರೆ, ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಎಕರೆಗೆ ನೀರು ಹರಿಯಲಿದೆ. ಬೂಕನಕೆರೆ ಹೋಬಳಿಯಲ್ಲಿ ಇರುವ 64ನೇ ವಿತರಣಾ ನಾಲೆಯಿಂದ ನೀರನ್ನು ಒದಗಿಸಲು ಆಗದ ಕೊನೆ ಭಾಗದ ಗ್ರಾಮಗಳು ಮತ್ತು ಕೆರೆಗಳಿಗೂ ಈ ಯೋಜನೆಯಿಂದ ನೀರು ಹರಿಸಬಹುದಾಗಿದೆ.

ಆಗಿರುವುದೇನು?: ಹೊಸ ಹೊಳಲು ಕೆರೆಯಿಂದ ಮುದುಗೆರೆಯ ಕೆರೆವರೆಗೆ 16 ಕಿ.ಮೀ ಕಾಲುವೆ ನಿರ್ಮಾ ಣವಾಗಬೇಕಿದೆ. ಸದ್ಯ 11 ಕಿ.ಮೀ. ನಾಲೆ ತೋಡುವ ಕಾರ್ಯ ಮಗಿದಿದ್ದು, ಲೈನೇಜ್ ಮಾಡಲಾಗಿದೆ. 11ನೇ ಕಿ.ಮೀ. ಇರುವ ಬೂಕನಕೆರೆ ಸಮೀಪದ ಕೀಳನಕೊಪ್ಪಲು ಬಳಿ ಸುಮಾರು 600 ಮೀಟರ್ ಉದ್ದದ ಅಕ್ವಡಕ್ಟ್‌ (ಎತ್ತರದ ಮೇಲ್ಗಾಲುವೆ) ನಿರ್ಮಾಣವಾಗಬೇಕಿದೆ. ಅಲ್ಲಿಂದ ಮುದುಗೆರೆ ಕರೆಗೆವರೆಗೆ 6 ಕಿ.ಮೀ. ಕಾಲುವೆ ತೋಡುವ ಕಾಮಗಾರಿ ನಡೆಯಬೇಕಿದೆ. ‌

ಅನುದಾನವಿಲ್ಲದೆ ಕಾಮಗಾರಿ ನಿಂತಿದೆ. 1998ರಲ್ಲಿ ಕಾಮಗಾರಿಗೆ ಹಸಿರು ನಿಶಾನೆ ದೊರೆತರೂ ಕ್ರಮ ಬದ್ಧವಾಗಿ ಕಾಮಗಾರಿ ಆಗದೆ ಇದ್ದುದ ರಿಂದ ಮತ್ತೆ ಹೊಸದಾಗಿ ₹ 4.90 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆದು 11ನೇ ಕಿ.ಮೀ ವರೆಗೆ ಕಾಮಗಾರಿ ನಡೆಸಲಾಗಿದೆ. ಉಳಿದ ಕಾಮಗಾರಿ ಮುಗಿಸಲು ₹ 10 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕರೆ 2022ರ ಕಾಮಗಾರಿ ಮುಕ್ತಾಯವಾಗಲಿದೆ ಎನ್ನುತ್ತಾರೆ ಬೂಕನಕೆರೆ ವೃತ್ತದ ಹೇಮಾವತಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೇವೇಗೌಡ.

ಗಮನಹರಿಸಲಿ: ಯೋಜನೆ ಕಾಮಗಾರಿ ಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗಮನಹರಿಸಬೇಕು. ಇಲ್ಲಿನ ರೈತರ ಸಂಕಷ್ಟ ಅವರಿಗೆ ತಿಳಿದಿದೆ. ಕಾಮಗಾರಿಗೆ ಹಣ ಬಿಡುಗಡೆ ಮಾಡುವದರೊಂದಿಗೆ, 64ನೇ ವಿತರಣಾ ನಾಲೆ ಆಧುನೀಕರಿ ಸಬೇಕು ಎಂದು ರೈತಸಂಘ ಮುಖಂಡ ಮದುಗೆರೆ ರಾಜೇಗೌಡ ಆಗ್ರಹಿಸಿದರು.

‘ಹಲವು ಕಾರಣಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ನಾನು ಶಾಸಕನಾದ ನಂತರ ಅನುದಾನ ತಂದು 11 ಕಿ.ಮೀ. ವರೆಗೆ ಕಾಮಗಾರಿ ಪೂರ್ಣಗೊಳ್ಳುವಂತೆ ಮಾಡಿದ್ದೇನೆ. ಉಳಿದ ಕಾಮಗಾರಿ ಪೂರ್ಣಗೊಳಿಸಲು ಮುಖ್ಯಮಂತ್ರಿಯವರಿಂದ ವಿಶೇಷ ಅನುದಾನ ತರಲಾಗುವುದು’ ಎಂದು ಈ ಬಗ್ಗೆ ಕ್ಷೇತ್ರದ ಶಾಸಕ, ಪೌರಾಡಳಿತ ಸಚಿವ ನಾರಾಯಣಗೌಡ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು