ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏತ ನೀರಾವರಿ ಯೋಜನೆ ಸಮರ್ಪಕವಾಗಿರಲಿ: ಸಚಿವ ಎನ್‌.ಎಸ್‌.ಬೋಸರಾಜು

Published : 6 ಆಗಸ್ಟ್ 2024, 13:38 IST
Last Updated : 6 ಆಗಸ್ಟ್ 2024, 13:38 IST
ಫಾಲೋ ಮಾಡಿ
Comments

ಮಂಡ್ಯ: ಜಿಲ್ಲೆಯಲ್ಲಿ ನಿಷ್ಕ್ರೀಯವಾಗಿರುವ ಏತ ನೀರಾವರಿ ಯೋಜನೆ ಸರಿಪಡಿಸಿಕೊಂಡು, ನೀರು ಮಿತವ್ಯಯದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಣ್ಣ ನೀರಾವರಿ ಇಲಾಖೆಯಡಿ ಬರುವ ಕೆರೆಗಳ ಸುತ್ತ ಒತ್ತುವರಿ ತೆರವುಗೊಳಿಸುವುದು ಸೇರಿದಂತೆ ಅವುಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಅಧಿಕಾರಿಗಳ ಮೇಲಿದೆ. ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸುವಾಗ ರೈತರಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿ ಸ್ಥಳೀಯವಾಗಿ ವಾಸ್ತವ ತಿಳಿದುಕೊಂಡು ರೂಪಿಸುವುದು ಮುಖ್ಯವಾಗಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ 49 ಏತ ನೀರಾವರಿ ಯೋಜನೆಗಳಿದ್ದು, ಅವುಗಳಲ್ಲಿ 37 ಪೂರ್ಣವಾಗಿ ಕಾರ್ಯನಿರತವಾಗಿರುತ್ತದೆ, ಉಳಿದ 6 ನಿಷ್ಕ್ರಿಯವಾಗಿವೆ. ಜೊತೆಗೆ 6 ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ನಿಷ್ಕ್ರಿಯಗೊಂಡಿರುವ ಏತ ನೀರಾವರಿ ಸರಿಪಡಿಸಲು ಯೋಜನೆ ರೂಪಿಸಿಕೊಂಡು ಕಾರ್ಯಗತಗೊಳಿಸಬೇಕು’ ಎಂದು ತಿಳಿಸಿದರು.

‘ಸ್ಥಳೀಯವಾಗಿ ನೀರಾವರಿ ಸಹಕಾರ ಸಂಘಗಳನ್ನು ಚುರುಕುಗೊಳಿಸಬೇಕು. ಅದೇರೀತಿ ರೈತರು ಹೆಚ್ಚು ತೊಡಗಿಸಿಕೊಂಡಿರುವ ನೀರನ್ನು ಸಂರಕ್ಷಿಸುವ ಬಗ್ಗೆಯೂ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಅಧಿಕಾರಿಗಳು ರೂಪಿಸಿಕೊಳ್ಳಬೇಕು. ಇದಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದರು.

‘ಮಳವಳ್ಳಿ ತಾಲ್ಲೂಕಿನ ಭೀಮ ಜಲಾಶಯ ಕೆರೆ ಸೇರಿದಂತೆ ಕೆರೆಗಳ ಅಭಿವೃದ್ಧಿಗೆ ಭೂಸ್ವಾಧೀನ ಹಾಗೂ ವಿವಿಧ ಕೆಲಸಗಳು ಕೈಗೊಳ್ಳಬೇಕಿದೆ. ತೆರೆದ ಕೆನಲ್ ಕೆಲಸ ನಡೆಸಿದರೆ ಮುಂದೆ ನೀರು ಡ್ರೈಲ್ಯಾಂಡ್(ಒಣ ಭೂಮಿ) ತಲುಪಲು ಕಷ್ಟಕರ ವಾಗುತ್ತದೆ, ಈ ರೀತಿ ಆಗದಂತೆ ಎಚ್ಚರ ವಹಿಸುವ ಮೂಲಕ ಗಮನದಲ್ಲಿಟ್ಟುಕೊಂಡು ರೈತರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳಿ’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಮಾತನಾಡಿ, ‘ಜಿಲ್ಲೆಯ ಕೆರೆ ಸಂರಕ್ಷಣೆ ಕುರಿತು ನಿಯಮಿತವಾಗಿ ಸಭೆ ನಡೆಸಿ, ಕೆರೆ ಒತ್ತುವರಿ ತೆರವುಗೊಳಿಸುವ ಮೂಲಕ ಅವುಗಳ ಸುತ್ತ ತಂತಿ ಬೇಲಿ ಮಾಡಲು ಚರ್ಚಿಸಲಾಗುತ್ತಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲೆಯಲ್ಲಿವೆ 49 ಏತ ನೀರಾವರಿ ಯೋಜನೆ 6 ಯೋಜನೆಗಳು ನಿಷ್ಕ್ರಿಯ ನೀರಾವರಿ ಸಹಕಾರ ಸಂಘಗಳನ್ನು ಚುರುಕುಗೊಳಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT