ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪ ಕಾಲಿಗೆರೆಗಿದ ಜೆಡಿಎಸ್‌ ಶಾಸಕ

ಆದಿಚುಂಚನಗಿರಿಯಲ್ಲಿ ಹುಣ್ಣಿಮೆ ಪೂಜೆ ನೆರವೇರಿಸಿದ ಬಿ.ಎಸ್‌.ಯಡಿಯೂರಪ್ಪ
Last Updated 12 ಡಿಸೆಂಬರ್ 2019, 12:24 IST
ಅಕ್ಷರ ಗಾತ್ರ

ನಾಗಮಂಗಲ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕ್ರೀಡಾಕೂಟ ಉದ್ಘಾಟಿಸಲು ಗುರುವಾರ ಆದಿಚುಂಚನಗಿರಿಗೆ ಭೇಟಿ ನೀಡಿದ್ದ ವೇಳೆ ಜೆಡಿಎಸ್‌ ಶಾಸಕ ಸುರೇಶ್‌ಗೌಡ ಮುಖ್ಯಮಂತ್ರಿ ಕಾಲಿಗೆ ನಮಸ್ಕರಿಸಿ ಅಚ್ಚರಿ ಮೂಡಿಸಿದರು.

ಅತಿಥಿಗಳಿಗೆ ಸ್ವಾಗತ ಕೋರುವ ಸಂದರ್ಭದಲ್ಲಿ ಸುರೇಶ್‌ಗೌಡ ಮುಖ್ಯಮಂತ್ರಿ ಕಾಲಿಗೆರಗಿದರು. ವೇದಿಕೆಯಲ್ಲಿದ್ದ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಆರ್‌.ಅಶೋಕ್‌, ಶಾಸಕ ಕೆ.ಸಿ.ನಾರಾಯಣಗೌಡ ಮುಂತಾದವರ ಮೊಗದಲ್ಲಿ ಆಶ್ಚರ್ಯ ಮೂಡಿತು. ನಂತರ ಮುಖ್ಯಮಂತ್ರಿ ವಾಪಸ್‌ ತೆರಳುವ ಸಂದರ್ಭದಲ್ಲೂ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಈ ಕುರಿತು ಪ್ರತಿಕ್ರಿಯಿಸಿದ ಸುರೇಶ್‌ಗೌಡ, ‘ತಂದೆ ಸಮಾನರಾದ ಬಿ.ಎಸ್‌.ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೇನೆ. ಆ ಜಾಗದಲ್ಲಿ ಸಿದ್ದರಾಮಯ್ಯ ಅವರಿದ್ದರೂ ಹೀಗೆಯೇ ಮಾಡುತ್ತಿದ್ದೆ. ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರುವ ಯಾವುದೇ ಉದ್ದೇಶ ನನ್ನಲ್ಲಿ ಇಲ್ಲ. ಹಿಂದೆ ಅವಕಾಶ ಬಂದಿತ್ತು, ನಾನು ಅದನ್ನು ನಿರಾಕರಿಸಿದ್ದೆ. ಈಗ ಅವರಿಗೆ ಯಾರ ಅವಶ್ಯಕತೆಯೂ ಇಲ್ಲ. ಕೆ.ಆರ್‌.ಪೇಟೆ ಶಾಸಕ ನಾರಾಯಣಗೌಡ ಹಾಗೂ ನಾನು ವೈಯಕ್ತಿಕವಾಗಿ ಸ್ನೇಹಿತರು’ ಎಂದು ಹೇಳಿದರು.

ಮುಖ್ಯಮಂತ್ರಿ ಹುಣ್ಣಿಮೆ ಪೂಜೆ: ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಹುಣ್ಣಿಮೆ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರದಲ್ಲೇ ಪ್ರಸಾದ ಸ್ವೀಕರಿಸಿದ ಅವರು ಸ್ವಾಮೀಜಿ ಜೊತೆ ಕೆಲಕಾಲ ಮಾತುಕತೆ ನಡೆಸಿದರು.

ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅಮಾವಾಸ್ಯೆ ದಿನಗಳಂದು ಮಠಕ್ಕೆ ಭೇಟಿ ನೀಡಿ ಅಮಾವಾಸ್ಯೆ ಪೂಜೆ ನೆರವೇರಿಸಿದ್ದರು. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಹುಣ್ಣಿಮೆ ಪೂಜೆ ನೆರವೇರಿಸಿದರು.

ಮುಖ್ಯಮಂತ್ರಿ ತೆರಳಿದ ಬಳಿಕ ಹುಣಸೂರು ಶಾಸಕ ಎಚ್‌.ಪಿ.ಮಂಜುನಾಥ್‌ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT