ಮದ್ದೂರು: ಜಿಲ್ಲಾ ಹಾಲು ಒಕ್ಕೂಟದಲ್ಲಿ ಈ ಹಿಂದಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಮೆಗಾ ಡೈರಿ ಹಗರಣ ಮಾಡಿದ್ದವರನ್ನು ಈ ಬಾರಿ ನಾಮ ನಿರ್ದೇಶನ ಮಾಡಿರುವುದನ್ನು ವಿರೋಧಿಸಿರುವ ಕಾಂಗ್ರೆಸ್ ಮುಖಂಡ ಹಾಗೂ ಗೆಜ್ಜಲಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಹರೀಶ್ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನ್‌ಮುಲ್‌ನ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿರುವ ಕದಲೂರು ರಾಮಕೃಷ್ಣ ಅವರು, ಈ ಹಿಂದೆ ಮನ್‌ಮುಲ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಮೆಗಾ ಡೈರಿ ಹಗರಣ ನಡೆದಿತ್ತು ಎಂದರು.
ಅಷ್ಟೇ ಅಲ್ಲದೆ ಅಕ್ರಮ ನೇಮಕಾತಿಯೂ ಕೂಡ ಕದಲೂರು ರಾಮಕೃಷ್ಣರವರೇ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ನಡೆದಿತ್ತು, ಇದರ ಜೊತೆಗೆ ಹಾಲಿಗೆ ನೀರು ಬೆರೆಸುವ ಅಕ್ರಮ ಕೂಡಾ ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ನಡೆಯುತ್ತಿತ್ತಾದರೂ ಅದು ಬೆಳಕಿಗೆ ಬಂದಿದ್ದು ಮಾತ್ರ ಈಗಿರುವ ಆಡಳಿತ ಮಂಡಳಿಯ ಅವಧಿಯಲ್ಲಿ ಎಂದು ಆರೋಪಿಸಿದರು.
ಇವುಗಳ ಜೊತೆಗೆ ತಮ್ಮ ಅವಧಿಯಲ್ಲಿ ನೇಮಕಾತಿ ವಿಷಯದಲ್ಲಿ ತಮ್ಮ ಹತ್ತಿರದ ಸಂಬಂಧಿಗಳಾದ ಇಬ್ಬರಿಗೆ ನಕಲಿ ಅಂಕಪಟ್ಟಿ ಸೃಷ್ಟಿಸಿ ಹುದ್ದೆಯನ್ನು ನೀಡಿದ್ದರು. ಈ ಹಗರಣದ ತನಿಖೆ ಪ್ರಾರಂಭವಾಗುತ್ತಿದ್ದಂತೆ ಈ ಇಬ್ಬರು ಅಲ್ಲಿಂದ ಕೆಲಸ ಬಿಟ್ಟು ಹೋದರು ಎಂದು ತಿಳಿಸಿದರು
ಕದಲೂರು ರಾಮಕೃಷ್ಣ ರವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮೆಗಾ ಡೈರಿ ವಿಷಯದಲ್ಲಿ ನಡೆದಿದ್ದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಂದಿನ ಆಡಳಿತ ಮಂಡಳಿಯಿಂದ ₹72 ಕೋಟಿ ಹಣವನ್ನು ಮರುಪಾವತಿ ಮಾಡಬೇಕೆಂದು ಹೈಕೋರ್ಟ್ ಆದೇಶವನ್ನು ಮಾಡಿತ್ತು ಎಂದರು.
ಆ ಪ್ರಕರಣ ಇನ್ನೂ ಕೂಡ ಮುಗಿದಿಲ್ಲ ಹಾಗೂ ಇಷ್ಟೆಲ್ಲಾ ಭ್ರಷ್ಟಾಚಾರಗಳು ಇವರ ಅವಧಿಯಲ್ಲೇ ನಡೆದಿದ್ದರೂ ಮತ್ತೆ ಇವರನ್ನು ಮನ್‌ಮುಲ್ ಗೆ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆ ಮಾಡಿರುವುದು ಖಂಡನೀಯ ಎಂದರು. ಅಷ್ಟೇ ಅಲ್ಲದೇ ಪ್ರಸ್ತುತ ಕೆಪಿಸಿಸಿ ಸದಸ್ಯರು, ಮದ್ದೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಹ ಇವರೇ ಆಗಿದ್ದು, ನಾಮ ನಿರ್ದೇಶನ ಮಾಡುವ ಅಗತ್ಯವಿರಲಿಲ್ಲ ಎಂದರು.
ಈಗಲಾದರೂ ಯಾವುದಾದರೂ ಒಂದು ಹುದ್ದೆಯನ್ನು ಇಟ್ಟುಕೊಂಡು ಉಳಿದ ಹುದ್ದೆಗಳಿಗೆ ತಕ್ಷಣ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿರುವ ಇತರರಿಗೂ ಅವಕಾಶ ನೀಡಲಿ ಎಂದು ಹರೀಶ್ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.