ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಒಡೆದ ಮನಸ್ಸು ಒಂದುಗೂಡಿಸುವ ಅನಿವಾರ್ಯತೆ: ಡಾ.ಲೀಲಾ ಅಪ್ಪಾಜಿ

Last Updated 6 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅದ್ಯಾಪಕಿ, ವಿಶಿಷ್ಟ ಲೇಖಕಿಯಾಗಿ ಗುರುತಿಸಿಕೊಂಡಿರುವ ಡಾ.ಲೀಲಾ ಅಪ್ಪಾಜಿ ಅವರು ಕ್ಯಾಮೆರಾ ಕಣ್ಣಿನ ಮೂಲಕ ಪಕ್ಷಗಳ ಜೊತೆ ಭಾವ ಸಂವಾದ ನಡೆಸಿದವರು. ಭಾರದ ಕ್ಯಾಮೆರಾ ಹೊತ್ತು ಕಾಡು–ಮೇಡು ಸುತ್ತಿ ಹಕ್ಕಿಗಳ ಹಾಜರಾತಿಯನ್ನು ಹೆಕ್ಕಿ ತಂದವರು. ಕಾವ್ಯದ ಜೊತೆ ಪಕ್ಷಿಗಳ ಭಾವನೆ ಬೆಸೆದವರು. ನಿವೃತ್ತ ಬದುಕಿನಲ್ಲೂ ಉತ್ಸಾಹದ ಚಿಲುಮೆಯಾದವರು, ಯುವಜನರಿಗೆ ಸ್ಪೂರ್ತಿಯಾದವರು.

35 ವರ್ಷಕ್ಕೂ ಹೆಚ್ಚು ಕಾಲ ಕನ್ನಡ ಅಧ್ಯಾಪಕಿಯಾಗಿ ವಿದ್ಯಾರ್ಥಿಗಳ ಮನದಲ್ಲಿ ಆಪ್ತವಾದ ಮುದ್ರೆಯೊತ್ತಿರುವ ಲೀಲಾ ಅಪ್ಪಾಜಿ ಅವರು ದುದ್ದ ಗ್ರಾಮದಲ್ಲಿ ಡಿ.7ರಂದು ನಡೆಯಲಿರುವ ಮಂಡ್ಯ ತಾಲ್ಲೂಕು 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಪದವಿ ಅಲಂಕರಿಸುತ್ತಿದ್ದಾರೆ. ಲೀಲಾ ಅಪ್ಪಾಜಿ ಸಮ್ಮೇಳನಾಧ್ಯಕ್ಷರು ಎಂಬ ಕಾರಣಕ್ಕೆ ಸಮ್ಮೇಳನ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಸಮ್ಮೇಳನಕ್ಕೆ ಬರುತ್ತಿರುವ ದೊಡ್ಡ ಪ್ರತಿಕ್ರಿಯೆಯನ್ನು ಕಂಡರೆ ಇದು ತಾಲ್ಲೂಕು ಸಮ್ಮೇಳನದಂತೆ ಕಾಣುತ್ತಿಲ್ಲ. ಸಮ್ಮೇಳನದಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಗ್ರಾಮದಲ್ಲಿ ವೈಭವ ಮನೆಮಾಡಿದೆ. ಲೀಲಾ ಅಪ್ಪಾಜಿ ಅವರ ವಿದ್ಯಾರ್ಥಿ ಸಮೂಹ, ಸಾಹಿತ್ಯ ಒಡನಾಡಿಗಳು, ಕ್ಯಾಮೆರಾ– ಪಕ್ಷ ಪ್ರೇಮಿಗಳು ಭಾಗವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಜಾವಾಣಿ ಡಾ.ಲೀಲಾ ಅಪ್ಪಾಜಿ ಅವರ ಜೊತೆ ಮಾತನಾಡಿದೆ.

* ಸಮ್ಮೇಳನದಲ್ಲಿ ಪಕ್ಷಿಗಳೂ ಭಾಗವಹಿಸುತ್ತವೆಯೇ?
ನಿವೃತ್ತಿಯ ನಂತರ ವಿದ್ಯಾರ್ಥಿಗಳ ಜೊತೆಗಿನ ನನ್ನ ಒಡನಾಟ ನಿಂತಿಲ್ಲ. ಆದರೂ ಈಗ ಪಕ್ಷಿಗಳೇ ನನ್ನ ಒಡನಾಡಿಗಳಾಗಿವೆ. ಅವುಗಳೊಂದಿಗೆ ನಾನು ಭಾವ ಸಂವಾದ ನಡೆಸುತ್ತೇನೆ, ಹಕ್ಕಿಗಳ ಜೊತೆ ಜಗಳಕ್ಕಿಳಿಯುತ್ತೇನೆ, ಅವುಗಳ ಜೊತೆಯಲ್ಲಿ ಪ್ರಯಾಣ ಮಾಡುತ್ತೇನೆ. ನನ್ನ 35 ವರ್ಷಗಳ ಬೋಧನಾ ವೃತ್ತಿ, ಸಾಹಿತ್ಯದ ಒಡನಾಟ ಪಕ್ಷಿಗಳ ಜೊತೆಗೆ ವಿಭಿನ್ನವಾಗಿ ಬೆಸೆದುಕೊಳ್ಳುವಂತೆ ಮಾಡಿದೆ. ಮಂಡ್ಯ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ನಾನಿದ್ದೇನೆ ಎಂದರೆ ಪಕ್ಷಿಗಳೂ ಇರಲೇಬೇಕಲ್ಲವೇ!

* ಸಾಹಿತ್ಯ ಒಡನಾಟ– ಪಕ್ಷ ಪ್ರಪಂಚದಲ್ಲಿ ನೀವು ಕಂಡಿದ್ದೇನು?
ಸಾಹಿತ್ಯದ ಒಡನಾಟವು ಪಕ್ಷಿ ಪ್ರಪಂಚದ ಬಗ್ಗೆ ವಿಭಿನ್ನವಾಗಿ ಚಿಂತಿಸುವಂತೆ ಮಾಡಿದೆ. ಕಾಡುಮೇಡು ಅಲೆದು ಛಾಯಾಚಿತ್ರಗಳನ್ನು ಕ್ಲಿಕ್ಕಿಸುವುದಷ್ಟೇ ನನ್ನ ಕೆಲಸವಾಗಿಲ್ಲ. ನನ್ನ ಹಾಗೂ ಪಕ್ಷಿಗಳ ನಡುವೆ ಭಾವದ ಬೆಸುಗೆ ಇದೆ. ಈ ಕುರಿತಂತೆ ‘ಪಕ್ಷಿ ಹಾಜರಾತಿ’ ಎಂಬ ಹೊಸ ಪುಸ್ತಕ ಸಿದ್ಧಗೊಳ್ಳುತ್ತಿದೆ. ಅದ್ಯಾಪಕಿಯಾಗಿದ್ದಾಗ ವಿದ್ಯಾರ್ಥಿಗಳ ಹಾಜರಾತಿ ತೆಗೆದುಕೊಳ್ಳುತ್ತಿದೆ, ಈಗ ಪಕ್ಷಿಗಳ ಹಾಜಾರಾತಿ ಪಡೆಯುತ್ತಿದ್ದೇನೆ.

* ಹಿಂದಿ ಹೇರಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ, ನಿಮ್ಮ ನಿಲುವೇನು?
ಹಿಂದಿ ಎಂದಿಗೂ ನಮ್ಮ ರಾಷ್ಟ್ರಭಾಷೆಯಾಗಿಲ್ಲ. ಇತರ ಭಾಷೆಗಳಂತೆ ಅದೂ ಒಂದು ಭಾಷೆ. ಉತ್ತರದಲ್ಲಿ ಹೆಚ್ಚಿನವರು ಮಾತನಾಡುತ್ತಾರೆ ಎಂಬ ಕಾರಣಕ್ಕೆ ಹಿಂದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಕುವೆಂಪು ಅವರು ‘ಹಿಂದಿಯನ್ನು ಕಣ್ಣಿಗೆ ಚುಚ್ಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದಿ ಮಾತನಾಡುವವರ ಕೈಯಲ್ಲಿ ಅಧಿಕಾರ ಇರಬಹುದು, ಆದರೆ ಅವರು ಹಿಂದಿ ವ್ಯವಹರಿಸಿ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ನಾವು ಹಿಂದಿಯ ದ್ವೇಷಿಗಳಲ್ಲ, ಜ್ಞಾನಕ್ಕಾಗಿ ಯಾವುದೇ ಭಾಷೆ ಕಲಿಯಲು ಅಡ್ಡಿ ಇಲ್ಲ.‌

* ಮಂಡ್ಯ ಮಣ್ಣಿನ ಜೊತೆಗಿದ್ದ ಹೋರಾಟ ಗುಣ, ಸಾಹಿತ್ಯ ಗುಣ ಕುಸಿಯುತ್ತಿದೆಯೇ?
ಬದಲಾವಣೆಗಳ ಹಿಂದೆ ಪರಿಸ್ಥಿತಿ, ಮನಸ್ಥಿತಿ ಇರುತ್ತದೆ. ನಾನು ರೈತಸಂಘದ ಹೋರಾಟಗಳನ್ನು ಕಂಡಿದ್ದೇನೆ, ವರುಣಾ, ಕಾವೇರಿ ಪ್ರತಿಭಟನೆಗಳನ್ನು ನೋಡಿದ್ದೇನೆ. ಜಿಲ್ಲೆಯ ಪ್ರತಿ ಸದಸ್ಯ ಹೋರಾಟಗಳಿಗೆ ಸ್ಪಂದಿಸುವ ರೀತಿ ಅನನ್ಯವಾಗಿತ್ತು. ಕಾಲದ ಪರಿಣಾಮದಿಂದಾಗಿ ಇಂದು ಹಲವು ಬದಲಾವಣೆಗಳಾಗಿವೆ. ಒಡೆದ ಮನಸ್ಸುಗಳನ್ನು ಬೆಸೆಯುವ ಕೆಲಸ ಇಂದಿನ ಅನಿವಾರ್ಯವಾಗಿದೆ.

*ನುಡಿಜಾತ್ರೆಗೆ ರಾಜಕಾರಣಿಗಳ ಹಂಗೇಕೆ?
ಕನ್ನಡ ಸಾಹಿತ್ಯ ಪ್ರಭುತ್ವದ ಜೊತೆಜೊತೆಯಲ್ಲೇ ಬೆಳೆದುಕೊಂಡು ಬಂದಿದೆ, ಸಮಾಜ ಹಾಗೂ ಪ್ರಭುತ್ವ ಬೇರೆಬೇರೆಯಲ್ಲ. ಸಾಹಿತಿ ಸ್ವಯಂತ್ರವಾಗಿ ಚಿಂತಿಸಬಲ್ಲ, ಆದರೆ ಸಾಹಿತ್ಯ ಜನಸಮುದಾಯವನ್ನು ತಲುಪಬೇಕಾದರೆ ಪ್ರಭುತ್ವದ ಸಹಾಯ ಬೇಕು. ರಾಜಕಾರಣಿಗಳ ವಿಚಾರವನ್ನು ಒಪ್ಪುವುದು ಬಿಡುವುದು ಬೇರೆ ವಿಷಯ. ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುತ್ವವನ್ನೂ ಒಳಗೊಳ್ಳುವುದು ಉತ್ತಮ.

* ಜಾಲತಾಣಗಳ ಯುಗದಲ್ಲಿ ‘ಪುಸ್ತಕ ಓದು’ವನ್ನು ಸಂರಕ್ಷಿಸುವುದು ಹೇಗೆ?
ಪುಸ್ತಕಗಳ ಬಗ್ಗೆ ರುಚಿ ಹತ್ತಿಸುವ ಕೆಲಸ ಮಾಡಬೇಕು. ಓದುಗರು ಕಡಿಮೆಯಾಗಿರಬಹುದು, ಆದರೆ ಲೇಖಕರು, ಪುಸ್ತಕಗಳ ಸಂಖ್ಯೆ ಕಡಿಮೆಯಾಗಿಲ್ಲ. ಓದುಗರ ಆದ್ಯತೆಗಳ ಅನುಸಾರ ಪುಸ್ತಕಗಳು ಬಂದರೆ ಜನ ತಾವಾಗಿಯೇ ಸ್ವಯಂ ಪ್ರೇರಣೆಯಿಂದ ಓದುತ್ತಾರೆ. ಎಷ್ಟೋ ಸಾಹಿತಿಗಳು ಇಂದು ಬದುಕಿಲ್ಲ, ಅದರೆ ಅವರ ಪುಸ್ತಕಗಳು ಮರುಮುದ್ರಣ ಕಾಣುತ್ತಲೇ ಇವೆ. ಹೀಗಾಗಿ ಓದುಗರಿಗೆ ರುಚಿ ಹತ್ತಿಸುವ ಕೆಲಸ ಇಂದು ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT