ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ, ಧರ್ಮದ ಪರ ಇರುವ ಬಿಜೆಪಿಗೆ ಅಧಿಕಾರ: ನಿರ್ಮಲ್‌ಕುಮಾರ್‌ ಸುರಾನ

ಶಕ್ತಿ ಕೇಂದ್ರದ ಉದ್ಘಾಟನೆ, ಬಿಜೆಪಿ ಕಾರ್ಯಕರ್ತರ ಸಭೆ
Last Updated 31 ಜನವರಿ 2023, 14:05 IST
ಅಕ್ಷರ ಗಾತ್ರ

ಮಂಡ್ಯ: ‘ದೇಶ, ಧರ್ಮ, ಸಮಾಜಕ್ಕೆ ಕೆಲಸ ಮಾಡುವ ಪಕ್ಷಕ್ಕೆ ಮತ ಹಾಕುವುದಾಗಿ ಜನರು ಶಪಥಗೈಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸಗಳ ಪರವಾಗಿ ನಿಲ್ಲಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನ ಕರೆ ನೀಡಿದರು.

ನಗರದ ಗುತ್ತಲು ಬಡಾವಣೆಯಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 6ನೇ ಮಹಾಶಕ್ತಿ ಕೇಂದ್ರ ಉದ್ಘಾಟನೆ, ಕಾರ್ಯಕರ್ತರ ಸಭೆ ಮತ್ತು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ವಿಪಕ್ಷಗಳಿಂದ ಸಾಧ್ಯವಿಲ್ಲದ್ದನ್ನು ಬಿಜೆಪಿ ಮಾಡಿ ತೋರಿಸಿದೆ. ಬ್ಯಾಂಕ್‌ನಲ್ಲಿ ಖಾತೆ ತೆರೆಯದೇ ಇದ್ದ ಬಡವರಿಗೆ ಖಾತೆ ತೆರೆಯುವ ಮೂಲಕ ಅವರಿಗೆ ಅನುಕೂಲ ಮಾಡಿಕೊಟ್ಟಿದೆ. ಜನಪರ ಯೋಜನೆಗಳನ್ನು ಮಾಡಿರುವ ನಮ್ಮ ಬಿಜೆಪಿ ಸರ್ಕಾರ ರಾಷ್ಟ್ರ ಹಾಗೂ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳುವ ಲಕ್ಷಣಗಳು ಅಧಿಕವಾಗಿವೆ, ಕಾರ್ಯಕರ್ತರು ಮತ್ತು ಮುಖಂಡರು ಹೆಚ್ಚು ಆಸಕ್ತಿ ವಹಿಸಿದ್ದೇ ಆದರೆ ಏಳೂ ತಾಲ್ಲೂಕಿನಲ್ಲಿಯೂ ಅಧಿಕಾರ ಹಿಡಿಯುತ್ತದೆ. ರಾಜ್ಯದ ಬಹುತೇಕ ದೇವಾಲಯಗಳು ಮುಜರಾಯಿ ಇಲಾಖೆ ವಶಯದಲ್ಲಿವೆ, ಇದು ನಮ್ಮ ಹಿಂದೂ ಧರ್ಮಕ್ಕೆ ಮಾಡಿದ ಅನ್ಯಾಯವಾಗಿದೆ. ಮಸೀದಿ, ಚರ್ಚ್‌ಗಳಲ್ಲಿ ಏಕೆ ಈ ಕಾನೂನು ಮಾಡಿಲ್ಲ’ ಎಂದು ಪ್ರಶ್ನಿಸಿದರು.

‘ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. 2004ಕ್ಕಿಂತ ಮುನ್ನ ಬ್ಯಾಂಕ್ ಖಾತೆ ಹೊಂದಿದ್ದವರು ಕೆಲವೇ ಮಂದಿ ಇದ್ದರು. ಬ್ಯಾಂಕ್ ಒಳಗೆ ಹೋಗಲೂ ಯೋಗ್ಯತೆ ಇಲ್ಲದಂತೆ ನಮ್ಮನ್ನು ಪರಿಗಣಿಸಿದ್ದರು. ಆದರೆ, ಕೇಂದ್ರದಲ್ಲಿ ನರೇಂದ್ರಮೋದಿ ಸರ್ಕಾರ ಆಡಳಿತ ಹಿಡಿಯುತ್ತಿದ್ದಂತೆ ಸಾಮಾನ್ಯ ಜನರಿಗೂ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು’ ಎಂದರು.

‘ಸರ್ಕಾರ ಫಲಾನುಭವಿಗಳಿಗೆ ₹100 ಕೊಟ್ಟರೆ, ಕಟ್ಟ ಕಡೆಯ ವ್ಯಕ್ತಿಗೆ ತಲುಪುತ್ತಿದ್ದುದು ಕೇವಲ ₹15 ಮಾತ್ರ ಎಂದು ಸ್ವತಃ ರಾಜೀವ್‌ಗಾಂಧಿ ಅವರೇ ಹೇಳಿದ್ದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಣವನ್ನು ದಲ್ಲಾಳಿಗಳು ತಿಂದು ಹಾಕುತ್ತಿದ್ದರು. ಇದನ್ನು ತಡೆಗಟ್ಟುವ ಉದ್ದೇಶದಿಂದ ಬ್ಯಾಂಕ್ ಖಾತೆಗೆ ಆಧಾರ್ ಸಂಪರ್ಕ ಮಾಡಲಾಯಿತು. ಈಗ ಫಲಾನುಭವಿಗಳಿಗೆ ಹಣ ನೇರವಾಗಿ ತಲುಪುತ್ತಿದೆ’ ಎಂದರು.

‘ಕಾಂಗ್ರೆಸ್ ಪಕ್ಷ ಒಂದೊಂದಾಗಿ ಎಲ್ಲ ರಾಜ್ಯಗಳನ್ನೂ ಕಳೆದುಕೊಳ್ಳುತ್ತಿದೆ. ಈಗ ಕೇವಲ ಮೂರ್ನಾಲ್ಕು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಇಂತಹ ಪಕ್ಷಗಳು ಜನರ ಒಳಿತಿನ ಬಗ್ಗೆ ಚಿಂತನೆ ಮಾಡುವುದಿಲ್ಲ. ಬದಲಿಗೆ ಕುಟುಂಬದ ಬಗ್ಗೆಯೇ ಚಿಂತನೆ ನಡೆಸುತ್ತವೆ. ಬಿಜೆಪಿ ಸಾಮಾನ್ಯ ಜನರ ಬಗ್ಗೆ ಯೋಜನೆ ರೂಪಿಸಲು ಚಿಂತಿಸುತ್ತಿದೆ. ಆದ್ದರಿಂದಲೇ ಬದಲಾವಣೆಯ ಗಾಳಿ ಬೀಸುತ್ತಿದೆ’ ಎಂದರು.

ಮುಖಂಡರಾದ ಚಂದಗಾಲು ಶಿವಣ್ಣ, ಅಶೋಕ್ ಜಯರಾಂ, ಪ.ನಾ.ಸುರೇಶ, ಡಾ.ಸದಾನಂದ, ವಿವೇಕ್, ಎಚ್.ಆರ್.ಅರವಿಂದ್, ಚಾಮರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT