ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಬಿಜೆಪಿಗೆ ಯುವ ಮುಖಂಡರು ಶಕ್ತಿ ತುಂಬುವರೇ?

ಶ್ರೀರಂಗಪಟ್ಟಣದಲ್ಲಿ ಸಚ್ಚಿದಾನಂದ, ನಾಗಮಂಗಲದಲ್ಲಿ ಫೈಟರ್‌ ರವಿಗೆ ಬಿಜೆಪಿ ಸ್ವಾಗತ
Last Updated 29 ನವೆಂಬರ್ 2022, 6:52 IST
ಅಕ್ಷರ ಗಾತ್ರ

ಮಂಡ್ಯ: ಜೆಡಿಎಸ್‌, ಕಾಂಗ್ರೆಸ್‌ ಕೋಟೆ ಎಂದೇ ಬಿಂಬಿತವಾಗಿರುವ ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ. ಮುಂದಿನ ವಿಧಾನ ಸಭಾ ಚುನಾವಣೆಯ ಗೆಲುವನ್ನು ಗುರಿಯಾಗಿಸಿಕೊಂಡಿರುವ ಪಕ್ಷದ ವರಿಷ್ಠರು ಯುವ ಮುಖಂಡರಿಗೆ ಮಣೆ ಹಾಕುತ್ತಿರುವುದು ಕುತೂಹಲ ಮೂಡಿಸಿದೆ.

ಸುಮಲತಾ ಅವರ ಕಟ್ಟಾ ಬೆಂಬಲಿಗ ಸಚ್ಚಿದಾನಂದ ಶ್ರೀರಂಗಪಟ್ಟಣ ಕ್ಷೇತ್ರ ದಿಂದ, ಕಳೆದೆರಡು ವರ್ಷಗಳಿಂದ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಹಲವು ಸೌಲಭ್ಯ ಒದಗಿಸಿರುವ ಫೈಟರ್‌ ರವಿ (ಮಲ್ಲಿಕಾರ್ಜುನ್‌) ನಾಗಮಂಗಲ ಕ್ಷೇತ್ರದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿ ಗಳಾಗಿದ್ದು ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇತರ ಕ್ಷೇತ್ರಗಳಲ್ಲೂ ಯುವಕರೇ ಟಿಕೆಟ್ ಆಕಾಂಕ್ಷಿಯಾಗಿದ್ದು ಇವರು ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿ ತುಂಬುವರೇ ಎಂಬ ಚರ್ಚೆ ಆರಂಭವಾಗಿದೆ.

ಕೆ.ಆರ್‌.ಪೇಟೆ ಉಪ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಸಿ.ನಾರಾಯಣಗೌಡ ಅವರು ಮೊದಲ ಬಾರಿಗೆ ಗೆಲ್ಲುವ ಮೂಲಕ ಬಿಜೆಪಿ ಖಾತೆ ತೆರೆದಿದ್ದರು. ಸ್ವಾತಂತ್ರ್ಯಾ ನಂತರ ನಡೆದ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಬಿಜೆಪಿ ವರಿಷ್ಠರು ಕೂಡ ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ, ಹೊಂದಾಣಿಕೆಯ ರಾಜಕಾರಣ ಬಹಿರಂಗವಾಗಿಯೇ ನಡೆಯುತ್ತಿತ್ತು.

ಆದರೆ, ಮುಂಬರುವ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿ ಸಿರುವ ಪಕ್ಷದ ವರಿಷ್ಠರು ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿ ದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಯುವಜನರಿಗೆ ಮಣೆ ಹಾಕುತ್ತಿದ್ದು ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳಿಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಪಿ. ಉಮೇಶ್‌ ನೇತೃತ್ವದಲ್ಲಿ ಕಾರ್ಯಸೂಚಿ ಸಿದ್ಧಗೊಳ್ಳುತ್ತಿದ್ದು ಯುವ ಶಕ್ತಿಗೆ ಆದ್ಯತೆ ದೊರೆಯುತ್ತಿದೆ.

ಮಂಡ್ಯ ಕ್ಷೇತ್ರದಲ್ಲಿ ಜಿಲ್ಲಾಧ್ಯಕ್ಷ ಉಮೇಶ್‌ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಜೊತೆಗೆ ಅಶೋಕ್‌ ಜಯರಾಮ್‌, ಲಕ್ಷ್ಮಿ ಅಶ್ವಿನ್‌ ಗೌಡ ಅವರೂ ಆಕಾಂಕ್ಷಿಗಳಾಗಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ಡಾ.ಇಂದ್ರೇಶ್‌ ಕಳೆದ ಮೂರು ವರ್ಷಗಳಿಂದ ವಿವಿಧ ಚಟುವಟಿಕೆ ನಡೆಸುತ್ತಿದ್ದು ಅವರೇ ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಮದ್ದೂರು ಕ್ಷೇತ್ರದಲ್ಲಿ ಮನ್‌ಮುಲ್‌ ನಿರ್ದೇಶಕ ಎಸ್‌.ಪಿ.ಸ್ವಾಮಿ, ಕದಲೂರು ಉದಯ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಇವರೆಲ್ಲರೂ ಯುವಜನರೇ ಆಗಿದ್ದು ಮುಂದಿನ ಚುನಾವಣೆಯಲ್ಲಿ ಸಾಂಪ್ರದಾಯಿಕ ಕಾಂಗ್ರೆಸ್‌, ಜೆಡಿಎಸ್‌ ಸರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಬಿಜೆಪಿ ಸಮಾರಂಭಗಳಿಗೆ ರಾಜ್ಯ ಮಟ್ಟದ ಮುಖಂಡರು, ಸಚಿವರ ದಂಡೇ ಹರಿದು ಬರುತ್ತಿದ್ದು ಮುಂಬರುವ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿದೆ.

ಕಳೆದ ಲೋಕಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿತ್ತು. ಕೆಪಿಸಿಸಿ ಸದಸ್ಯರಾಗಿದ್ದ ಸಚ್ಚಿದಾನಂದ ಬಹಿರಂಗವಾಗಿ ಸುಮಲತಾ ಅವರಿಗೆ ಬೆಂಬಲ ನೀಡಿದ್ದರು. ಹೀಗಾಗಿ ಅವರನ್ನು ಕೆಪಿಸಿಸಿ ಉಚ್ಛಾಟನೆ ಮಾಡಿತ್ತು. ನಂತರ ಅವರು ತಮ್ಮ ತಂದೆಯವರ ಹೆಸರಿನಲ್ಲಿ ಶಂಕರೇಗೌಡ ಚಾರಿಟಬಲ್‌ ಟ್ರಸ್ಟ್‌ ರಚಿಸಿ ವಿವಿಧ ಚಟುಟಿಕೆಯಲ್ಲಿ ತೊಡಗಿದ್ದಾರೆ.

ನಾಗಮಂಗಲ ಕ್ಷೇತ್ರದಲ್ಲಿ 150ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಶುದ್ಧ ನೀರಿನ ಘಟಕ ಸ್ಥಾಪಿಸಿರುವ ಪೈಟರ್‌ ರವಿ ಕಳೆದ 2 ವರ್ಷಗಳಿಂದ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯ ತಪಾಸಣೆ ಶಿಬಿರ, ಅಂಗವಿಲರಿಗೆ ಪರಿಕರ ವಿತರಣೆ, ದೇವಾಲಯ ಅಭಿವೃದ್ಧಿ ಮುಂತಾದ ಚಟುವಟಿಕೆ ನಡೆಸುತ್ತಿದ್ದಾರೆ.

‘ನನ್ನ ಹೆಸರಿನಲ್ಲೇ ಫೈಟ್‌ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗುತ್ತೇನೆ. ಚುನಾ ವಣೆ ಫಲಿತಾಂಶ ಏನೇ ಇರಲಿ, ಸೇವಾ ಕೆಲಸವನ್ನು ಮುಂದುವರಿಸುತ್ತೇನೆ’ ಎಂದು ರವಿ ಹೇಳಿದರು.

ಸಿನಿ ತಾರೆಯರ ರ‍್ಯಾಲಿ...
ಮುಂದಿನ ವಿಧಾನಸಭಾ ಚುನಾವಣೆಯ ಕಣ ಜಿಲ್ಲೆಯಾದ್ಯಂತ ಸಿನಿ ತಾರೆಯರ ರ್‍ಯಾಲಿಗೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈಚೆಗೆ ಶ್ರೀರಂಗಪಟ್ಟಣದಲ್ಲಿ ನಡೆದ ‘ಅಂಬಿ ಉತ್ಸವ’ದ ವೇಳೆ ನಟ ದರ್ಶನ್‌ ಅವರು ಸಚ್ಚಿದಾನಂದ ಪರ ಮೊದಲ ಹಂತದ ಮತಯಾಚನೆ ಮಾಡಿದ್ದಾರೆ. ಶ್ರೀರಂಗಪಟ್ಟಣ ಮಾತ್ರವಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಚಿತ್ರತಾರೆಯ ‘ಮತ ಮೆರವಣಿಗೆ’ ನಡೆಯುವ ಸಾಧ್ಯತೆ ದಟ್ಟವಾಗಿದೆ.

‘ದರ್ಶನ್‌ ಅವರು ನನ್ನ ಸಹೋದರ ಇದ್ದಂತಿದ್ದಾರೆ. ಎಂಥದ್ದೇ ಸಂದರ್ಭ ದಲ್ಲಿಯೂ ಅವರು ನನ್ನ ಜೊತೆ ನಿಲ್ಲುತ್ತಾರೆ’ ಎಂದು ಸಚ್ಚಿದಾನಂದ ಹೇಳಿದರು.

*

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿನ ಹೋರಾಟ ನಡೆಸಲಿದೆ. ಪಕ್ಷದ ವರಿಷ್ಠರು, ಸ್ಥಳೀಯ ಮುಖಂಡರ ಜೊತೆಗೂಡಿ ಒಟ್ಟಿನಿಂದ ಹೆಜ್ಜೆ ಇಡುತ್ತೇವೆ.
–ಸಿ.ಪಿ.ಉಮೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT